ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದ ಏಕಸದಸ್ಯಪೀಠದ ಮಧ್ಯಂತರ ಆದೇಶಕ್ಕೆ ವಿಭಾಗೀಯ ನ್ಯಾಯಪೀಠ ತಡೆ ನೀಡಿದೆ.
ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠವು ಇಂದು ಪ್ರಕಟ ಮಾಡಿದೆ.
ಸರ್ಕಾರವು ಮೇಲ್ಮನವಿಯಲ್ಲಿ ಕೋರಿರುವ ಅಂಶಗಳಲ್ಲಿ ಕುದುರೆ ಪಂದ್ಯಗಳ ಆಯೋಜಿಸದಂತೆ ಕೋರಿರುವುದಕ್ಕೆ ಬಲವಾದ ಕಾರಣಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಅಮಾನತ್ತಿಲ್ಲಿಟ್ಟಿರುವುದಾಗಿ ಪೀಠ ತಿಳಿಸಿದೆ.
ಅಲ್ಲದೇ, ಅರ್ಜಿ ವಿಚಾರಣೆ ಬಾಕಿ ಇರುವಾಗ ಅರ್ಜಿ ವಿಚಾರಣೆ ಪೂರ್ಣಗೊಳಿಸುವವರೆಗೂ ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ ಆನ್ ಕೋರ್ಸ್ ಮತ್ತು ಆಫ್ ಕೋರ್ಸ್‌ಗಳ ಆಯೋಜನೆ ಹಾಗೂ ಬೆಟ್ಟಿಂಗ್ ನಡೆಸುವುದನ್ನು ನಿಷೇಧಿಸಲಾಗಿದೆ.
ಇದು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ. ಉಳಿದ ಅರ್ಜಿದಾರರ ಹಕ್ಕಿನ ವ್ಯಾಪ್ತಿಯ ವಿಚಾರವನ್ನು ಅಂತಿಮ ವಿಚಾರಣೆಯ ಸಂದರ್ಭದಲ್ಲಿ ನಿರ್ಧರಿಸಲು ಮುಕ್ತವಾಗಿರಿಸಲಾಗಿದೆ. ಅಂತಿಮ ವಿಚಾರಣೆಯನ್ನ ಆಗಸ್ಟ್ 12ಕ್ಕೆ ಮುಂದೂಡಲಾಗಿದೆ.