Mysore
20
broken clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿ ಬಳಿಕ ನಟಿ ರಕ್ಷಿತಾ ಪ್ರೇಮ್‌ ದಂಪತಿ ಹೇಳಿದ್ದಿಷ್ಟು

ಬೆಂಗಳೂರು: ಹದಿನೈದು ಇಪ್ಪತ್ತು ದಿನಗಳಿಂದ ಆಗಿರುವುದು ದುರಾದೃಷ್ಟಕರ. ನಮಗೆ ಈ ಪ್ರಕರಣದಿಂದ ತೀವ್ರ ಬೇಸರವಾಗಿದೆ ಎಂದು ದರ್ಶನ್‌ ಪ್ರಕರಣ ಕುರಿತು ನಟಿ ರಕ್ಷಿತಾ ಪ್ರೇಮ್‌ ದಂಪತಿ ಬೇಸರ ವ್ಯಕ್ತಪಡಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ ಅವರನ್ನು ನೋಡಲು ನಟಿ ರಕ್ಷಿತಾ ಹಾಗೂ ಡೈರೆಕ್ಟರ್‌ ಪ್ರೇಮ್‌ ಅವರು ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದರು.

ಒಂದು ಗಂಟೆ ದರ್ಶನ್‌ ಜೊತೆ ಭೇಟಿ ಮುಗಿಸಿ ವಾಪಸ್‌ ಆದ ನಟರು, ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಕಳೆದ ಹದಿನೈದು-ಇಪ್ಪತ್ತು ದಿನದಿಂದ ಆಗಿರುವುದು ದುರಾದೃಷ್ಟಕರ. ನಮಗೆ ಈ ಪ್ರಕರಣದ ಬಗ್ಗೆ ಬೇಜಾರು ಇದೆ. ಪ್ರಕರಣ ನ್ಯಾಯಾಲಯದಲ್ಲಿದೆ. ನಾವು ಈ ಸಂದರ್ಭದಲ್ಲಿ ಪ್ರಕರಣದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

ಇನ್ನೂ ಜೈಲಿನಲ್ಲಿ ದರ್ಶನ್‌ ಜೊತೆ ನಡೆದ ಮಾತುಕತೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಅವರು, ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ. ಕಾನೂನಿಗಿಂತ ದೊಡ್ಡವರು ಯಾರೂ ಇಲ್ಲ ಎಂದು ನಿರ್ದೇಶಕ ಜೋಗಿ ಪ್ರೇಮ್‌ ಬೇಸರ ವ್ಯಕ್ತಪಡಿಸಿದರು.

ಇತ್ತ ಜೈಲಿನಲ್ಲಿರುವ ದರ್ಶನ್‌ರನ್ನು ನೋಡಲು ಜೈಲುವಾಸಿಗಳೇ ಹರಸಾಹಸ ಪಡುತ್ತಿದ್ದು, ಪದೇ ಪದೇ ಅನಾರೋಗ್ಯ ಸಮಸ್ಯೆ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿದಾಡುತ್ತಿದ್ದಾರೆ. ಹೀಗಾಗಿ ನಟ ದರ್ಶನ್‌ ಜೈಲು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದ್ದಾರೆ ಎನ್ನಲಾಗುತ್ತಿದೆ.

ನಟ ದರ್ಶನ್‌ ಜೈಲು ಸೇರಿದ ನಂತರ ಅವರ ಅಭಿಮಾನಿಗಳು, ಚಿತ್ರರಂಗದ ಗಣ್ಯರು ಜೈಲಿಗೆ ಬಂದು ಅವರನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ. ಚಿತ್ರರಂಗದ ಸಹೋದ್ಯೋಗಿಗಳು, ದರ್ಶನ್‌ ಅವರಿಂದ ನೆರವು ಪಡೆದವರು ಹಾಗೂ ಅಭಿಮಾನಿಗಳು ದರ್ಶನ್‌ ನೋಡಲು ಜೈಲಿನತ್ತ ಬರುತ್ತಿದ್ದಾರೆ.

Tags: