ಹೊಸದಿಲ್ಲಿ: 18 ನೇ ಲೋಕಸಭೆಯ ಅಧೀವೇಶನವು ಹಂಗಾಮಿ ಸ್ಪೀಕರ್ ಭರ್ತೃಹರಿ ಮಹತಾಬ್ ಅವರ ನೇತೃತ್ವದಲ್ಲಿ ಜೂನ್ 24 ರಂದು ಪ್ರಾರಂಭವಾಗಿದೆ. ಇಂದು(ಜೂ.26) ಅಧಿಕೃತವಾಗಿ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ ಆಯ್ಕೆಯಾಗಿದ್ದಾರೆ. ಆ ಮೂಲಕ ಓಂ ಬಿರ್ಲಾ ಅವರು ಸತತ ಎರಡನೇ ಬಾರಿಗೆ ಸ್ಪೀಕರ್ ಹುದ್ದೆ ಏರಿದ ಸಂಸದರಾಗಿದ್ದಾರೆ.
ಇಂದು ಹೊಸ ಸಭಾಧ್ಯಕ್ಷರನ್ನು ಸ್ವಾಗತಿಸುವ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪರಸ್ಪರ ಕೈಕುಲುಕಿ ಗಮನ ಸೆಳೆದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಂಸದ ಓಂ ಬಿರ್ಲಾ ಅವರನ್ನು ಸ್ಪೀಕರ್ ಆಗಿ ಆಯ್ಕೆಮಾಡುವ ಪ್ರಸ್ತಾಪವನ್ನು ಮೋದಿ ಮಂಡಿಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅನುಮೋದಿಸಿದರು. ಪ್ರಸ್ತಾಪಕ್ಕೆ ಧ್ವನಿ ಮತದ ಮೂಲಕ ಅನುಮೋದನೆ ದೊರಕಿತು.