Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ರೇವಣ್ಣಗೆ ದೇಗುಲ ಪ್ರವೇಶಕ್ಕೆ ಅವಕಾಶ ಸರಿಯೇ?

ಮಹಿಳೆಯೊಬ್ಬರ ಅಪಹರಣ ಮತ್ತು ಅತ್ಯಾಚಾರ ಆರೋಪದಡಿ ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಇರಬರ ದೇವಸ್ಥಾನಗಳಿಗೆಲ್ಲ ಭೇಟಿ ನೀಡುತ್ತಿದ್ದಾರೆ. ಅವರು ಇನ್ನೂ ಆರೋಪಿ, ಅಲ್ಲದೆ, ಅವರ ಮೇಲಿರುವುದು ಗಂಭೀರ ಆರೋಪ.ಹೀಗಿರುವಾಗ ರೇವಣ್ಣ ಅವರು ದೇವಾಲಯವನ್ನು ಪ್ರವೇಶಿಸುವುದರಿಂದ, ಅದರ ಘನತೆಗೆ ಧಕ್ಕೆಯಾಗುತ್ತದೆ. ದೇಗುಲಗಳನ್ನು ಹಿಂದೂ ಧರ್ಮದ ಸಂಸ್ಕಾರದ ಪ್ರತೀಕವಾಗಿ ಪರಿಗಣಿಸಲಾಗಿದೆ. ಅತ್ಯಂತ ಹೀನಾಯ ಆರೋಪ ಹೊತ್ತಿರುವ ರೇವಣ್ಣ ಅವರನ್ನು ದೇವಾಲಯದ ಆಡಳಿತ ಮಂಡಳಿಗಳು, ದೇವರ ದರ್ಶನಕ್ಕೆ ಅವಕಾಶ ನೀಡುತ್ತಿರುವುದು ಎಷ್ಟು ಸರಿ? ಅವರು ಚಾಮುಂಡಿಬೆಟ್ಟ, ನಂಜನಗೂಡು ಶ್ರೀಕಂಠೇಶ್ವರಸ್ವಾಮಿ ದೇವಾಲಯ, ಧರ್ಮಸ್ಥಳ ಶ್ರೀ ಮಂಜುನಾಥ ದೇಗುಲ… ಹೀಗೆ ಕಣ್ಣಿಗೆ ಕಂಡ, ಕಿವಿಗೆ ಕೇಳಿಸಿದ ಎಲ್ಲ ದೇವಸ್ಥಾನಗಳಿಗೂ ಲಗ್ಗೆ ಇಡುತ್ತಿದ್ದಾರೆ. ಯಾವ ದೇವಸ್ಥಾನದವರೂ ರೇವಣ್ಣ ಅವರನ್ನು ನಿರ್ಬಂಧಿಸಿಲ್ಲ. ಆದರೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಿಯನ್ನು ಎರಡೂ ಕೈಚಾಚಿ ಬರಮಾಡಿಕೊಳ್ಳುತ್ತಿರುವುದು ವಿಪರ್ಯಾಸ. ಅವರು ಶಾಸಕರು ಎಂದ ಮಾತ್ರಕ್ಕೆ ಎಂತಹ ದೊಡ್ಡ ಮಟ್ಟದ ತಪ್ಪು ಮಾಡಿದ್ದರೂ ಲೆಕ್ಕಕ್ಕೆ ಇರುವುದಿಲ್ಲವೇ? ಅಲ್ಲದೆ, ಹಿಂದೂ ಧಾರ್ಮಿಕ ದೇವಾಲಯಗಳು ತಪ್ಪು ಮಾಡಿದವರಿಗೆ ಪ್ರವೇಶ ನೀಡುವುದರಿಂದ ಅಶುದ್ಧವಾಗುತ್ತವೆ. ಯಾವ ತಪ್ಪು ಮಾಡದಿದ್ದರೂ ತಳ ಜಾತಿಯವರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಿಬಿಟ್ಟರೆ, ಶುದ್ದೀಕರಣ ಮಾಡುತ್ತಾರೆ. ಗುರುತರ ಆರೋಪ ಹೊತ್ತಿರುವ ರೇವಣ್ಣ ಅವರಿಗೆ ಮಣೆ ಹಾಕುತ್ತಿರುವುದು. ಹಿಂದೂ ಧರ್ಮದ ಒಳಗಿನ ತಾರತಮ್ಯವನ್ನು ಎತ್ತಿಹಿಡಿದಿದೆ. ರೇವಣ್ಣ ಅವರು ದೇವಸ್ಥಾನಗಳಿಗೆ ಭೇಟಿ ನೀಡುವುದಕ್ಕೆ ಅವಕಾಶ ಕೊಡಬಾರದು.
-ಎಂ.ವಿ.ಇಶಾನ್ವಿ, ಕೆಎಚ್‌ಬಿ ಕಾಲೋನಿ, ನಂಜನಗೂಡು

Tags: