Mysore
25
clear sky

Social Media

ಸೋಮವಾರ, 29 ಡಿಸೆಂಬರ್ 2025
Light
Dark

ತಾಯ್ನಾಡಿಗೆ ಮರಳಿದ ಶಿಲ್ಪಿ ಅರುಣ್‌ ಯೋಗಿರಾಜ್‌ಗೆ ಅದ್ದೂರಿ ಸ್ವಾಗತ

ಅಯೋಧ್ಯೆ ರಾಮಮಂದಿರದ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಕನ್ನಡಿಗ, ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿದ್ದ ರಾಮಲಲ್ಲಾ ವಿಗ್ರಹವನ್ನು ಪ್ರಾಣಪ್ರತಿಷ್ಠೆಯ ದಿನ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗಿದೆ.

ರಾಮಮಂದಿರದಲ್ಲಿ ಸ್ಥಾಪಿಸಲು ರಾಮಲಲ್ಲಾ ವಿಗ್ರಹವನ್ನು ಕೆತ್ತುವ ಜವಾಬ್ದಾರಿಯನ್ನು ದೇಶದ ವಿವಿಧ ಶಿಲ್ಪಿಗಳಿಗೆ ವಹಿಸಲಾಗಿತ್ತು. ಈ ಪೈಕಿ ಪ್ರಾಣಪ್ರತಿಷ್ಠಾಪನೆಗೆ ಮೈಸೂರಿನ ಅರುಣ್‌ ಯೋಗಿರಾಜ್‌ ಕೆತ್ತಿದ ರಾಮಲಲ್ಲಾ ಮೂರ್ತಿ ಆಯ್ಕೆಯಾಯಿತು.

ಅರುಣ್‌ ಕೆತ್ತಿದ್ದ ರಾಮಲಲ್ಲಾ ಮೂರ್ತಿ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಪ್ರಾಣಪ್ರತಿಷ್ಠೆಗೂ ಮುನ್ನ ಇದರ ಚಿತ್ರ ಸೋರಿಕೆಯಾದಾಗ ಇಂಟರ್‌ನೆಟ್‌ನಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿ ಮೆಚ್ಚುಗೆ ಪಡೆದುಕೊಂಡಿತ್ತು. ಹೀಗೆ ತನ್ನ ಅದ್ಭುತ ಕೆತ್ತನೆ ಕಲೆ ಮೂಲಕ ದೇಶವ್ಯಾಪಿ ಜನಪ್ರಿಯತೆ ಗಳಿಸಿದ ಅರುಣ್‌ ಯೋಗಿರಾಜ್‌ ಅಯೋಧ್ಯೆಯಿಂದ ಸದ್ಯ ತಾಯ್ನಾಡಿಗೆ ಮರಳಿದ್ದಾರೆ.

ಅರುಣ್‌ ಯೋಗಿರಾಜ್‌ ವಿಮಾನದ ಮೂಲಕ ಬೆಂಗಳೂರಿನ ದೇವನಹಳ್ಳಿ ಸಮೀಪದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅರುಣ್‌ ಯೋಗಿರಾಜ್‌ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿದ್ದಂತೆ ಹಾರ ಹಾಕಿ, ಜೈ ಶ್ರೀರಾಮ್‌ ಘೋಷಣೆ ಕೂಗುವ ಮೂಲಕ ಬರ ಮಾಡಿಕೊಳ್ಳಲಾಗಿದೆ. ಬಿಜೆಪಿ ಮಾಜಿ ಶಾಸಕ ನಂದೀಶ್‌ ರೆಡ್ಡಿ ಹಾಗೂ ಅನೇಕ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಹೊದಿಸಿ ಬರಮಾಡಿಕೊಂಡಿದ್ದಾರೆ.  ಈ ಸಮಯದಲ್ಲಿ ಬಿಗಿ ಪೊಲೀಸ್‌ ಭದ್ರತೆಯನ್ನೂ ಸಹ ಅರುಣ್‌ ಯೋಗಿರಾಜ್‌ ಅವರಿಗೆ ನೀಡಲಾಗಿದೆ. 

ಈ ವೇಳೆ ಮಾತನಾಡಿದ ಅರುಣ್‌ ಯೋಗಿರಾಜ್‌ ರಾಮಮಂದಿರಕ್ಕೆ 200 ಕೆಜಿ ಚಿನ್ನ ಕೊಡಲು ಜನರು ತಯಾರಾಗಿದ್ದಾರೆ, ಆದರೆ ಮೈಸೂರಿನ ರೈತನ ಜಮೀನಿನಲ್ಲಿ ಸಿಕ್ಕ ಶಿಲೆ ಕೋಟಿ ಕೋಟಿ ಭಕ್ತರ ಆರಾಧ್ಯದೈವ ರಾಮನ ಮೂರ್ತಿಗೆ ಆಯ್ಕೆಯಾಗಿದೆ. ಇದು ರಾಜ್ಯದ ಜನರಿಗೆ ಹೆಮ್ಮೆಯ ವಿಷಯ ಎಂದಿದ್ದಾರೆ. ಕಳೆದ ಏಳು ತಿಂಗಳಿನಿಂದ ಪರಿಶ್ರಮಪಟ್ಟು ವಿಗ್ರಹ ಕೆತ್ತಿದ್ದೇನೆ, ಶ್ರೀರಾಮನೇ ಕೆತ್ತನೆ ಮಾಡಿಸಿಕೊಂಡಿದ್ದಾರೆ. ರಾಮನ ವಿಗ್ರಹ ಕೆತ್ತನೆ ಅವಕಾಶ ಸಿಕ್ಕಿದ್ದು ನನ್ನ ಪೂರ್ವ ಜನ್ಮದ ಪುಣ್ಯ, ಸಣ್ಣ ಹಳ್ಳಿಯಿಂದ ಬಂದ ನನಗೆ ಈ ಅವಕಾಶ ಸಿಕ್ಕಿದ್ದು ಖುಷಿಯಿದೆ. ನನ್ನ ಕೆಲಸಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಒಬ್ಬ ಶಿಲ್ಪಿಗೆ ಇದಕ್ಕಿಂತ ಖುಷಿ ಇನ್ನೇನಿದೆ ಎಂದು ಹೇಳಿಕೆ ನೀಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!