Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಪ್ರಸಾದ್ ಗಟ್ಟಿಯಾದ ಧ್ವನಿ ಬಿಟ್ಟು ಹೋಗಿದ್ದಾರೆ : ಆರ್.ಮಹಾದೇವಪ್ಪ

ಮೈಸೂರು: ಹಳ್ಳಿಗಾಡಿನಿಂದ ಬಂದಂತಹ ಅದೆಷ್ಟೋ ವಿದ್ಯಾರ್ಥಿಗಳಿಗೆ ಅಶೋಕಪುರಂ ಆಶ್ರಯ ತಾಣವಾಗಿತ್ತು. ಇದೊಂದು ಸಾಂಸ್ಕೃತಿಕ ಕೇಂದ್ರವೂ ಹೌದು. ಇಲ್ಲಿ ಹುಟ್ಟಿ ಬೆಳೆದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಗಟ್ಟಿಯಾದ ಧ್ವನಿಯನ್ನು ಬಿಟ್ಟು ಹೋಗಿದ್ದಾರೆ ಎಂದು ಕರ್ನಾಟಕ ಬುದ್ಧ ಧಮ್ಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಮಹಾದೇವಪ್ಪ ತಿಳಿಸಿದರು.

ವಿಜಯನಗರ ೧ನೇ ಹಂತದ ಡಿ.ಸಂಜೀವ್ಯ ಸ್ಮಾರಕ ಶಿಕ್ಷಣ ಸಂಸ್ಥೆಯ ಆವರಣದಲ್ಲಿರುವ ಬುದ್ಧ ವಿಹಾರದಲ್ಲಿ ಕರ್ನಾಟಕ ಬುದ್ಧ ಧಮ್ಮ ಸಮಿತಿಯಲ್ಲಿ ಶನಿವಾರ ಸಂಜೆ ನಡೆದ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪ್ರಸಾದ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬದನವಾಳು ಗಲಾಟೆ ನಂತರ ದಲಿತರ ಮೇಲಿನ ದೌರ್ಜನ್ಯ ಒಂದಷ್ಟು ಕಡಿಮೆಯಾದವು. ಈ ಪ್ರಕರಣವು ವಿ.ಶ್ರೀನಿವಾಸ ಪ್ರಸಾದ್ ಅವರಿಗೆ ದೊಡ್ಡ ನಾಯಕತ್ವ ತಂದು ಕೊಟ್ಟಿತು. ಅಲ್ಲಿಂದ ದಲಿತ ಸಮುದಾಯಕ್ಕೆ ಗಟ್ಟಿಯಾದ ಧ್ವನಿಯಾಗಿದ್ದರು. ದಲಿತ ರಾಜಕಾರಣದಲ್ಲಿ ಪ್ರಸ್ತುತ ಇಂತಹ ಗಟ್ಟಿತನ, ಎದೆಗಾರಿಕೆವುಳ್ಳ ಧ್ವನಿ ಇರುವ ನಾಯಕ ಅನಿವಾರ್ಯ ಎಂದರು.

ಸಮಿತಿಯ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ ಮಾತನಾಡಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ತಮ್ಮ ರಾಜಕೀಯ ಜೀವನವನ್ನು ಜನಸಂಘದಿಂದ ಪ್ರಾರಂಭಿಸಿ, ಜನಸಂಘದಿಂದಲೇ ಅವರು ರಾಜಕೀಯ ನಿವೃತ್ತಿಯನ್ನು ಘೋಷಿಸಿದರು. ಆದರೆ, ಅವರ ರಾಜಕೀಯ ಜೀವನದಲ್ಲಿ ದಲಿತ ಸಮುದಾಯಕ್ಕೆ ಹಾಗೂ ಅವರ ಹೆಸರಿನಲ್ಲಿ ಶಾಲೆ-ಕಾಲೇಜು, ಆಸ್ಪತ್ರೆ ಹೀಗೆ ಗುರುತರವಾದಂತಹದ್ದನ್ನು ಬಿಟ್ಟು ಹೋಗದಿರುವುದು ನೋವಿನ ಸಂಗತಿ ಎಂದರು.

ಪತ್ರಕರ್ತ ದೀಪಕ್ ಮಾತನಾಡಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಗಟ್ಟಿತನ ಎಲ್ಲರಿಗೂ ಮಾದರಿ. ಪ್ರಸಾದ್ ಒಬ್ಬ ದಲಿತ ಪಾಳೇಗಾರರಾಗಿದ್ದರು. ದಲಿತರಿಗೆ ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲವೂ ಸಿಕ್ಕಿದೆ. ಆದರೆ, ಧ್ವನಿ ಇದ್ದು ಇಲ್ಲದವರಂತಾಗಿದ್ದರು. ಇದನ್ನು ಯಶಸ್ವಿಯಾಗಿ ಶ್ರೀನಿವಾಸ ಪ್ರಸಾದ್ ನಿಭಾಯಿಸಿದ್ದರು. ಆದರೆ, ಅವರ ಇತ್ತೀಚಿನ ರಾಜಕೀಯ ನಡೆ ಸಮುದಾಯಕ್ಕೆ ಬೇಸರ ತರಿಸಿತು ಎಂದರು.

ಮುಖಂಡ ಬಿ.ಎಂ.ಲಿಂಗರಾಜ್ ಮಾತನಾಡಿ, ವಿ.ಶ್ರೀನಿವಾಸ ಪ್ರಸಾದ್‌ರವರು ಎದೆಗಾರಿಕೆ ಇದ್ದ ವ್ಯಕ್ತಿ. ಪ್ರಾವಾಣಿಕವಾಗಿ ರಾಜಕಾರಣ ಮಾಡಿದರು. ಯಾವುದೇ ಭ್ರಷ್ಟಾಚಾರವಿಲ್ಲದೆ ರಾಜಕೀಯ ಜೀವನ ನಡೆಸಿದರು. ಆದರೆ, ಅವರ ನಂತರದ  ರಾಜಕಾರಣಿಯನ್ನು ಹುಟ್ಟು ಹಾಕದಿರುವುದು ಬೇಸರದ ಸಂಗತಿ ಎಂದರು.

ಕಾರ್ಯಕ್ರಮಕ್ಕೂ ಮುನ್ನ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ನಿಧನಕ್ಕೆ ಎರಡು ನಿಮಿಷಗಳ ಕಾಲ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದ ಸಮ್ಮುಖವನ್ನು ಬೌದ್ಧಬಿಕ್ಕು ಸೋದೆ ಭಂತೇಜಿ ವಹಿಸಿದ್ದರು. ಸಮಿತಿಯ ಸಹ ಕಾರ್ದಯರ್ಶಿ ಎಚ್.ಶಿವರಾಜ್, ಖಜಾಂಚಿ ಎಂ.ಸಾವಕಾಯ, ನಿವೃತ್ತ ಇಂಜಿನಿಯರ್ ಆರ್.ನಟರಾಜು, ರಾಜು ಹಂಪಾಪುರ, ಪುಟ್ಟಸ್ವಾಮಿ, ನಿಸರ್ಗ ಸಿದ್ದರಾಜು, ಮಹದೇವಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಅಹಿಂದ ಜವರಪ್ಪ, ಸಾಹಿತಿ ಕೃಷ್ಣಮೂರ್ತಿ ಚಮರಂ, ಮಲ್ಕುಂಡಿ ಮಹದೇವಸ್ವಾಮಿ, ಪಿ.ಸಂಬ್ಯು, ಹರಕುಮಾರ್, ಬಸವಣ್ಣ, ರಾಘವೇಂದ್ರ ಅಪುರಾ, ಕ್ರಾಂತಿರಾಜ್ ಒಡೆಯರ್, ವಿಜಯಕುವಾರ್, ವಿಶಾಲ್, ವಿವಿಧ ದಲಿತಪರ ಸಂಘಟನೆಗಳ ಮುಖಂಡರು, ಸಮಿತಿಯ ಪದಾಧಿಕಾರಿಗಳು ಹಾಜರಿದ್ದರು.

Tags: