Mysore
19
clear sky

Social Media

ಶುಕ್ರವಾರ, 02 ಜನವರಿ 2026
Light
Dark

ಕೇರಳದಲ್ಲಿ ಭಾರೀ ಮಳೆ ಹಿನ್ನೆಲೆ: ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಹೆಚ್.ಡಿ.ಕೋಟೆ: ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಹೆಚ್.ಡಿ.ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಇಂದಿನ ಒಳಹರಿವು 11,269 ಕ್ಯೂಸೆಕ್ಸ್‌ಗಳಿಗೆ ಏರಿಕೆಯಾಗಿದೆ. ಜಲಾಶಯಕ್ಕೆ ಒಳಹರಿವು ಹೆಚ್ಚಾದಂತೆ ಹೊರಹರಿವನ್ನು ಕೂಡ ಹೆಚ್ಚು ಮಾಡಲಾಗಿದ್ದು, ಇಂದಿನ ಹೊರಹರಿವನ್ನು 1542 ಕ್ಯೂಸೆಕ್ಸ್‌ಗಳಿಗೆ ಏರಿಕೆ ಮಾಡಲಾಗಿದೆ. 84 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ಜಲಾಶಯದ ಈಗಿನ ನೀರಿನ ಮಟ್ಟ 70 ಅಡಿಗಳಿಗೆ ಏರಿಕೆಯಾಗಿದೆ.

ಮಳೆ ಹೀಗೆಯೇ ಮುಂದುವರಿದರೆ ಜಲಾಶಯ ಇನ್ನು ಕೆಲವೇ ದಿನಗಳಲ್ಲಿ ಭರ್ತಿಯಾಗಲಿದ್ದು, ಜಲಾಶಯದಿಂದ ಯಾವುದೇ ಕ್ಷಣದಲ್ಲಾದರೂ ಕಪಿನಾ ನದಿಗೆ ನೀರನ್ನು ಬಿಡಲಾಗುತ್ತದೆ. ಹೀಗಾಗಿ ಕಪಿಲಾ ನದಿ ಪಾತ್ರದಲ್ಲಿರುವ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಕಬಿನಿ ಜಲಾಶಯ ಭರ್ತಿಯತ್ತ ಸಾಗುತ್ತಿರುವುದರಿಂದ ರೈತರ ಮೊಗದಲ್ಲಿ ಸಂತಸ ಮನೆ ಮಾಡಿದ್ದು, ಈ ಬಾರಿಯೂ ನಾಲೆಗಳ ನೀರನ್ನು ನಂಬಿ ಉತ್ತಮ ಬೆಳೆ ಬೆಳೆಯಬಹುದು ಎಂದು ಅಂದಾಜಿಸಿದ್ದಾರೆ. ಕಬಿನಿ ಎಡದಂಡೆ ಹಾಗೂ ಬಲದಂಡೆ ನಾಲೆಗಳ ಮೂಲಕ ರೈತರು ಭತ್ತ ಬೆಳೆಯುವಲ್ಲಿ ಉತ್ಸುಕರಾಗಿದ್ದು, ಜಲಾಶಯ ಭರ್ತಿಯಾಗುವುದನ್ನೇ ಎದುರು ನೋಡುತ್ತಿದ್ದಾರೆ ಎನ್ನಲಾಗಿದೆ.

Tags:
error: Content is protected !!