Mysore
19
broken clouds

Social Media

ಮಂಗಳವಾರ, 30 ಡಿಸೆಂಬರ್ 2025
Light
Dark

ಮಂಡ್ಯದ ಗೌಡ್ಕೆ, ಸ್ವಾಭಿಮಾನ ಹೊರಗಿನವರಿಗೆ ಕೊಟ್ಟ ಇತಿಹಾಸವಿಲ್ಲ: ಡಿಸಿಎಂ ಡಿಕೆ ಶಿವಕುಮಾರ್

ಮಂಡ್ಯ: ವಿಧಾನಸಭೆ ಚುನಾವಣೆಯಲ್ಲಿ 6 ಕ್ಷೇತ್ರವನ್ನು ಗೆದ್ದು ಬೀಗಿದ್ದ ಕಾಂಗ್ರೆಸ್‌, ಇದೀಗ ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡುತ್ತಿದೆ. ಮಂಡ್ಯ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ(ಸ್ಟಾರ್‌ ಚಂದ್ರು) ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್‌, ಸಚಿವ ಎನ್‌ ಚಲುವರಾಯಸ್ವಾಮಿ, ಜಿಲ್ಲಾ ವ್ಯಾಪ್ತಿಯ ಎಂಟು ಮಂದಿ ಕೈ ಶಾಸಕರು ಸಾಥ್‌ ನೀಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್‌, ಎಚ್.​ಡಿ. ಕುಮಾರಸ್ವಾಮಿ ಅವರು ಕಮಲದ ಧ್ವಜ ಹಾಕಿದ್ದಾರೆ, ಇದು ಅವರು ಬದುಕಿದ್ದು ಸತ್ತಂತೆ. ಈ ರಾಜಕಾರಣ ನೋಡಿದರೆ ನಾಚಿಗೆ ಆಗುತ್ತೆ. ಪುಟ್ಟರಾಜು ಅವರು ಟಿಕೆಟ್​ಗಾಗಿ ಕಾದು ಕುಳಿತಿದ್ದರು, ಇದೀಗ ಗೋವಿಂದ ಎಂದು ಲೇವಡಿ ಮಾಡಿದರು.

ಮಂಡ್ಯದ ಗೌಡ್ಕೆ, ಸ್ವಾಭಿಮಾನ ಹೊರಗಿನವರಿಗೆ ಕೊಟ್ಟಿರುವ ಇತಿಹಾಸವಿಲ್ಲ. ಎಸ್‌.ಎಂ ಕೃಷ್ಣ, ಕೆ.ವಿ ಶಂಕರೇಗೌಡ, ಜಿ.ಮಾದೇಗೌಡ, ಅಂಬರೀಶ್‌ ಹಾದಿಯಾಗಿ ಜಿಲ್ಲೆಯರನ್ನೇ ಆರಿಸಿ ಸಂಸತ್‌ಗೆ ಕಳುಹಿಸಿದ್ದೀರಿ, ಇಂದು ಕೂಡ ನೀವು ನಿಮ್ಮ ಗೌಡ್ಕೆಯನ್ನು ನಿಮ್ಮ ಜನರ ಕೈಗೆ ಕೊಡಿ ಎಂದಿದ್ದಾರೆ.

ಸ್ವಾರ್ಥದ ಮಾತಿಗೆ ಮಂಡ್ಯ ಜನ ಮರುಳಾಗಬೇಡಿ, ಸ್ಟಾರ್‌ ಚಂದ್ರು ಅವರ ನಾಮಪತ್ರ ಮಂಡ್ಯ ಜನರ ಸ್ವಾಭಿಮಾನದ ನಾಮಪತ್ರವಾಗಿದೆ. ಕಾಂಗ್ರೆಸ್‌ ಕರ್ನಾಟಕದಲ್ಲಿ 9 ಮಂದಿ ಒಕ್ಕಲಿಗರಿಗೆ ಲೋಕ ಟಿಕೆಟ್‌ ನೀಡಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ 6 ಜನ ಕೈ ಶಾಸಕರನ್ನು ಆರಿಸುವ ಮೂಲಕ ನನಗೆ ಬೆಂಬಲ ನೀಡಿದ್ದೀರಿ, ನಿಮ್ಮ ಆಯ್ಕೆ ಉಸಿಯಾಗುವುದಿಲ್ಲ ಎನ್ನುವ ಮೂಲಕ ಮುಖ್ಯಮಂತ್ರಿ ಆಸೆಯನ್ನು ಡಿಕೆಶಿ ಮಂಡ್ಯದ ಜನರಿಗೆ ತಿಳಿಸಿದ್ದಾರೆ.

ಮತದಾನ ಮಾಡುವ ದಿನ ನೀವು ಕಾಂಗ್ರೆಸ್‌ಗೆ ಮತ ನೀಡಿದ್ದ ಶಬ್ದ ಮೋದಿಗೆ ಕೇಳಬೇಕು. ಮಂಡ್ಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವುದು ವೆಂಕಟರಮಣೇಗೌಡ ಮಾತ್ರವಲ್ಲ, ಡಿಕೆ ಶಿವಕುಮಾರ್‌ ಆದ ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರೇ ಇಲ್ಲಿ ಸ್ಪರ್ಧಿಸಿದ್ದಾರೆ ಎಂದು ತಿಳಿದು ನೀವು ಕಾಂಗ್ರೆಸ್‌ಗೆ ಮತ ನೀಡಿ ಎಂದಿದ್ದಾರೆ.

Tags:
error: Content is protected !!