Mysore
23
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಕೇರಳದ ವಯನಾಡಿನಲ್ಲಿ ಭಾರೀ ಮಳೆ; ಕಬಿನಿ ಜಲಾಶಯದ ಒಳಹರಿವಿನಲ್ಲಿ ಏರಿಕೆ

ಹೆಚ್.ಡಿ.ಕೋಟೆ: ಕೇರಳದ ವಯನಾಡಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ಕಳೆದ ಮೂರು ದಿನಗಳಿಂದ ಕೇರಳದ ವಯನಾಡು ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಕಬಿನಿ ಜಲಾಶಯ ಭರ್ತಿಯತ್ತ ಸಾಗಿದೆ. ಜಲಾಶಯದ ಇಂದಿನ ಒಳಹರಿವು 6 ಸಾವಿರ ಕ್ಯೂಸೆಕ್ಸ್‌ಗಳಾಗಿದ್ದು, ಹೊರಹರಿವನ್ನು 1000 ಕ್ಯೂಸೆಕ್ಸ್‌ಗಳಿಗೆ ಏರಿಕೆ ಮಾಡಲಾಗಿದೆ.

ಮುಂಗಾರು ಶುರುವಾದ ನಂತರದಲ್ಲಿ ಮೊದಲ ಬಾರಿಗೆ ಜಲಾಶಯದ ಒಳಹರಿವು ಈ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ರೈತರ ಮೊಗದಲ್ಲಿ ಸಂತಸ ಮನೆ ಮಾಡಿದೆ.

84 ಅಡಿ ಸಾಮರ್ಥ್ಯವಿರುವ ಜಲಾಶಯದ ಇಂದಿನ ನೀರಿನ ಮಟ್ಟ 66.27 ಅಡಿಗಳಾಗಿದೆ. ನಿನ್ನೆ ಒಂದೇ ದಿನ 1.5 ಅಡಿಗಳು ಹೆಚ್ಚಳವಾಗಿದ್ದು, ಜಲಾಶಯದಿಂದ 1000 ಕ್ಯೂಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ.

ಮುಂಗಾರು ಮಳೆ ಹೀಗೇಯೇ ಮುಂದುವರಿದರೆ ಜಲಾಶಯ ಇನ್ನು 8 ದಿನಗಳ ಒಳಗಾಗಿ ಸಂಪೂರ್ಣ ಭರ್ತಿಯಾಗಲಿದೆ ಎನ್ನಲಾಗಿದ್ದು, ಯಾವುದೇ ಕ್ಷಣಗಳಲ್ಲಾದರೂ ಡ್ಯಾಂನಿಂದ ಕಪಿಲಾ ನದಿಗೆ ನೀರನ್ನು ಬಿಡುಗಡೆ ಮಾಡಲಾಗುತ್ತದೆ.

ಜಲಾಶಯದಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡುವುದರಿಂದ ಕಪಿಲಾ ನದಿ ಪಾತ್ರದ ತಗ್ಗು ಪ್ರದೇಶಗಳು ಜಲಾವೃತವಾಗಲಿವೆ. ಈ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ನೀರಾವರಿ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Tags:
error: Content is protected !!