Mysore
26
scattered clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ತಾರಾನಾಥ್ ಒಳಗೆ ಜಾಗೃತವಾಗಿತ್ತು ತಾಯ್ತನ

ಭಾವುಕರಾಗಿ ಸ್ಮರಿಸಿದ ಒಡನಾಡಿ ಹಿಮಾಂಶು

ಮೈಸೂರು: ಅವರು ಹಾಗೇ.. ತಮ್ಮ ಅಗತ್ಯಕ್ಕಿಂತಲೂ ಇತರರ ಅವಶ್ಯಕತೆಗಳಿಗೆ ಪ್ರಥಮ ಆದ್ಯತೆ ನೀಡಿ, ಮುಕ್ತ ಹೃದಯದಿಂದ ಸಹಾಯದ ಹಸ್ತ ಚಾಚುತ್ತಿದ್ದರು. ಆದರೆ, ಅದು ಯಾರಿಗೂ ಗೊತ್ತಾಗದಂತೆ ಗುಟ್ಟಾಗಿಯೇ ಇಡುತ್ತಿದ್ದರು..

ಮಂಗಳವಾರ ನಿಧನರಾದ ರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂಡಿತ್‌ ರಾಜೀವ ತಾರಾನಾಥ್ ಅವರ ತಾಯ್ತನದಂತಹ ಗುಣಗಳ ಬಗ್ಗೆ ಕಲಾ ಪೋಷಕ ಸಿ.ಆರ್.ಹಿಮಾಂಶು ಅವರು ಅತ್ಯಂತ ಮೃದು ಹಾಗೂ ನೋವಿನಿಂದ ಕೂಡಿದ ಮಂದ ಧ್ವನಿಯಲ್ಲಿ ಹೀಗೆ ಬಣ್ಣಿಸಿದರು.

ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಎತ್ತರಕ್ಕೆ ಏರಿದ ತಾರಾನಾಥ್ ಅವರಲ್ಲಿ ಸರಳತೆ ಅಗಾಧ ವಾಗಿತ್ತು. ಅವರ ಆಪ್ತವಲಯ ಅಥವಾ ಮನೆಯಲ್ಲಿ ಕೆಲಸ ಮಾಡುವ ಜನರ ಕಷ್ಟಗಳು ಕಿವಿಗೆ ಬಿದರೆ ಸಾಕು, ತಮ್ಮಿಂದ ಸಾಧ್ಯವಾಗುವುದಿದ್ದರೆ ತಕ್ಷಣ ಪರಿಹರಿಸಲು ಮುಂದಾಗುತ್ತಿದ್ದರು. ಹಲವು ಸಂಗೀತ ಕಲಾವಿದರಿಗೂ ಅವರ ನೆರವು ಅಪಾರವಾಗಿತ್ತು. ಅನೇಕ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ಶಾಲೆ ಕಾಲೇಜು ಪ್ರವೇಶ ಶುಲ್ಕ ಭರ್ತಿ ಮಾಡುವುದು ಇಂತಹ ಕಾರ್ಯಗಳನ್ನು ಎಲೆಮರೆಯ ಕಾಯಿಯಂತೆ ಇದ್ದುಕೊಂಡು ನೆರವೇರಿಸುತ್ತಿದ್ದರು. ಎಂದಿಗೂ ಪ್ರಚಾರ ಬಯಸಿದವರಲ್ಲ ಎಂದು ‘ಆಂದೋಲನ’ ದಿನಪತ್ರಿಕೆಗೆ ಹಿಮಾಂಶು ತಿಳಿಸಿದರು.

ನನಗೆ 18 ವರ್ಷಗಳಾಗಿದ್ದಾಗ ತಾರಾನಾಥ್ ಅವರ ಒಡನಾಟ ದಕ್ಕಿತು. ಅಂದರೆ ಸುಮಾರು 55 ವರ್ಷಗಳ ಬಾಂಧವ್ಯ. ಅಂದಿನಿಂದಲೂ ಅವರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರಿಗೆ ರಾಮಕೃಷ್ಣ ಹೆಗಡೆ, ಎಂ.ಪಿ.ಪ್ರಕಾಶ್ ಅವರಂತಹ ರಾಜಕಾರಣಿಗಳ ಒಡನಾಟ ಇತ್ತು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರೂ, ತಾರಾನಾಥ್ ಅದನ್ನು ತಮ್ಮ ಸ್ವಾರ್ಥಕ್ಕೆ ಎಂದೂ ಬಳಸಿಕೊಳ್ಳಲಿಲ್ಲ ಎಂದು ಅವರು ಸ್ಮರಿಸಿದರು.

ಸಮಾಜ ಸೇವೆಯಲ್ಲೂ ಮುಂದು

ಧಾರವಾಡ, ಹೈದರಾ ಬಾದ್, ಕೊಲ್ಕತ್ತಾ, ತಿರುಚ್ಚಿ ಮುಂತಾದ ಸ್ಥಳಗಳಲ್ಲಿ ತಾರಾ ನಾಥ್ ಅವರು ಪ್ರಾಧ್ಯಾಪಕ
ರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ ಕಾರ್ಯಗಳಲ್ಲೂ ಎತ್ತಿದ ಕೈ ಆಗಿದ್ದ ತಾರಾ ನಾಥ್ ಅವರು ತಿರುಚ್ಚಿಯಲ್ಲಿದ್ದಾಗ ‘ಟೆನ್ ಆಫ್ ಅಸ್’ ಎಂಬ ಸಂಘವನ್ನು ರಚನೆ ಮಾಡಿದ್ದರು. ಸಿ.ಆರ್.ಹಿಮಾಂಶು, ಕಲಾ ಪೋಷಕರು, ಮೈಸೂರು

ಆರ್ಥಿಕವಾಗಿ, ಮಾನಸಿಕವಾಗಿ ಬಲ ತುಂಬಿದ್ದರು
ಮಾನವೀಯ ದೃಷ್ಟಿಯ ಬಹಳ ದೊಡ್ಡ ಮನುಷ್ಯ ಪಂ.ರಾಜೀವ ತಾರಾನಾಥ್ ಅವರು. 12 ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ನನ್ನ ಪತ್ನಿ ತೀರಿಹೋದರು. ನಾನು ಗಂಭೀರವಾಗಿ ಗಾಯಗೊಂಡಿದ್ದೆ. ಆ ಸಂದರ್ಭದಲ್ಲಿ ತಾರಾನಾಥ್ ಅವರು ನನಗೆ ಆರ್ಥಿಕ ವಾಗಿ, ಮಾನಸಿಕವಾಗಿ ಜೀವನ ಚೇತರಿಕೆಗೆ ಸಹಕರಿಸಿದರು. ಐಪಿಎಸ್ ಚಂದ್ರಶೇಖರ್ ಮತ್ತಿತರರನ್ನು ಒಗ್ಗೂಡಿಸಿ ನನಗೆ ಸಹಾಯ ಮಾಡಿದರು. ಜಾತಿ, ಮತ, ಧರ್ಮಗಳನ್ನು ಮೀರಿ ಅವರ ಹೃದಯ ಮಿಡಿಯುತ್ತಿತ್ತು. ಹಾಗಾಗಿ ಅವರು ಬಹಳ ಮೃದು ಹೃದಯದ ಮನುಷ್ಯರಾಗಿದ್ದರು. ಸುಮಾರು 25 ವರ್ಷಗಳಿಂದ ಅವರೊಡನೆ ನನಗೆ ಒಡನಾಟ ಇತ್ತು.ಉಸ್ತಾದ್ ಫಯಾಜ್ ಖಾನ್, ಶಾಸ್ತ್ರೀಯ ಸಂಗೀತಗಾರರು, ಧಾರವಾಡ.

Tags: