ಬೆಂಗಳೂರು: ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ – ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಮಂಡ್ಯ ಕ್ಷೇತ್ರ ಬಿಜೆಪಿ ಕೈತಪ್ಪಿ ಜೆಡಿಎಸ್ ಪಾಲಾಗಿದೆ. ಈ ಬಗ್ಗೆ ಕ್ಷೇತ್ರದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅಸಮಾಧಾನಗೊಂಡಿದ್ದಾರೆ.
ಸುಮಲತಾ ಅವರ ಮನವೊಲಿಸಲು ಇಂದು ( ಮಾರ್ಚ್ 29 ) ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಂಸದೆಯ ಜೆಪಿ ನಗರದ ನಿವಾಸಕ್ಕೆ ಭೇಟಿ ನೀಡಿದ್ದರು. ವಿಜಯೇಂದ್ರ ಭೇಟಿ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ಸುಮಲತಾ ಚುನಾವಣೆಗೆ ಬೆಂಬಲ ನೀಡಬೇಕೆಂದು ವಿಜಯೇಂದ್ರ ಕೇಳಿದ್ದಾರೆ. ಆದರೆ ಬೆಂಬಲಿಗರ ಸಭೆ ಬಳಿಕ ನನ್ನ ನಿಲುವನ್ನು ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಮಂಡ್ಯ ಕ್ಷೇತ್ರ ಬಿಟ್ಟು ಹೋಗುತ್ತೇನೆ ಎಂದೂ ಹೇಳಿಲ್ಲ. ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳಬೇಕಿತ್ತು. ನಾಳೆ ( ಮಾರ್ಚ್ 30 ) ಬೆಂಬಲಿಗರ ಜತೆ ಸಭೆ ನಡೆಸುತ್ತಿದ್ದೇನೆ. ನನ್ನು ನಿಲುವನ್ನು ಮಂಡ್ಯದಲ್ಲಿಯೇ, ಬೆಂಬಲಿಗರ ಮುಂದೆಯೇ ತಿಳಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ.