Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕಾಡು ಹಂದಿ ದಾಳಿಗೆ ವ್ಯಕ್ತಿ ದುರ್ಮರಣ; ಪರಿಹಾರಕ್ಕೆ ಆಗ್ರಹಿಸಿ ಮಿಮ್ಸ್ ಶವಾಗಾರದ ಎದುರು ಪ್ರತಿಭಟನೆ

ಮಂಡ್ಯ: ಕಾಡು ಹಂದಿ ದಾಳಿ ಮಾಡಿದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಮಂಡ್ಯದ ನಾಗಮಂಗಲ ರಸ್ತೆಯ ಚಿಕ್ಕಯಗಟಿ ಬಳಿ ನಡೆದಿದೆ. ಚಿಂದಗಿರಿ ದೊಡ್ಡಿ ಗ್ರಾಮದ ಶಿವ (48) ಸಾವನಪ್ಪಿದ ದುರ್ದೈವಿ.

ನಿನ್ನೆ ( ಮೇ 16 ) ಸಂಜೆ ವೇಳೆ ಚಿಕ್ಕಯಗಟಿ ಬಳಿ ಮಂಡ್ಯ- ನಾಗಮಂಗಲ ರಸ್ತೆಯಲ್ಲಿ ಬೈಕಿನಲ್ಲಿ ಬರುತ್ತಿದ್ದಾಗ ಏಕಾಏಕಿ ಕಾಡು ಹಂದಿ ದಾಳಿ ಮಾಡಿದೆ. ಕೆಳಕ್ಕೆ ಬಿದ್ದ ಶಿವು ಎಡ ತೊಡೆ ಮತ್ತು ಮರ್ಮಾಂಗಕ್ಕೆ ಗುದ್ದಿದ ಪರಿಣಾಮ ತೀವ್ರ ರಕ್ತಸ್ರಾವಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ನಾಗಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ಮರಣೋತ್ತರ ಪರೀಕ್ಷೆ ನಡೆಯುವ ಮಿಮ್ಸ್ ಶವಗಾರದ ಬಳಿ ಇಂದು ( ಮೇ 17 ) ಬೆಳಿಗ್ಗೆ ಜಮಾಯಿಸಿದ ಮೃತನ ಸಂಬಂಧಿಕರು ಹಾಗೂ ಚಿಂದಗಿರಿ ದೊಡ್ಡಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ಸುದ್ದಿ ತಿಳಿದ ಶಾಸಕ ರವಿಕುಮಾರ ಗಣಿಗ ಸ್ಥಳಕ್ಕೆ ಬರುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟರು. ಮಧ್ಯಾಹ್ನದ ವೇಳೆಗೆ ಶಾಸಕರು ಆಗಮಿಸಿದಾಗ ಅಲೆಮಾರಿ ಬುಡಕಟ್ಟು ಮಹಾಸಭಾ ಮತ್ತು ಮಂಡ್ಯ ಜಿಲ್ಲಾ ಕುಳುವ ಸಮಾಜದ ಆಶ್ರಯದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿದ ಸಂಬಂಧಿಕರು ಸೂಕ್ತ ಪರಿಹಾರ ದೊರಕಿಸಿಕೊಡುವಂತೆ ಒತ್ತಾಯಿಸಿದರು.

ಅಲೆಮಾರಿ ಸಮುದಾಯಕ್ಕೆ ಸೇರಿದ ಮೃತ ವ್ಯಕ್ತಿಯ ಕುಟುಂಬಕ್ಕೆ ಆಸ್ತಿ ಇಲ್ಲ, ಕೂಲಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು, ಆದರೆ ದುರಂತದಲ್ಲಿ ಮನೆ ನಿರ್ವಹಣೆ ಮಾಡುತ್ತಿದ್ದ ಶಿವು ಸಾವನಪ್ಪಿರುವುದರಿಂದ ಕುಟುಂಬ ಬೀದಿಗೆ ಬಿದ್ದಂತಾಗಿದೆ, ಅವರ ಬದುಕು ಮೂರಾಬಟ್ಟೆಯಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.

ಮೃತನ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು, ಕುಟುಂಬದ ಜೀವನ ಭದ್ರತೆಗಾಗಿ ಮೃತರ ಪುತ್ರ ಶ್ರೀನಿವಾಸ್‌ಗೆ ಖಾಯಂ ಸರ್ಕಾರಿ ಉದ್ಯೋಗ ನೀಡಬೇಕು, ಮೃತನ ಪತ್ನಿ ಅನಾರೋಗ್ಯ ಪೀಡಿತರಾಗಿದ್ದು ಇವರಿಗೆ ಮಾಸಿಕ ಪಿಂಚಣಿ ನೀಡಬೇಕು ಎಂದು ಒತ್ತಾಯಿಸಿದರು.

ಮೃತರ ಸಂಬಂಧಿಕರ ಬೇಡಿಕೆಗೆ ಸ್ಪಂದಿಸಿದ ಶಾಸಕ ರವಿಕುಮಾರ್ ಗಣಿಗ ಅರಣ್ಯ ಇಲಾಖೆ ವತಿಯಿಂದ 15 ಲಕ್ಷ ಪರಿಹಾರ ನೀಡಲಾಗುವುದೆಂದು ಘೋಷಿಸಿದರು. ಪರಿಹಾರದ ಹಣವನ್ನು ಮೂರು ನಾಲ್ಕು ದಿನಗಳ ನಂತರ ನೀಡಲಾಗುವುದು, ಖಾಯಂ ಸರಕಾರಿ ಉದ್ಯೋಗ ನೀಡಲು ಅವಕಾಶ ಇಲ್ಲದ ಪರಿಣಾಮ, ಯಾವುದಾದರೂ ಸರ್ಕಾರಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ದೊರಕಿಸಿ ಕೊಡುವ ಭರವಸೆ ನೀಡಿದರು.

ಅಷ್ಟೇ ಅಲ್ಲದೆ ಮೃತನ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ಪರಿಹಾರ ನೀಡಿದರು. ಇದೇ ವೇಳೆ ಸಹಾಯಕ ಅರಣ್ಯ ಅಧಿಕಾರಿ ಶಿವರಾಮು ಹಾಜರಿದ್ದರು. ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿರಣ್ ಕುಮಾರ್ ಕೊತ್ತಗೆರೆ, ಗೌರವಾಧ್ಯಕ್ಷ ರಾಮ ಶೆಟ್ಟಿ ಹನಕೆರೆ, ರಾಜ್ಯ ಉಪಾಧ್ಯಕ್ಷ ವೆಂಕಟೇಶ್ ರಾಮನಗರ, ಕೃಷ್ಣಕುಮಾರ್ ಗಣಂಗೂರು, ರವಿ ಕೊಡಗಹಳ್ಳಿ, ಟೆಂಪೋ ರಾಮಕೃಷ್ಣ, ಸಂದೀಪ್ ಕೆ. ವಿ ನೇತೃತ್ವ ವಹಿಸಿದ್ದರು.

Tags: