Mysore
22
broken clouds
Light
Dark

ಓದುಗರ ಪತ್ರ: ಸುಸಜ್ಜಿತ ಶೌಚಾಲಯಗಳನ್ನು ನಿರ್ಮಿಸಿ

ನಂಜನಗೂಡು ತಾಲ್ಲೂಕಿನ ಈಶ್ವರಗೌಡನಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸುಸಜ್ಜಿತ ಶೌಚಾಲಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಇಲ್ಲಿನ ಶೌಚಾಲಯ ತೀರಾ ಹದಗೆಟ್ಟು ಹೋಗಿದ್ದು, ಕುಸಿಯುವ ಹಂತ
ತಲುಪಿದೆ. ಅಲ್ಲದೆ ನೀರಿನ ವ್ಯವಸ್ಥೆ ಇಲ್ಲದೆ ದುರ್ವಾಸನೆ ಬೀರಲಾರಂಭಿಸಿದ್ದು, ಶೌಚಾಲಯದ ಬಾಗಿಲುಗಳು ಕಿತ್ತುಬಂದಿದ್ದರೂ ವಿದ್ಯಾರ್ಥಿಗಳು ವಿಧಿ ಇಲ್ಲದೆ ಇದೇ ಶೌಚಾಲಯವನ್ನು ಬಳಸುವಂತಾಗಿದೆ.
ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ಎಲ್ಲರೂ ಕಡ್ಡಾಯವಾಗಿ ಶೌಚಾಲಯಗಳನ್ನು ಬಳಸಬೇಕು ಎಂದು ಬೋಧಿಸುತ್ತಾರೆ. ಆದರೆ ಶಾಲೆಯಲ್ಲಿಯ ಶೌಚಾಲಯಗಳ ಪರಿಸ್ಥಿತಿಯೇ ಹೀಗಾದರೆ ವಿದ್ಯಾರ್ಥಿಗಳು ಸ್ವಚ್ಛತೆಯ ಪಾಠ ಕಲಿಯುವುದಾದರೂ ಹೇಗೆ? ಇದು ಇದೊಂದೇ ಶಾಲೆಯ ಸಮಸ್ಯೆಯಲ್ಲ. ತಾಲ್ಲೂಕಿನ ಅನೇಕ ಶಾಲೆಗಳಲ್ಲಿ ಇದೇ ಸಮಸ್ಯೆ ತಲೆದೋರಿದ್ದು, ಕೆಲ ಶಾಲೆಗಳಲ್ಲಿ ಶೌಚಾಲಯಗಳು ಅನೈರ್ಮಲ್ಯದಿಂದ ಕೂಡಿದ್ದರೆ, ಅನೇಕ ಶಾಲೆಗಳಲ್ಲಿ ನೀರಿನ ಸೌಲಭ್ಯವಿಲ್ಲದೆ ವಿದ್ಯಾರ್ಥಿಗಳು ಸಂಕಷ್ಟಪಡುವಂತಾಗಿದೆ. ಆದ್ದರಿಂದ ಸಂಬಂಧಪಟ್ಟವರು ಸರ್ಕಾರಿ ಶಾಲೆಗಳಿಗೆ ಸೂಕ್ತ ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ.
-ಡಿ.ಅಂಬಿಕಾ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಮಹಾರಾಣಿ ಮಹಿಳಾ ಕಲಾ ಕಾಲೇಜು, ಮೈಸೂರು.