ಚಾಮರಾಜನಗರ: ತಾಲ್ಲೂಕಿನ ಸಂತೆಮರಹಳ್ಳಿಯ ಮನೆಯೊಂದರಲ್ಲಿ ಹಾಡಹಗಲೇ ಕಳ್ಳತನ ಮಾಡಿದ್ದ ಆರೋಪಿಯನ್ನು ಕೃತ್ಯ ನಡೆದ ೨೪ ಗಂಟೆಯೊಳಗೆ ಸ್ಥಳೀಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಗರದ ಬಸವೇಶ್ವರ ಚಲನಚಿತ್ರ ಮಂದಿರದ ಹಿಂಭಾಗದ ಬಡಾವಣೆಯ ನಿವಾಸಿ ರಾಜೇಶ (೩೫) ಬಂಧಿತ ಆರೋಪಿ. ಸಂತೇಮರಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಸ್ಟಾಫ್ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ನೇತ್ರಾವತಿ ಎಂಬುವರ ಮನೆಯಲ್ಲಿ ವಸತಿ ಗೃಹದ ಬೀಗ ಮುರಿದು ಒಡವೆ, ಟಿವಿ, ಸಿಲಿಂಡರ್ ಸೇರಿದಂತೆ ೩.೩೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಬಂಧಿತ ಆರೋಪಿ ದೋಚಿದ್ದ.
ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ನೇತ್ರವತಿ ದೂರು ದಾಖಲಿಸಿದ್ದರು. ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮನಿ ಸಾಹು ಅವರ ನಿರ್ದೇಶನದ ತಂಡ ಕ್ಷಿಪ್ರ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾಗಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಚರಣೆಯಲ್ಲಿ ಇನ್ಸ್‌ಪೆಕ್ಟರ್ ಬಸವರಾಜ್, ಸಬ್ ಇನ್ಸ್‌ಪೆಕ್ಟರ್ ಚಂದ್ರಹಾಸ್ ನಾಯಕ್, ಅಪರಾಧ ವಿಭಾಗದ ಪಿಎಸ್‌ಐ ಮಂಜುನಾಥ್, ಎಎಸ್‌ಐ ಎಂ.ಎಸ್.ಗಿರೀಶ್, ಸಿಬ್ಬಂದಿ ರಮೇಶ್, ಸುಂದ್ರಪ್ಪ, ಸುರೇಶ್ ಇತರರು ಹಾಜರಿದ್ದರು.