ಮೈಸೂರು: ಗಮಕ ಕಲೆ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿಯೇ ಕಾವ್ಯ ಮತ್ತು ಗಾಯನವನ್ನು ಒಳಗೊಂಡಿರುವ ವೈಶಿಷ್ಟ್ಯ ಪೂರ್ಣವಾದ ಕಲೆಯಾಗಿದೆ. ಇದಕ್ಕೆ ಕಾರಣ ನಮ್ಮ ಕನ್ನಡ ಸಾಹಿತ್ಯದಲ್ಲಿರುವ ಕಾವ್ಯ ಸಂಪತ್ತು ಎಂದು ಸಂಸ್ಕೃತ ವಿದ್ವಾಂಸ ಡಾ.ಎಚ್.ವಿ.ನಾಗರಾಜರಾವ್ ಅಭಿಪ್ರಾಯಪಟ್ಟರು.
ಕುಮಾರ ವ್ಯಾಸ ಪ್ರಶಸ್ತಿ ಪುರಸ್ಕೃತ ಗಮಕಿ ಕೃ.ರಾಮಚಂದ್ರ ಅವರ ಅಭಿನಂದನಾ ಕಾರ್ಯಕ್ರಮವನ್ನು ನಗರದ ಜೆಎಲ್ ಬಿ ರಸ್ತೆಯ ಬಳಿ ಇರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತವೂ ಸೇರಿದಂತೆ ಜಗತ್ತಿನ ಯಾವ ಭಾಷೆಯಲ್ಲೂ ಇಲ್ಲದ ಷಟ್ಪದಿ ಸಾಹಿತ್ಯ ಕನ್ನಡ ಭಾಷೆಯಲ್ಲಿರುವುದು ಕನ್ನಡ ಸಾಹಿತ್ಯದ ವಿಶೇಷವಾಗಿದೆ ಎಂದರು.
ಕನ್ನಡ ಸಾಹಿತ್ಯದಲ್ಲಿ ಷಟ್ಪದಿ ಸಾಹಿತ್ಯ ಇರುವುದರಿಂದಲೇ ವೈಶಿಷ್ಟ್ಯ ಪೂರ್ಣವಾಗಿ ಗಮಕ ಕಲೆ ಬೆಳೆದಿದೆ. ಗಮಕ ಕಲೆಯಲ್ಲಿ ಗಾಯನಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಈ ಕಲೆಯಲ್ಲಿ ಒಂದೊಂದು ಅಕ್ಷರವನ್ನೂ ಗಮನದಲ್ಲಿಟ್ಟುಕೊಂಡು ಉಚ್ಚಾರಣೆ ಮಾಡಬೇಕು. ಗಮಕವನ್ನು ಹಾಡುವುದರ ಜೊತೆಗೆ ವ್ಯಾಖ್ಯಾನ ಮಾಡುವುದೂ ಅಷ್ಟೇ ಮುಖ್ಯವಾಗಿದೆ. ಇಂತಹ ಶ್ರೇಷ್ಠವಾದ ಗಮಕ ಕಲೆಯನ್ನು ಬೆಳೆಸುವಲ್ಲಿ ಕೃ. ರಾಮಚಂದ್ರ ಅವರ ಪಾತ್ರ ದೊಡ್ಡದಿದೆ ಎಂದು ಅವರು ತಿಳಿಸಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಗಮಕ ಕಲೆಯು, ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಇರುವ ಒಂದು ಮಾಧ್ಯಮವಾಗಿದೆ. ಎಲ್ಲಾ ಕೃತಿಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಗಮಕವಾಚನ ಮತ್ತು ವ್ಯಾಖ್ಯಾನವನ್ನು ಕೇಳಿದಾಗ ಕೃತೀಯ ಆಶಯ ಅರ್ಥವಾಗುತ್ತದೆ. ಗಮಕ ಕಲೆ ಸಂಗೀತ ಮತ್ತು ಸಾಹಿತ್ಯದ ಸಮನ್ವಯ ರೂಪವಾಗಿದೆ ಎಂದು ಅವರು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಗಮಕಿ ಕೃ.ರಾಮಚಂದ್ರ ಮತ್ತು ತುಳಸಿ ರಾಮಚಂದ್ರ ಅವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಹಿತಿ ನಾಡೋಜ ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು