• ರವಿಚಂದ್ರ ಚಿಕ್ಕೆಂಪಿಹುಂಡಿ
ಮೈಸೂರು/ಚಾಮರಾಜನಗರ: ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ ಟಾಟಾ ಬಿರ್ಲಾ ಜೇಬಿಗೆ ಬಂತು ಜನಗಳ ತಿನ್ನುವ ಬಾಯಿಗೆ ಬಂತು…
ಏ.26ರಂದು ಲೋಕಸಭಾ ಚುನಾವಣೆಯಲ್ಲಿ ನಡೆದ ಮತಗಟ್ಟೆ ಧ್ವಂಸ ಪ್ರಕರಣದಲ್ಲಿ ಬಂಧಿಯಾಗಿರುವ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಇಂಡಿಗನತ್ತ ಗ್ರಾಮಸ್ಥರ ನೋವಿನ ನುಡಿಗಳನ್ನು ಕೇಳಿದರೆ ಕವಿ ಸಿದ್ದಲಿಂಗಯ್ಯ ಅವರ ಈ ಕವಿತೆ ಧುತ್ತನೆ ಬಂದು ನಾಗರಿಕ ಸಮಾಜದ ಮುಂದೆ ನಿಲ್ಲುತ್ತದೆ.
ವಿಶೇಷ ತಪ್ಪು ಮಾಡಿಯೋ ಮಾಡದೆಯೋ ಘಟನೆಯಲ್ಲಿ ಸಿಲುಕಿ ನಲುಗಿದವರು ಈಗ ಜೈಲಿನ ಕಂಬಿಯ ಹಿಂದೆ ನಿಂತು ಉಮ್ಮಳಿಸಿ ಬಂದ ದುಃಖದಲ್ಲಿ ಸ್ವತಂತ್ರ ಅಂದ್ರೆ ಏನು ಸಾ…, ಸ್ವತಂತ್ರ ಅಂದ್ರೆ ಹೆಂಗಿದ್ದದು…, ಸ್ವತಂತ್ರ ನಮಗೆಲ್ಲಿ? ನಮಗಿನ್ನು ಸ್ವತಂತ್ರ ಬಂದಿಲ್ಲ…’ ಎಂದು ದುಃಖಿಸುತ್ತಾ ಎದುರಿಗಿರುವರಿಗೆ ಹೊಟ್ಟೆಯೊಳಗಿನ ಸಂಕಟವನ್ನು ದಾಟಿಸಿ ಬಿಟ್ಟರೆ ಮೌನವಲ್ಲದೇ ಬೇರೆ ಉತ್ತರ ಸಿಗದೆ ಹೊಟ್ಟೆ ತೊಳೆಸಿದಂತಾಗುತ್ತದೆ.
ಇಂಡಿಗನತ್ತ ಮತಗಟ್ಟೆ ಧ್ವಂಸ ಪ್ರಕರಣ ಹಾಗೂ ಮೆಂದಾರೆ ಗ್ರಾಮದವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿದ ಇಂಡಿಗನತ್ತ ಗ್ರಾಮದ 46 ಮಂದಿಯಲ್ಲಿ ಪತಿ ಪತ್ನಿಯರು ಸೇರಿ ಅರ್ಧಕ್ಕಿಂತಲೂ ಹೆಚ್ಚು ಮಂದಿ ಮಹಿಳೆಯರೇ ಇದ್ದಾರೆ. ಇದರಲ್ಲಿ ಗಂಡ-ಹೆಂಡತಿ, ತಂದೆ ಹೀಗೆ ಒಂದೇ ಕುಟುಂಬದ ಮೂರ್ನಾಲ್ಕು ಮಂದಿ ಇದ್ದಾರೆ. ಜೈಲಿನಲ್ಲೇ ಆತಂಕದ 20 ದಿನಗಳನ್ನು ಕಳೆದಿರುವ ಇವರೆಲ್ಲರೂ ಜಾಮೀನು ಸಿಗುವ ಯಾವ ಲವಲೇಶದ ನಿರೀಕ್ಷೆಯೂ ಇಲ್ಲದೆ 21ನೇ ದಿನವನ್ನು ಎದುರು ನೋಡುತ್ತಿದ್ದಾರೆ.
ಮಹಿಳೆಯರನ್ನು ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಪುರುಷರನ್ನು ಚಾಮರಾಜನಗರ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳಾಗಿ ಇರಿಸಲಾಗಿದೆ. ಹಲ್ಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿ ಆರೋಪಿ ಸ್ಥಾನದಲ್ಲಿ ನಿಂತಿರುವ ಬೇ. ಪುಟ್ಟ ತಮ್ಮಡಿ ನೋಡಲು ಅಮಾಯಕ. ಅಂದಾಜು 60 ವರ್ಷ ವೃದ್ಧ ಗಟ್ಟಿಯಾಗಿ ನಿಲ್ಲಲೂ ತ್ರಾಣವಿಲ್ಲ. ಇವರನ್ನು ನೋಡಿದರೆ ಮೇಲುನೋಟಕ್ಕೆ ಘಟನೆಯಲ್ಲಿ ಮುಖ್ಯ ಪಾತ್ರಧಾರಿ ಎಂದು ಒಪ್ಪಿಕೊಳ್ಳಲೂ ಆಗದು.
ಆದರೆ, ಪೊಲೀಸರು ಯಾವ ದೃಷ್ಟಿಕೋನದಲ್ಲಿ ನೋಡಿದ್ದಾರೆಯೋ, ಆರೋಪಿ ಎನ್ನಲು ಆಧಾರಗಳು ಹೇಗಿವೆಯೋ ಎಂಬುದು ನಿಗೂಢ. ಇವರಂತೆಯೇ ಆರೋಪಿ ಸ್ಥಾನದಲ್ಲಿರುವ ಚಂದ್ರಶೇಖರ್, ಘಟನೆ ನಡೆದ ದಿನದಂದು ಹಲ್ಲೆಗೊಳಗಾದ ಅಧಿಕಾರಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಅವರು ಸಹಕರಿಸಿದರಂತೆ, ಬೇ.ಪುಟ್ಟ ತಮ್ಮಡಿ ಶಾಲೆಯ ಗೇಟು ತೆರೆದು ವಾಹನ ಹೋಗಲು ಅನುವು ಮಾಡಿಕೊಟ್ಟರಂತೆ. ಆದರೂ ಅವರನ್ನು ಆರೋಪಿಯನ್ನಾಗಿಸಿ ಜೈಲಿಗೆ ತಳ್ಳಲಾಗಿದೆ ಎನ್ನುತ್ತಾರೆ. ಮತ್ತೊಬ್ಬ ಆರೋಪಿ ಎಂ.ಪುಟ್ಟ ತಮ್ಮಡಿ ಹೇಳುವ ಪ್ರಕಾರ, ಮೂಲ ಸೌಕರ್ಯಕ್ಕೆ ಒತ್ತಾಯಿಸಿ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಇಂಡಿಗನತ್ತ ಗ್ರಾಮಸ್ಥರು ಮೆಂದಾರೆ ಗ್ರಾಮದವರನ್ನು ಸಭೆ ಸೇರಿಸಿ ಎರಡೂ ಗ್ರಾಮದವರಿಗೂ ಸರ್ಕಾರ ಯಾವುದೇ ಮೂಲ ಸೌಕರ್ಯ ನೀಡಿಲ್ಲ.
ಆ ಒಂದು ಕ್ಷಣ ಕೆಲವರು ಕೋಪದ ಕೈಗೆ ಬುದ್ಧಿ ಕೊಟ್ಟು ಊರೇ ಹೊತ್ತಿ ಉರಿಯುವಂತಾಗಿ ಈಗ ಜೈಲು ಸೇರಿರುವವರಿಗೆ ಬಂದೊದಗಿರುವ ಸಂಕಟಕ್ಕೆ ಯಾರನ್ನು ದೂರುವುದು? ಇಂತಹದೊಂದು ಘಟನೆ ನಡೆಯುವ ವಾಸನೆ ತಿಳಿದು ಮೊದಲೇ ಎಚ್ಚೆತ್ತುಕೊಳ್ಳದ ಅಧಿಕಾರಿಗಳನ್ನೇ? ಕಡ್ಡಿನ ಗುಡ್ಡೆ ಮಾಡಿದಂತೆ ಜಮಾವಣೆಯಾಗುತ್ತಿದ್ದ ಜನರು ರೊಚ್ಚಿಗೇಳದಂತೆ ನಿಯಂತ್ರಿಸದ ಪೊಲೀಸರನ್ನೇ? ಹತ್ತಾರು ವರ್ಷಗಳಿಂದ ಸಮಸ್ಯೆ ಹೇಳಿಕೊಂಡೇ ಬರುತ್ತಿದ್ದರೂ ಬಗೆಹರಿಸದೆ ನಿರ್ಲಕ್ಷಿಸಿದ ಜನಪ್ರತಿನಿಧಿಗಳನ್ನೇ? ಕಿಡಿಗೇಡಿಗಳನ್ನು ಹತೋಟಿಯಲ್ಲಿಡದ ಊರಿನ ಹಿರಿಯರನ್ನೇ? ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಕಳೆದ 3 ಚುನಾವಣೆಗಳಲ್ಲಿ ಮತದಾನ ಬಹಿಷ್ಕಾರದ ಎಚ್ಚರಿಕೆ ನೀಡಿದಾಗಲೂ ಕೆಲ ಭರವಸೆಗಳನ್ನು ಈಡೇರಿಸುವ ಮಾತುಗಳನ್ನಾಡಿ ಚುನಾವಣೆ ಮುಗಿದ ನಂತರ ಕ್ಯಾರೆ ಎಂದಿಲ್ಲ. ಹಾಗಾಗಿ ಈ ಬಾರಿ ಎರಡೂ ಗ್ರಾಮದವರು ಯಾವುದೇ ಕಾರಣಕ್ಕೂ ಮತದಾನ ಮಾಡುವುದು ಬೇಡ ಎಂದು ತೀರ್ಮಾನ ತೆಗೆದುಕೊಂಡಿದ್ದರಂತೆ. ಇದಕ್ಕೆ ಮೆಂದಾರೆ ಗ್ರಾಮದವರು ಒಪ್ಪಿಕೊಂಡಿದ್ದರಂತೆ. ಅದರಂತೆ ಮತದಾನದ ದಿನ ಮಧ್ಯಾಹ್ನದವರೆಗೆ ಎರಡೂ ಗ್ರಾಮದವರು ಮತಗಟ್ಟೆಯತ್ತ ತಿರುಗಿಯೂ ನೋಡದೆ ಮುಗುಮ್ಮಾಗಿದ್ದರಂತೆ.
ಈ ನಡುವೆ ಅಧಿಕಾರಿಗಳು, ಪೊಲೀಸರು ಮೆಂದಾರೆಯತ್ತ ತೆರಳಿದ್ದರಂತೆ. ಆ ವೇಳೆ ಕುತೂಹಲಕ್ಕೆ ಎಂ.ಪುಟ್ಟ ತಮ್ಮಡಿ ಮತ್ತಿತರರು ಮೆಂದಾರೆ ದಾರಿಯಲ್ಲಿ ಸ್ವಲ್ಪ ದೂರ ತೆರಳಿ ನೋಡಿದಾಗ ಅತ್ತಲಿಂದ ಮೆಂದಾರೆ ಪೋಡಿನ ಪುರುಷರು ಮತ್ತು ಮಹಿಳೆಯರು ಪೊಲೀಸರೊಂದಿಗೆ ಬರುತ್ತಿದ್ದರು. ಇದನ್ನು ನೋಡಿದ ಎಂ.ಪುಟ್ಟ ತಮ್ಮಡಿ, ಬೇ.ಪುಟ್ಟ ತಮ್ಮಡಿ, ನಾಗ ತಮ್ಮಡಿ, ಹುಚ್ಚ ತಮ್ಮಡಿ, ರವಿ, ಚಂದ್ರಶೇಖರ, ಜಗದೀಶ ಸೇರಿದಂತೆ ಹಲವು ಪುರುಷರು ಹಾಗೂ ಕೆಲ ಮಹಿಳೆಯರು ಮೆಂದಾರೆ ಗ್ರಾಮಸ್ಥರಿಗೆ ಎದುರಾಗಿ ಇಬ್ಬರೂ ಒಟ್ಟಿಗೆ ಸೇರಿ ಚುನಾವಣೆ ಬಹಿಷ್ಕರಿಸಿದ್ದು, ಈಗ ನೀವು ಮಾತ್ರ ಮತದಾನ ಮಾಡಲು ಹೊರಟರೆ ಸರಿಯಾಗುವುದಿಲ್ಲ. ಹಾಗಾಗಿ ನೀವು ಮತದಾನ ಮಾಡುವುದು ಬೇಡ ಎಂದು ಮನವಿ ಮಾಡಿದರಂತೆ. ಅಷ್ಟರಲ್ಲಿ ಪೊಲೀಸರು ಎಲ್ಲರನ್ನೂ ಒಳಗೆ ಹಾಕಿಬಿಡುತ್ತೇವೆ ಎಂದು ಇವರನ್ನು ಬೆದರಿಸಿದರಂತೆ. ಈ ವೇಳೆ ಮೆಂದಾರೆ ಗ್ರಾಮಸ್ಥರು, ನಿಮ್ಮ ನಿರ್ಧಾರ ನಿಮ್ಮದು, ನಾವು ಮತದಾನ ಮಾಡುತ್ತೇವೆ ಎಂದು ಹೇಳಿ ಇಂಡಿಗನತ್ತ ಗ್ರಾಮದತ್ತ ತೆರಳಿದರಂತೆ.
ಈ ಅನಿರೀಕ್ಷಿತ ನಡಾವಳಿಯಿಂದ ವಿಚಲಿತರಾದ ಎಂ.ಪುಟ್ಟ ತಮ್ಮಡಿ ಮತ್ತಿತರರು ಅಸಹಾಯಕರಾಗಿ ಅಲ್ಲೇ ನಿಂತುಬಿಟ್ಟರಂತೆ. ಇದಾದ ಕೆಲ ಸಮಯದಲ್ಲೇ ಇಂಡಿಗನತ್ತ ಗ್ರಾಮದಲ್ಲಿ ಕೂಗಾಟದ ಸದ್ದು ಕೇಳಿ ಎಂ.ಪುಟ್ಟ ತಮ್ಮಡಿ ಮತ್ತಿತರರು ಮತಗಟ್ಟೆಯತ್ತ ದೃಷ್ಟಿ ನೆಟ್ಟು ಅತ್ತ ದೌಡಾಯಿಸಿದಾಗ ಮತಗಟ್ಟೆ ಮುಂಭಾಗದಲ್ಲಿ ಬಹಳಷ್ಟು ಮಹಿಳೆಯರು ಸೇರಿ ಮಾತಿಗೆ ಮಾತು ಜೋರಾಗಿ ನಡೆಯುತ್ತಿತ್ತಂತೆ. ಇವರು ಸ್ಥಳಕ್ಕೆ ತೆರಳುವ ಮುನ್ನವೇ ಕಣ್ಣು ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ಕಹಿ ಘಟನೆ ನಡೆದುಹೋಗಿತ್ತಂತೆ.
ಅದರಲ್ಲಿ ಯಾರದು ತಪ್ಪು? ಯಾರದು ಸರಿ? ಯಾರು ಏನು ಮಾಡಿದರು? ಕಲ್ಲು ತೂರಿದವರು ಯಾರು? ಬೆಂಕಿ ಹಚ್ಚಿದವರು ಯಾರು? ಹಲ್ಲೆ ಮಾಡಿದವರು ಯಾರು? ಏನೊಂದೂ ತಿಳಿಯದೆ ಇವರುಗಳು ಗರಬಡಿದವರಂತೆ ನಿಂತಿದ್ದರಂತೆ. ಅಷ್ಟರಲ್ಲಿ ಘಟನೆಗೆ ಇವರುಗಳು ಕಾರಣ ಎಂದು ತಿಳಿದು ಪೊಲೀಸರು ಇವರನ್ನು ಎಳೆದು ತಂದಿದ್ದಾರಂತೆ.
ಈ ಪ್ರಕರಣವನ್ನು ಒತ್ತಟ್ಟಿಗೆ ಇರಿಸಿ ನೋಡುವುದಾದರೆ ಎಂ.ಪುಟ್ಟ ತಮ್ಮಡಿ ಅವರು ‘ನಮಗೆ ಹಕ್ಕೇ ಇಲ್ಲವೆ? ನಮ್ಮ ಹಕ್ಕನ್ನು ನಾವು ಕೇಳಬಾರದೆ? ಇದೆಲ್ಲವನ್ನು ನೋಡುತ್ತಿದ್ದರೆ ನಮಗೆ ಹಕ್ಕೇ ಇಲ್ಲ ಅನಿಸುತ್ತದೆ. ಮೂಲ ಸೌಲಭ್ಯ ನೀಡಲು ಸರ್ಕಾರದವರು ಮುಂದೆ ಬರಲ್ಲ, ಬಂದರೂ ಫಾರೆಸ್ಟ್‌ನವರು ಬಿಡಲ್ಲ. ಹೀಗಾದ ಮೇಲೆ ನಾವೆಲ್ಲ ಮನುಷ್ಯರಾಗಿ ಯಾಕೆ ಬದುಕಿರಬೇಕು’ ಎಂದು ಬೆನ್ನು ಬಾಗಿಸಿ ಯಾತನಾಮಯವಾಗಿ ನುಡಿದಾಗ ಮೂಲ ಸೌಲಭ್ಯಕ್ಕಾಗಿ ಈ ಕುಗ್ರಾಮಗಳವರು ಪಡುತ್ತಿರುವ ಪಾಡು, ಯಾತನಾಮಯ ಬದುಕು, ಇದರ ಮೂಲದಿಂದಲೇ ಹುಟ್ಟಿಕೊಂಡ ಮತಗಟ್ಟೆ ಧ್ವಂಸ ಪ್ರಕರಣ. ಆ ಕಾರಣಕ್ಕಾಗಿ ಇವರು ಜೈಲು ಸೇರುವಂತಾಗಿ ಈಗ ಜೈಲು ಕಂಬಿಯ ಹಿಂದೆ ನಿಂತು ಕೊರಗುತ್ತಿದ್ದಾರೆ.
ಊರಿನಲ್ಲಿ ತಮ್ಮವರು ಏನು ಮಾಡುತ್ತಿದ್ದಾರೆ? ಮಕ್ಕಳು-ಮರಿ ಕಥೆಯೇನು? ಅವರಿಗೆ ಅನ್ನಬಟ್ಟೆ ನೀಡುವವರಾರು? ಬೆಳದು ನಿಂತ ಹೆಣ್ಣು ಮಕ್ಕಳನ್ನು ಮದುವೆ ಮಾಡಿಕೊಡಬೇಕು. ಮದುವೆ ಮಾಡುವುದಾದರು ಎಲ್ಲಿಗೆ, ಇಲ್ಲಿನ ಸಮಸ್ಯೆಗಳಿಂದ ಯಾರೂ ತಮ್ಮೂರಿನತ್ತ ಕಾಲೇ ಇಡುತ್ತಿಲ್ಲ. ಬೆಳೆಯುತ್ತಿರುವ ಮಕ್ಕಳನ್ನು ಓದಲು ಎಲ್ಲಿಗೆ ಕಳುಹಿಸುವುದು? ತಮಗೆ ಜಾಮೀನು ಸಿಗುವುದೆ? ಸಿಕ್ಕರೂ ಜಾಮೀನುಕೊಟ್ಟು ಕರೆದೊಯ್ಯುವವರಾರು, ಜೈಲುವಾಸವೇ ಖಾಯಂ ಆದರೆ ತಮ ಕುಟುಂಬಗಳ ಗತಿಯೇನು? ಹೀಗೆ ನೂರಾರು ಪ್ರಶ್ನೆಗಳಿಗೆ ಉತ್ತರವಿಲ್ಲದೆ ಜೈಲು ಕಂಬಿಯ ಹಿಂದೆ ನಿಂತು ಆಸರೆಯ ಕೈಗಳಿಗೆ ಎದುರು ನೋಡುತ್ತಿದ್ದಾರೆ.
ತಮ್ಮ ಪೋಷಕರನ್ನು ಪೊಲೀಸರು ಬಂಧಿಸಿರುವುದರಿಂದ ಅಂಗನವಾಡಿ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮಕ್ಕಳು. ಸ್ವತಂತ್ರ ಅಂದ್ರೆ ಏನು ಸಾ, ಸ್ವತಂತ್ರ ಅಂದ್ರೆ ಹೆಂಗಿದ್ದದು, ಸ್ವತಂತ್ರ ನಮಗೆಲ್ಲಿ ಸಿಕ್ಕಿದದು? ನಮಗಿನ್ನು ಸ್ವತಂತ್ರ ಬಂದಿಲ್ಲ. ಊರಲ್ಲಿ ಏನ್ ನಡಿತಾ ಇದೆ ಅಂತ ಗೊತ್ತಿಲ್ಲ, ನಾವು ಹೊರಗೆ ಹೋಗೋದರೊಳಗೆ ನಮ್ಮ ಮಕ್ಕಳು ಮರಿಗೆ ಏನಾಗುತ್ತೋ ಅಂತ ಭಯ.
-ಬೇ.ಪುಟ್ಟ ತಮ್ಮಡಿ, ಜೈಲಿನಲ್ಲಿರುವ ಇಂಡಿಗನತ್ತ ಗ್ರಾಮಸ್ಥ
ಮತಗಟ್ಟೆ ಧ್ವಂಸ ಪ್ರಕರಣ ಸಂಬಂಧ ಗ್ರಾಮದ 46 ಮಂದಿ ಮೇಲೆ ದಾಖಲಾದ ಪ್ರಕರಣಗಳ ವಿವರ
307 – ಕೊಲೆ ಯತ್ನ (ಜಾಮೀನು ರಹಿತ)
436 – ಮನೆ ಮತ್ತು ವಾಸಯೋಗ್ಯದ ಕಟ್ಟಡ ನಾಶಕ್ಕೆ ಬೆಂಕಿ (ಜಾಮೀನು ರಹಿತ)
427 – ಆಸ್ತಿಗೆ ಹಾನಿ ಮಾಡುವುದು. (ಜಾ. ರ)
354 – ಮಹಿಳೆ ಮೇಲೆ ಅತ್ಯಾಚಾರಕ್ಕೆ ಹಾಗೂ ಹಲ್ಲೆ ಯತ್ನ (ಜಾ. ರ)
353 – ನೌಕರರ ಕರ್ತವ್ಯಕ್ಕೆ ಅಡ್ಡಿ (ಜಾ. ರ)
143 – ಅಕ್ರಮ ಕೂಟ ರಚನೆ
147 – ದೊಂಬಿ
148 – ಅಕ್ರಮ ಕೂಟ ಸೇರಿ ಮಾರಕಾಸ್ತ್ರಗಳಿಂದ ದೊಂಬಿ, ಗಲಾಟೆ
341 – ವ್ಯಕ್ತಿಯ ಅಕ್ರಮ ಬಂಧನ
342 – ಅಕ್ರಮವಾಗಿ ವ್ಯಕ್ತಿಯನ್ನು ಬಂಧನದಲ್ಲಿ ರಚಿಸಿದವರಿಗೆ ದಂಡನೆ
332 – ಕರ್ತವ್ಯ ನಿರತ ಸರ್ಕಾರಿ ನೌಕರನ ಮೇಲೆ ಹಲ್ಲೆ
149 – ಅಪರಾಧಿಕ ಕೃತ್ಯ ಎಸಗಲು ಅಕ್ರಮ ಕೂಟ ರಚಿಸಿ ಮಾಡಿದ ಕೃತ್ಯ
134 (ಬಿ) – ಶಸ್ತ್ರಸಜ್ಜಿತವಾಗಿ ಮತಗಟ್ಟೆಗೆ ಹೋಗುವುದು
135 – ಮತ ಪತ್ರ ಅಥವಾ ಮತಯಂತ್ರವನ್ನು ಅಕ್ರಮವಾಗಿ ಕೊಂಡೊಯ್ಯುವುದು
135 (ಎ) – ಮತಗಟ್ಟೆಯನ್ನು ಅಕ್ರಮವಾಗಿ ವಶಕ್ಕೆ ಪಡೆದು ಕೃತ್ಯ ಎಸಗುವುದು
136 ಆರ್‌ಪಿ ಆಕ್ಟ್ – ಇತರೆ ಅಪರಾಧಗಳನ್ನು ಎಸಗಿದ್ದಕ್ಕಾಗಿ ದಂಡ ವಿಧಿಸುವುದು