Mysore
33
few clouds

Social Media

ಮಂಗಳವಾರ, 22 ಏಪ್ರಿಲ 2025
Light
Dark

‘ನಾ ಆಸ್ಪತ್ರೆ ಸೇರಿದರೆ ಕುಟುಂಬದ ಗತಿಯೇನು?’

ಆಸ್ಪತ್ರೆ ಸೇರಲು ಒಲ್ಲೆ ಎಂದ ಪುಟ್ಟಮ್ಮ :  ಆಂದೋಲನ ವರದಿಗೆ ಸ್ಪಂದಿಸಿ ಇಂಡಿಗನತ್ತ ಗ್ರಾಮಕ್ಕೆ ಬಂದ ಆರೋಗ್ಯ ಇಲಾಖೆ ಸಿಬ್ಬಂದಿ ವಾಪಸ್‌

ಹನೂರು: ಎಲ್ಲವೂ ಅಂದುಕೊಂಡಂತೆ ನಡೆದರೆ ಸೊಂಟ ನೋವಿನಿಂದ ಹಾಸಿಗೆ ಹಿಡಿದಿರುವ ಇಂಡಿಗನತ್ತ ಗ್ರಾಮದ ಪುಟ್ಟಮ್ಮ ಮಂಗಳವಾರ ಆಸ್ಪತ್ರೆಗೆ ದಾಖಲಾಗಬೇಕಿತ್ತು. ಆದರೆ ಇಂಡಿಗನತ್ತದ ಜನರು ಇದೀಗ ಊರಿಗೆ ಯಾರೇ ಬಂದರೂ ತಮ್ಮನ್ನು ಜೈಲಿಗೆ ಒಯ್ಯಲುಬಂದಿದ್ದಾರೆಂಬಭೀತಿಯಲ್ಲಿದ್ದಾರೆ. ತಮ್ಮನ್ನು ಆಸ್ಪತ್ರೆಗೆ ಸೇರಿಸಲು ಬಂದ ಮಲೆ ಮಹದೇಶ್ವರ ಬೆಟ್ಟದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಮನವೊಲಿಕೆಗೆ ಒಪ್ಪದ ಪುಟ್ಟಮ್ಮ ತಾವು ಮನೆಯಲ್ಲಿಯೇ ಚಿಕಿತ್ಸೆ ಪಡೆಯುವುದಾಗಿ ಪಟ್ಟು ಹಿಡಿದರು. ಇದರಿಂದ ವರದಿಗೆ ಸಿಬ್ಬಂದಿ ಮರುಮಾತಿಲ್ಲದೇ ಸಂದನೆ ವಾಪಸಾಗಬೇಕಾಯಿತು.

‘ಆಂದೋಲನ’ ಪತ್ರಿಕೆಯಲ್ಲಿ ಸೋಮವಾರ ಪ್ರಕಟಗೊಂಡ ‘ಪುಟ್ಟಮನಿಗೆ ಬೇಕಿದೆ ಚಿಕಿತ್ಸೆ- ಆಸ್ಪತ್ರೆಗೆ ಸೇರಿಸುವವರಿಲ್ಲ’ ಎಂಬ ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು, ಪುಟ್ಟಮ್ಮನ ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ಮಂಗಳವಾರ ಆರೋಗ್ಯ ಸಿಬ್ಬಂದಿ ಮಲೆ ಮಹದೇಶ್ವರ ಬೆಟ್ಟಗಳ ನಡುವೆ ಇರುವ ಪುಟ್ಟಮ್ಮ ಅವರ ಮನೆಗೆ ಭೇಟಿ ನೀಡಿದ್ದರು.

ಗಾಯಾಳು ಪುಟ್ಟಮ್ಮ ಅವರ ಪತಿ ಪುಟ್ಟತಂಬಡಿ ಅವರನ್ನು ಭೇಟಿ ಮಾಡಿದ ಆಸ್ಪತ್ರೆಯ ಸಿಬ್ಬಂದಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲದ ಉಪ ವಿಭಾಗದ ಆಸ್ಪತ್ರೆ ಅಥವಾ ಚಾಮರಾಜನಗರದ ಹೊರವಲಯದ ಸಿಮ್ಸ್ ಬೋಧನಾ ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದರು. ಇದಕ್ಕೆ ಒಪ್ಪದ ಪಟ್ಟತಂಬಡಿ ಅವರು, “ನನ್ನ ಪತ್ನಿ ಹಾಸಿಗೆ ಹಿಡಿದು ವರ್ಷವಾಗಿದೆ. ಗ್ರಾಮದ ಬೀದಿಯಲ್ಲಿ ನಡೆದು ಹೋಗುವಾಗ ಹಸುವೊಂದು ತಿವಿದು ನೆಲಕ್ಕೆ ಬಿದ್ದು ಗಾಯಗೊಂಡಿದ್ದರು.

ಸೊಂಟಕ್ಕೆ ಪೆಟ್ಟಾಗಿ ತಮಿಳುನಾಡಿನ ಅಂದಿಯೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಆಗಿದೆ. ಆದರೂ ಆಕೆಗೆ ನಡೆಯಲು ಆಗುತ್ತಿಲ್ಲ. ಇದಾದ ಬಳಿಕ ಮೂರಾಲ್ಕು ಬಾರಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಆದರೂ ವಾಸಿಯಾ ಗದೆ ಹಾಸಿಗೆ ಹಿಡಿದಿದ್ದಾರೆ” ಎಂದರು.

ಕಳೆದ ಒಂದು ವರ್ಷದಿಂದ ಮನೆಯಲ್ಲೇ ಇದ್ದಾರೆ. ವಯಸ್ಸಾಗಿರುವ ಈಕೆಯನ್ನು ಈಗ ಆಸ್ಪತ್ರೆಗೆ ದಾಖಲಿಸಿದರೆ ಅವರನ್ನು ನೋಡಿಕೊಳ್ಳಲು ಜನರಿಲ್ಲ. ಸಾಧ್ಯವಾದರೆ ಮನೆಯಲ್ಲೇ ಚಿಕಿತ್ಸೆ ಕೊಡಿಸಿ ಎಂದು ಪುಟ್ಟ ತಂಬಡಿ ಅವರು ಮನವಿ ಮಾಡಿದರು.

ಇದಕ್ಕೆ ಒಪ್ಪಿದ ಆರೋಗ್ಯ ಸಿಬ್ಬಂದಿ, ಅಂದಿಯೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ಮಾಡಿಸಿರುವ ಸಂಬಂಧ ಇರುವ ದಾಖಲೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿರುವ ಚೀಟಿಗಳನ್ನು ತೆಗೆದು ಕೊಂಡು ಮಲೆ ಮಹದೇಶ್ವರ ಬೆಟ್ಟದ ಸರ್ಕಾರಿ ಆಸ್ಪತ್ರೆಗೆ ತರಲು ತಿಳಿಸಿದರು.

ಅವು ಗಳನ್ನು ಪರಿಶೀಲಿಸಿ ಪುಟ್ಟಮ್ಮ ಅವರಿಗೆ ಮುಂದಿನ ಚಿಕಿತ್ಸೆಯನ್ನು ಮನೆಯಲ್ಲೇ ನೀಡಲು ಕ್ರಮ ವಹಿಸಲಾಗುವುದು ಎಂದರು. ಪುಟ್ಟತಂಬಡಿ ಅವರು ಇದಕ್ಕೆ ಒಪ್ಪಿಕೊಂಡು ಬುಧವಾರ ಬೆಳಿಗ್ಗೆ ದಾಖಲೆಗಳನ್ನು ಆಸ್ಪತ್ರೆಗೆ ತರಲಾಗು ವುದು ಎಂದು ತಿಳಿಸಿ ಬೆಟ್ಟದ ಆಸ್ಪತ್ರೆಯ ಸಿಬ್ಬಂದಿಯನ್ನು ವಾಪಸ್ ಕಳುಹಿಸಿದರು.

ಪುಟ್ಟಮ್ಮ ಅವರ ಮಗ ಏಪ್ರಿಲ್ 26ರ ಮತಗಟ್ಟೆ ಧ್ವಂಸ ಪ್ರಕರಣ ಸಂಬಂಧ ಪೊಲೀಸರ ಬಂಧನ ಭೀತಿಯಿಂದ ತಲೆಮರೆಸಿ ಕೊಂಡಿದ್ದಾರೆ. ಪತಿ ಪುಟ್ಟ ತಂಬಡಿ ಅವರಿಗೂ ವಯಸ್ಸಾಗಿದೆ. ಪುತ್ರಿ ರಾಜಮ್ಮ ಅವರ ಆರೋಗ್ಯವೂ ಚೆನ್ನಾಗಿಲ್ಲ. ಈ ಕಾರಣದಿಂದ ಪುಟ್ಟಮ್ಮ ಅವರಿಗೆ ಚಿಕಿತ್ಸೆ ಕೊಡಿಸುವ  ಆರೋಗ್ಯ ಸಿಬ್ಬಂದಿ ಯತ್ನ ಕೈಗೂಡಲಿಲ್ಲ.

ಮೂಳೆ ನೋವಿನಿಂದ ಹಾಸಿಗೆ ಹಿಡಿದಿರುವ ಪುಟ್ಟಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲು ಅವರ ಮನೆಯವರು ಒಪ್ಪುತ್ತಿಲ್ಲ. ಅಲ್ಲದೆ ಪುಟ್ಟಮ್ಮ ಕೂಡ ಆಸ್ಪತ್ರೆಗೆ ಬರಲು ನಿರಾಕರಿಸಿದ್ದಾರೆ. ಆದ್ದರಿಂದ ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು.

-ಡಾ.ಪ್ರಕಾಶ್, ತಾಲ್ಲೂಕು ಆರೋಗ್ಯಾಧಿಕಾರಿ, ಹನೂರು

Tags: