Mysore
27
clear sky

Social Media

ಸೋಮವಾರ, 20 ಏಪ್ರಿಲ 2026
Light
Dark

ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸೂರಜ್‌ ರೇವಣ್ಣಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತನಿಗೆ ಅಸಹಜ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಡಿ ಜೆಡಿಎಸ್‌ ಎಂಎಲ್‌ಸಿ ಡಾ.ಸೂರಜ್‌ ರೇವಣ್ಣನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಲಾಗಿದೆ.

ತಮ್ಮ ವಿರುದ್ಧ ದಾಖಲಾಗಿರುವ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಸಂಬಂಧ ವಿವರಣೆ ನೀಡಲು ನಿನ್ನೆ ಸೂರಜ್‌ ರೇವಣ್ಣ ಹಾಸನದ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿದ್ದರು. ವಿಚಾರಣೆ ನಡೆಸಿದ ಪೊಲೀಸರು ಸೂರಜ್‌ ರೇವಣ್ಣನನ್ನು ಬಂಧಿಸಿದ್ದರು.

ಇಂದು ಹಾಸನದ ಹಿಮ್ಸ್‌ನಲ್ಲಿ ಮೆಡಿಕಲ್‌ ಟೆಸ್ಟ್‌ಗೆ ಒಳಪಡಿಸಿದ ನಂತರ ಸೂರಜ್‌ ರೇವಣ್ಣನನ್ನು ಬೆಂಗಳೂರಿನ ಕೋರಮಂಗಲದಲ್ಲಿರುವ 42ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್‌ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಸೂರಜ್‌ ರೇವಣ್ಣನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಪ್ರಕಟಿಸಿದ್ದಾರೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸಿಐಡಿಗೆ ವಹಿಸಿ ಆದೇಶಿಸಿದೆ. ಪ್ರಕರಣ ಇನ್ನೂ ಅಧಿಕೃತವಾಗಿ ವರ್ಗಾವಣೆ ಆಗಿಲ್ಲ. ಹೀಗಾಗಿ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಪಟ್ಟಿದ್ದಾರೆ ಎನ್ನಲಾದ ಸಂತ್ರಸ್ತನಿಗೂ ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.

Tags:
error: Content is protected !!