Mysore
30
light rain

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪೊರೆದೆತ್ತುವ ಕೈಯೆಲ್ಲವು ತಾಯ ಕೈ

‘ಕಾಲಕಣ್ಣಿಯ ಬಿಚ್ಚಿ ನಿಸೂರಾಗಿ ಈ ಸಂಜೆಯವರೆಗಾದರೂ ಬದುಕಿಕೊಂಡೋ’
• ಅಕ್ಷತಾ ಹುಂಚದಕಟ್ಟೆ
ರಾಮು ಅವರ ‘ಸಾರನ್ನ ಸೂಕ್ತ’ ಕವಿತೆಯ ಸಾಲು ಇದು, ನಿಸೂರಾಗಿ ಬದುಕುವುದು ಅಲ್ಲೋ ಎಲ್ಲೋ ಒಬ್ಬಿಬ್ಬರಿಗೆ ಮಾತ್ರ ಸಾಧ್ಯ. ಅದು ನಮ್ಮ ರಾಮು ಅವರಿಗೂ ಸಾಧ್ಯವಾಗಿತ್ತು. ಈ ಸಂಜೆಯವರೆಗಾದರೂ ಬದುಕಿಕೊಂಡೋ ಎಂಬುದ ರಲ್ಲಿ ಇರುವುದು ಆರ್ತದನಿ ಅಲ್ಲ; ಅಲ್ಲಿರುವುದು ಸಂಜೆಯ ವರೆಗಿನ ಬದುಕೇ ಆದರೂ ಹೇಗೆ ಬದುಕಬೇಕು ಎಂಬ ಬಗ್ಗೆ ಕವಿಗಿರುವ ಸ್ಪಷ್ಟತೆ. ರಾಮು ವಿಶ್ವಬಂಧು. ರಾಮುವಿನ ಕಾರುಣ್ಯತುಂಬಿದ ಕಣ್ಣುಗಳು, ಆನಂದ ಸೂಸುವ ಮುಖ, ವಿನೋದಭರಿತ ಮಾತುಗಳು ಎಂಥ ಹೊತ್ತಲ್ಲೂ ಬೆನ್ನಿಗೆ ನಿಂತು ಸಂತೈಸುವ ಪರಿ ಎಲ್ಲವೂ ಅವರ ಒಡನಾಟಕ್ಕೆ ಸಿಲುಕಿದ ಎಲ್ಲರ ಪಾಲಿಗೂ ರಾಮುವನ್ನು ನಿಜ ಸಖನನ್ನಾಗಿಸಿತ್ತು… ಅವರು ಉಣಿಸುವುದೋ ಥೇಟ್ ಅಮ್ಮನ ಪ್ರೀತಿಯ ಕೈ ತುತ್ತಿನ ಹಾಗೆ, ಅಮ್ಮನದಾದರೂ ಅವಳು ಕಟ್ಟಿಕೊಂಡ ಜಂಜಡದ ನಡುವೆ ಆ ಹೊತ್ತಿಗಷ್ಟೇ ದೊರಕುವ ಆ ಮಟ್ಟಿಗಿನ ಪ್ರೀತಿ; ರಾಮುವದು ಹಾಗಲ್ಲ, ಅದು 24X7 ನಿರಂತರಧಾರೆ; ಅಂಥ ಧಾರೆಯೆದುರಿಗೆ ಹಲವು ನೋವುಗಳಿಂದ ತತ್ತರಿಸುತ್ತಿದ್ದ ಅವರದೇ ಆದ ಸಂಕಷ್ಟಗಳು ನನ್ನಂತಹವರ ಕಣ್ಣಿಗೆ ನಿಲುಕಲೇ ಇಲ್ಲವಲ್ಲ ಎಂದು ಪಶ್ಚಾತ್ತಾಪಗೊಳ್ಳುವ ಹೊತ್ತಿಗೆ; ಹಾಗೆ ನಿಲುಕಲು ರಾಮು ಎಂದಿಗೂ ಬಿಡಲಿಲ್ಲ. ಈಗಿದ್ದಿದ್ದರೂ ಬಿಡುತ್ತಲೂ ಇರಲಿಲ್ಲ ಎಂಬ ಸತ್ಯ ನಿಚ್ಚಳವಾಗುತ್ತದೆ.

ತನ್ನ ಒಡನಾಟಕ್ಕೆ ಬಂದವರೆಲ್ಲರಿಗೂ ಪ್ರಿಯವಾಗಿದ್ದ ರಾಮು; ಕವಿಯಾಗಿ ಮಾತ್ರ ಅಜ್ಞಾತವಾಗಿರಲೇಬಯಸುತ್ತಿ ದರು. ಮೊದಲ ಸಂಕಲನ ‘ಅಗ್ನಿ ಸೂಕ್ತ ಬೇರೆಯ ಹೆಸರಿನಲ್ಲಿ ಪ್ರಕಟವಾದರೆ, ಎರಡನೇ ಸಂಕಲನ ‘ರಾಮು ಕವಿತೆಗಳು ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದರೂ; ಆ ಸಂಕಲನದ ಜನಕ ರಾಮು ಯಾರು? ಎಂಬ ಪ್ರಶ್ನೆಗೆ ಉತ್ತರ ನೀಡದೇ ಅವರೊಬ್ಬ ಅನಾಮಿಕ ಕವಿ ಎಂಬಂತೆ ಕಾಣಿಸಲಾಯಿತು. ಆದರೆ ಮೂರನೇ ಸಂಕಲನ ‘ವಿಷ್ಣು ಕ್ರಾಂತಿಯನ್ನು ರಾಮುತನ್ನದೇ ಹೆಸರಿನಲ್ಲಿ ಪ್ರಕಟಿಸಿದರು. ಆ ಸಂಕಲನದಲ್ಲಿ ‘ನನ್ನ ತಂಗಿ ಕಣ್ಮುಚ್ಚಿದ ವರ್ಷದ ದಿನಕ್ಕೆ ಏನಾದರೂ ಮಾಡಬೇಕು ಎನಿಸಿತು… ಕುಮುದಾಳ ಚೇತನ ಅಲ್ಲಿಂದ ನಮ್ಮತ್ತ ನಿಗಾ ಇಟ್ಟು ನೋಡುತ್ತಿದೆ ಎಂಬ ನಂಬುಗೆಯಲ್ಲಿ ಮೈಮರೆತು ಈ ಪ್ರಕಟಣೆಗೆ ಹುಚ್ಚುಹುಚ್ಚಾಗಿ ಹಂಬಲಿಸಿದೆ ಎಂದು ಬರೆದುಕೊಂಡಿದ್ದಾರೆ. ಕುಮುದಾ ಅವರು ಮರೆ ಯಾಗಿ ವರ್ಷದ ದಿನ 2022 ರ ಜೂನ್ 13 ರಂದು ವಿಷ್ಣುಕ್ರಾಂತಿ ಸಂಕಲನ ಅಹರ್ನಿಶಿಯ ನೂರನೇ ಪುಸ್ತಕ ವಾಗಿ ಹೊರಬಂತು. ರಾಮು ಅವರು ಆ ಪುಸ್ತಕದ ಪ್ರತಿ ಗಳನ್ನು ತಂಗಿಯ ನೆನಪಿಗೆ ಅರ್ಪಿಸಿದರು. ಇದೇ ಧನ್ಯತೆಯಲ್ಲಿರುವಾಗಲೇ ಕಾಲ ಕಣ್ಣಿ ಬಿಚ್ಚಿ ಯಥಾಪ್ರಕಾರ ಓಡಿತು… ಸರಿಯಾಗಿ ಒಂದು ವರುಷಕ್ಕೆ 2023 ರ ಜೂನ್ 13 ರಂದು ರಾಮು ಕೂಡ ಮರೆಯಾದರು. ಇದೀಗ ರಾಮು ನೆನಪಿನಲ್ಲಿ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹಾಗೂ ರಾಮು ಅವರ ಇಡೀ ಬಳಗದ ಶ್ರಮದಿಂದ ಅವರ ಪ್ರಕಟಿತ ಅಪ್ರಕಟಿತ ಎಲ್ಲ ಕವಿತೆಗಳು ‘ನುಡಿಯ ಬಾಗಿಲ ಹಾಯ್ದು’ ಹೆಸರಿನಲ್ಲಿ ಅಹರ್ನಿಶಿಯಿಂದ ಪ್ರಕಟಗೊಂಡು ಜೂ.15ರಂದು ಬಿಡುಗಡೆಗೊಳ್ಳುತ್ತಿದೆ.

ಉತ್ಕಟ ಪ್ರೇಮ, ತಾಯ್ತನದ ಕರುಳು ಇವು ರಾಮು ಕಾವ್ಯ ದಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ರೂಪಕಗಳು ಪ್ರೇಮಭರಿತ ಹೃದಯ ಮತ್ತು ತಾಯ್ತನದ ಕರುಳು ಹೊಂದಿರುವ ಜೀವಗಳು ಇಲ್ಲಿ ಸೃಷ್ಟಿಸಿಕೊಳ್ಳುವ ಉದ್ವಿಗ್ನತೆ, ಸಂಕಟ,
ತಳಮಳಗಳಿಗೆ ಹಲವು ಆಯಾಮಗಳಿವೆ. ಮಾಧವನು ಅಲ್ಲ, ಮಾದೇವನೂ ಅಲ್ಲ, ಮಾದಿಗ ಹುಡುಗ ನನ್ನ ಮುಟ್ಟಿ ಬಿಟ್ಟ ಎಲ್ಲ ಮುಂಡಾ ಮೋಚಿ ಜಾತಿಯಿಂದಲೇ ನನ ಬಿಡಿಸಿಬಿಟ್ಟ ಆ ರಟ್ಟೆ, ಆ ತೋಳು, ಆ ಭುಜದ ಹರವಿಗೆ ನಾನು ಆತುಕೊಂಡಿರುವಾಗ ಅಯ್ಯೋ, ಆತ ಗಂಡಸೇ ಅಲ್ಲ ಕಣೆ, ತನ್ನ ಬಸಿರೊಳಗೆನ್ನ ಇರಿಸಿಬಿಟ್ಟ (ತಾಯಿ)

ಪ್ರೇಮವೆಂದರೆ ಹಾಗೆ ಜಾತಿ, ಧರ್ಮ ಎಲ್ಲದಕ್ಕೂ ಅತೀತವಾದದ್ದು; ಅಕ್ಕ, ಮೀರಾ, ಲಲ್ಲೇಶ್ವರಿಯ ಪರಂಪರೆ ರಾಮು ಕಾವ್ಯದಲ್ಲೂ ಮುಂದುವರಿದಿದೆ. ಕವಿ ಲಲಿತಾ ಸಿದ್ದಬಸವಯ್ಯ ಹೇಳುವ ಹಾಗೆ ‘ಪೊರೆದೆ ತ್ತುವ ಕೈಯೆಲ್ಲವು ತಾಯ ಕೈ- ಇದು ರಾಮು ನಿಲುವು’. ತಾಯ್ತನ ಎಂದರೆ ಮಕ್ಕಳ ಹಡೆದಾಕೆಯದು ಎಂಬ ಸಿದ್ಧ ಮಾದರಿಯಾಚೆಗೆ ತುಡಿಯುವ ರಾಮು ಪದ್ಯಗಳಲ್ಲಿ, ತಾಯ್ತನದ ಜವಾಬ್ದಾರಿ ಹೊಂದಿರುವ ಜೀವಗಳು ಕನ್ನೆಯೂ, ಗಂಡಸೂ, ವೃದ್ದರೂ ಎಲ್ಲರೂ ಇಲ್ಲಿ ತಾಯಂದಿರೇ.
‘ಓ ದೇವರೇ ಇವಳಿಲ್ಲದಿದ್ದರೆ ಬರಿಯ ಗೊಂಬೆತರುತಿದ್ದೆ ನಿಜದ ದೇವರ ತಂದೆ ಇವಳ ದಿಸೆಯಿಂದ… (ಬೀಬಿನಾಚಿ) ಯಾನೇ ಎನ್ನುವ ಯತಿ ರಾಮಾನುಜರಿಗೆ ಅವರ ದೈವ ಚೆಲುವನಾರಾಯಣನ ಸಖಿ ಆಯಿಷಾ ಬೀಬಿನಾಚ್ಚಿ ಏಕಕಾಲಕ್ಕೆ ತಾಯಿಯೂ ಆಗಿಬಿಡುವುದು ಹೀಗೆ ಮಗಳೂ

‘ನಿನ್ನ ಮುಖದಲ್ಲಿ ತುಂಟ ನಗುವಿತ್ತಲ್ಲ ಬೀಳಲಾರದ ಹನಿ ಎರಡು ಕಣ್ಣಲ್ಲಿ!
(ದಿಟ್ಟಿಯಲಿ ಕಣ್ಣುಕರಗಿತ್ತು)

ಮುಖದಲ್ಲಿ ತುಂಟ ನಗೆ; ಕಣ್ಣಲ್ಲಿ ಗಾಢವಾಗಿ ಅಡಗಿದ್ದ ಆದರೆ ಎಂದೂ ತೋರಿಸಿಕೊಳ್ಳದೇ ಹೋದ ಕಡುದುಖ ಹೊತ್ತಿರುವ ಜೀವಗಳ ಸೊಲ್ಲುಗಳು ರಾಮು ಅವರ ಕವಿತೆಗಳು, ಈಗ ಈ ಕವಿಯೂ ಇಲ್ಲ ಕವಿಗೆ ಅನಾಮಿಕನಾಗಿರುವ ದರ್ದೂ ಇಲ್ಲ. ರಾಮು ಅವರ ಕವಿತೆಗಳನ್ನು ಓದೋಣ ಮತ್ತು ಚರ್ಚಿ ಸೋಣ… ಅದಕ್ಕೆ ಈ ಸಮಗ್ರ ಸಂಕಲನ ಮುನ್ನುಡಿ ಹಾಡಲಿ ಆಮೆಲ್.‌

 

ರಾಮು ಕಾಕಾ, ಹಾಡುಪಾಡು ರಾಮು ಹೆಸರುಗಳಿಂದ ಗುರುತಿಸಿಕೊಂಡಿದ್ದ ಟಿ.ಎಸ್‌. ರಾಮಸ್ವಾಮಿ ಅವರು ಹೆಂಗರುಳಿನ ಕವಿ. “ಆಂದೋಲನ’ ದಿನಪತ್ರಿಕೆಯಲ್ಲಿ “ಹಾಡುಪಾಡು’ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರಲ್ಲಿ ಸರ್ವರನ್ನೂ ವಿಶ್ವಾಸದಿಂದ, ಪ್ರೀತಿಯಿಂದ ಗೌರವಿಸುವ ದೊಡ್ಡ ಗುಣ ಮನೆಮಾಡಿತ್ತು. ಅವರು ರಚಿಸಿದ ಕವನಗಳ ಗುಚ್ಛ ಇಂದು ಬಿಡುಗಡೆಯಾಗುತ್ತಿದೆ. ತನ್ನಿಮಿತ್ತ ಈ ಲೇಖನ.

ಇಂದು ರಾಮು ಅವರ ಕವಿತೆಗಳ ಸಂಕಲನ ಬಿಡುಗಡೆ
ಕವಿ ರಾಮು (ಟಿ.ಎಸ್.ರಾಮಸ್ವಾಮಿ) ಅವರ ಎಲ್ಲ ಕವಿತೆಗಳ ಸಂಕಲನ ‘ನುಡಿಯ ಬಾಗಿಲ ಹಾಯ್ದು ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜೂ.15ರಂದು ಸಂಜೆ 4ಕ್ಕೆ ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ವೃತ್ತದಲ್ಲಿರುವ ಐಡಿಯಲ್ ಜಾವಾ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸಾಹಿತಿ ಚ.ಸರ್ವಮಂಗಳಾ, ಲೇಖಕ ರಾಜೇಂದ್ರ ಚೆನ್ನಿ, ಸಾಹಿತಿ ರಹಮತ್‌ ತರೀಕೆರೆ, ಅಂತಾರಾಷ್ಟ್ರೀಯ ಖ್ಯಾತಿಯ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಸೇನಾನಿ, ಕವಯಿತ್ರಿ ಜ.ನಾ.ತೇಜ, ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

 

Tags: