ಕೊಲ್ಕತ್ತಾ: ರಸೆಲ್ ಅವರ ತುಫಾನ್ ಬ್ಯಾಟಿಂಗ್ ಹಾಗೂ ಹರ್ಷಿತ್ ರಾಣಾ ಅವರ ಸಮಯೋಚಿತ ಬೌಲಿಂಗ್ ದಾಳಿಗೆ ಮಂಕಾದ ಪ್ಯಾಟ್ ಕಮಿನ್ಸ್ ಪಡೆ 4 ರನ್‌ಗಳ ಅಂತರದಿಂದ ಸೋಲನುಭವಿಸಿದೆ.
ಇಲ್ಲಿನ ಈಡೆನ್ ಗಾರ್ಡನ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಹದಿನೇಳನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕೆಕೆಆರ್ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 208 ರನ್ ಕಲೆ ಹಾಕಿ 209 ರನ್ ಗುರಿ ನೀಡಿದರು. ಇದನ್ನು ಬೆನ್ನತ್ತಿದ ಎಸ್‌ಆರ್‌ಎಚ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 204 ರನ್ ಕಲೆಹಾಕಿ 4 ರನ್ ಅಂತದ ಸೋಲು ಕಂಡಿತು.
ಮೊದಲು ಬ್ಯಾಟ್ ಮಾಡಿದ ಕೆಕೆಆರ್‌ಗೆ ನಿರೀಕ್ಷಿತ ಆರಂಭ ಸಿಗಲಿಲ್ಲ. ಸುನೀಲ್ ನರೈನ್ ಕೇವಲ 2 ರನ್ ಗಳಿಗೆ ನಿರ್ಗಮಿಸಿದರೇ, ವೆಂಕಟೇಶ್ ಅಯ್ಯರ್ (7)ಕ್ಕೆ ಸುಸ್ತಾದರು. ನಂತರ ಬಂದ ನಾಯಕ ನಟರಾಜನ್ ದಾಳಿಗೆ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿದರು. ನಿತೀಶ್ ರಾಣಾ ಕೇವಲ (9) ರನ್ ಬಾರಿಸಿ ಹಿಂದಿರುಗಿದರು.
ಒಂದೆಡೆ ವಿಕೆಟ್ ಬೀಳುತ್ತಿದ್ದರು ದೃತಿಗೆಡದ ಪಿಲಿಪ್ ಸಾಲ್ಟ್ 40 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 3 ಬೌಂಡರಿ ಮೂಲಕ 54 ರನ್ ಬಾರಿಸಿ ತಂಡಕ್ಕೆ ಆಸರೆಯಾದರು.
ರಮಣ್‌ದೀಪ್ ಸಿಂಗ್ (35), ರಿಂಕು ಸಿಂಗ್ (23) ಸ್ವಲ್ಪ ಚೇತರಿಕೆಯ ಆಟವಾಡಿದರು. ನಂತರ ಬಂದ ರಸೆಲ್ ಮನ ಬಂದಂತೆ ಹೈದರಾಬಾದ್ ತಂಡ್ ಬೌಲರ್‌ಗಳನ್ನು ಚಚ್ಚಿದರು. ಕೇವಲ 25 ಎಸೆತಗಳಲ್ಲಿ 3 ಬೌಂಡರಿ ಮತ್ತು ಭರ್ಜರಿ 7 ಸಿಕ್ಸರ್ ಸಹಿತ 64 ರನ್ ಕಲೆ ಹಾಕಿ ತಂಡವನ್ನು ಇನ್ನೂರರ ಗಡಿ ದಾಟಿಸಿದರು.
ಹೈದರಾಬಾದ್ ಪರ ನಟರಾಜನ್ 3, ಮಾರ್ಕಂಡೆ 2 ವಿಕೆಟ್ ಪಡೆದು ಗಮನ ಸೆಳೆದರು.
ಈ ಬೃಹತ್ ಮೊತ್ತ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಮಯಾಂಕ್ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಅಭೀಷೇಕ್ ಶರ್ಮಾ ಜೋಡಿ ಕೇವಲ 5.3 ಓವರ್‌ಗಳಲ್ಲಿಯೇ 61 ರನ್ ಬಾರಿಸಿ ಕೆಕೆಆರ್ ಬೌಲರ್‌ಗಳನ್ನು ಕಾಡಿದರು. ಈ ಇಬ್ಬರು ತಲಾ 32 ರನ್ ಬಾರಿಸಿ ಔಟಾಗಿ ಹೊರ ನಡೆದರು. ಬಳಿಕ ಬಂದ ರಾಹುಲ್ ತ್ರಿಪಾಟಿ (20), ಐಡೆನ್ ಮಾರ್ಕ್ರಂ (18), ಅಬುಲ್ ಸಮದ್ (15) ರನ್ ಗಳಿಸಿದರು.
ಕೊನೆಯಲ್ಲಿ ಕ್ಲಾಸೆನ್ ಹಾಗೂ ಷಹಬಾಜ್ ಅಬ್ಬರಿಸಿದರು. ಕೇವಲ 5 ಎಸೆತಗಳಲ್ಲಿ 16 ರನ್ ಬಾರಿಸಿ ಷಹಬಾಜ್ ನಿರ್ಗಮಿಸಿದರು. ಆದರೆ ಮತ್ತೊಂದು ಕಡೆ ಭದ್ರವಾಗಿ ನಿಂತಿದ್ದ ಕ್ಲಾಸೆನ್ 29 ಎಸೆತ ಎದುರಿಸಿ 8 ಸಿಕ್ಸರ್ ಸಹಿತ 63 ರನ್ ಬಾರಿಸಿ ಕೆಕೆಆರ್ ಕನಸನ್ನು ಕಸಿದುಬಿಟ್ಟರು ಎಂದೇ ಭಾವಿಸಲಾಗಿತ್ತು. ಕೊನೆ ಓವರ್‌ನಲ್ಲಿ ಕ್ಲಾಸೆನ್ ಔಟ್ ಮಾಡಿದ ಹರ್ಷಿತ್ ರಾಣಾ ಪಂದ್ಯವನ್ನು ಉಳಿಸಿಬಿಟ್ಟರು. ಕೊನೆಯ ಎಸೆತಕ್ಕೆ ಐದು ರನ್ ಬೇಕಾಗಿದ್ದಾಗ ನಾಯಕ ಪ್ಯಾಟ್ ಕಮಿನ್ಸ್‌ಗೆ ಡಾಟ್ ಬಾಲ್ ಹಾಕುವ ಮೂಲಕ ಕೆಕೆಆರ್ ಗೆಲುವಿಗೆ ಕಾರಣರಾದರು.
ಕೆಕೆಆರ್ ಪರ ಹರ್ಷಿತ್ ರಾಣಾ 3, ರಸೆಲ್ 2 ವಿಕೆಟ್ ಪಡೆದು ಮಿಂಚಿದರು.