Mysore
24
haze

Social Media

ಶುಕ್ರವಾರ, 10 ಜನವರಿ 2025
Light
Dark

ಗುಣಮಟ್ಟದ ಆಹಾರ ಒದಗಿಸುವುದು ಸರ್ಕಾರ ಹಾಗೂ ಅಧಿಕಾರಿಗಳ ಜವಾಬ್ದಾರಿ – ಡಾ.ಹೆಚ್.ಕೃಷ್ಣ

ರಾಜ್ಯ ಆಹಾರ ಆಯೋಗದ ಸಮಿತಿ ಸಭೆ

ಮೈಸೂರು: ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಮೂರು ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಸಂಚರಿಸಿ ನ್ಯೂನ್ಯತೆಗಳನ್ನು ಗಮನಿಸುವುದರೊಂದಿಗೆ, ಉತ್ತಮ ಕಾರ್ಯಗಳನ್ನು ಮಾಡಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿದರು.

ಮೂರು ದಿನಗಳ ಅವಲೋಕನದ ನಂತರ ಶುಕ್ರವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಸಭೆಯಲ್ಲಿ ಆಯೋಗದ ಅಧ್ಯಕ್ಷರಾದ ಡಾ.ಹೆಚ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಆಯೋಗ ಗಮನಿಸಿದ ಅಂಶಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿ ಸರಿಯಾಗಿ ಕಾರ್ಯನಿರ್ವಹಿಸದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರೊಂದಿಗೆ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.

ಆಯೋಗದ ಅಧ್ಯಕ್ಷರು ಮಾತನಾಡಿ, ಪ್ರತಿ ಪ್ರಜೆಗೂ ಗುಣಮಟ್ಟದ ಆಹಾರ ಪದಾರ್ಥ ಒದಗಿಸುವುದು ಸರ್ಕಾರ ಹಾಗೂ ನಮ್ಮೆಲ್ಲರ ಜವಾಬ್ದಾರಿ ಇದರೊಂದಿಗೆ ಧ್ವನಿ ಇಲ್ಲದವರು,ಬಡವರು, ರೈತರು, ಮಹಿಳೆಯರು ಮತ್ತು ಮಕ್ಕಳಿಗೆ ಹಾಗೂ ಶ್ರಮಿಕರಿಗೆ ಶಕ್ತಿ ತುಂಬುವ ಕೆಲಸವಾಗಬೇಕು ಎಂದರು.

ಪ್ರಮುಖವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಜಾಗೃತಿ ಸಮಿತಿಯ ಸದಸ್ಯರುಗಳ ಹೆಸರು, ವಿಳಾಸ, ದೂರವಾಣಿ ನಂಬರ್‌  ಗಳನ್ನು ಪ್ರದರ್ಶಿಸಿರುವುದಿಲ್ಲ. ಇದರಿಂದ ಪಡಿತರದಾರರು ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು?  ಗೋಡಾನ್ನಲ್ಲಿರುವ ದಾಸ್ತಾನಿಗೂ ರಿಜಿಸ್ಟರ್ ನಲ್ಲಿರುವ ಸಂಖ್ಯೆಗಳಿಗೂ ತಾಳೆಯಾಗುತಿಲ್ಲ. ಹುಣಸೂರು ಹಾಗೂ ಕೆ.ಆರ್.ನಗರ ತಾಲೂಕುಗಳ ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಸಮಿತಿಯ ಸದಸ್ಯರ ಹೆಸರುಗಳೇ ಇಲ್ಲ, ಪಡಿತರವನ್ನು ನಿಗದಿತ ದಿನಗಳಲ್ಲಿ ವಿತರಣೆಯಾಗಬೇಕೆಂದಿದ್ದರೂ ಪಾಲನೆ ಆಗುತಿಲ್ಲ, ಈ ಬಗ್ಗೆ ಪುಡ್ ಇನ್ಸ್ಪೆಕ್ಟರ್ ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದರು.

ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಪ್ರತಿಕ್ರಿಯಿಸಿ ಅಗತ್ಯಕ್ಕಿಂತ ಹೆಚ್ಚು ಸ್ಟಾಕ್ ಇದ್ದರೆ ಅಂತಹವರಿಗೆ ಶೋಕಾಸ್ ನೋಟೀಸ್ ನೀಡಲು ಅಹಾರ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿ,  ಗೋಡನ್‌ಗಳಿಗೆ ಸಿ.ಸಿ.ಕ್ಯಾಮರಾ ಅಳವಡಿಸಿ ಪಡಿತರ ಎಲ್ಲಾದರು ಬೇರೆಕಡೆ ಹೋಗುತ್ತದೆಯೇ ಗಮನಿಸಿ ಒಂದು ವೇಳೆ ಲೋಪ ಕಂಡುಬಂದಲ್ಲಿ ಪುಡ್ ಇನ್ಸ್ಪೆಕ್ಟರ್ ಗಳ ಮೇಲೆ ಕ್ರಮ ಕೈಗೊಳ್ಳಿ ಎಂದರು.

ಆಯೋಗದ ಸದಸ್ಯ ಸುಮಂತರಾವ್ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಸರಿಯಾಗಿ ಮೊಟ್ಟೆ ವಿತರಣೆ ಆಗುತಿಲ್ಲ, ಮಂಗಳವಾರ ಹಾಗೂ ಶುಕ್ರವಾರ ಮೊಟ್ಟೆ ನೀಡಬೇಕೆಂದಿದ್ದರೂ ನಾವು ಭೇಟಿ ನೀಡಿದ ಮಂಗಳವಾರ ಮೊಟ್ಟೆ ನೀಡಿರುವುದಿಲ್ಲ. ಕೆಲ ಪೆಟ್ರೋಲ್ ಬಂಕ್‌ ಗಳಲ್ಲಿ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ, ಕೆಲವೆಡೆ ಮಾತ್ರ ಸ್ವಚ್ಚತೆ ಕಾಪಾಡಿದ್ದಾರೆ ಎಂದರು.

ಸದಸ್ಯರಾದ ರೋಹಿಣಿ ಪ್ರಿಯ ಮಾತನಾಡಿ, ಬಹುತೇಕ ಹಾಸ್ಟೆಲ್ ಗಳಲ್ಲಿ ಸರಿಯಾದ ಹಾಸಿಗೆ ವ್ಯವಸ್ಥೆಯಿಲ್ಲ ಹಾಗೂ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ಗಳ ವ್ಯವಸ್ಥೆ ಸಮರ್ಪಕವಾಗಿಲ್ಲ, ಮಕ್ಕಳು ಕೀಳರಿಮೆ ಬಿಟ್ಟು, ಈ ಬಗ್ಗೆ ಶಿಕ್ಷಕರೊಂದಿಗೆ ಸಂವಾದಿಸಬೇಕು, ತಕ್ಷಣ ಸಮಸ್ಯೆ ಬಗೆಹರಿಸಲು ಗಮನ ನೀಡಿ ಎಂದರು.

ಹಾಸ್ಟೆಲ್ ಒಂದರಲ್ಲಿ ಶೂ ಮತ್ತು ಸಾಕ್ಸ್ ಸ್ಟಾಕ್ ಇದ್ದರೂ ವಿತರಣೆ ಮಾಡಿಲ್ಲ ಎಂದಾಗ ಜಿಲ್ಲಾಧಿಕಾರಿ ಗಳು ಈ ಬಗೆಗೆ ಇಂದೇ ವರದಿ ನೀಡಿ ಎಂದರು.

ಡಿ.ಬಿ.ಕುಪ್ಪೆಯ ಆಶ್ರಮ ಶಾಲೆಯಲ್ಲಿ ವಿಜ್ಞಾನ ಹಾಗೂ ಗಣಿತ ಶಿಕ್ಷಕರಿಲ್ಲ ಮುಖ್ಯ ಅಡುಗೆಯವರಿಗೆ ಹೆಡ್ ಮಾಸ್ಟರ್ ಚಾರ್ಜ್ ಕೊಟ್ಟಿದ್ದಾರೆ ಎಂದಾಗ ಅಧಿಕಾರಿ ಪ್ರತಿಕ್ರಿಯಿಸಿ ಅಲ್ಲಿನ ಶಿಕ್ಷಕರು ಯಾರೂ ಪರ್ಮನೆಂಟ್ ಇಲ್ಲದುದರಿಂದ ಅವರಿಗೆ ಪ್ರಭಾರ ನೀಡಲಾಗಿದೆ ಎಂದರು.

ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ಮಾರುತಿ ಎಂ.ದೊಡ್ಡಲಿಂಗಣ್ಣನವರ್, ಎ.ರೋಹಿಣಿ ಪ್ರಿಯ, ಕೆ.ಎಸ್.ವಿಜಯಲಕ್ಷ್ಮಿ, ಸದಸ್ಯ ಕಾರ್ಯದರ್ಶಿ ಸುಜಾತ ಹೊಸಮನಿ , ಜಿ.ಪಂ ಸಿಇಒ ಕೆ.ಎಂ.ಗಾಯತ್ರಿ, ಆಹಾರ ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ರಾದ ಕುಮುದ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Tags: