ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಐತಿಹಾಸಿಕ ಜುಮ್ಮಾ ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ನಡೆಸುತ್ತಿರುವ ಬಗ್ಗೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್, ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಹೊಸ ಕಬ್ಬಾಳು ಗ್ರಾಮದ ಅಭಿಷೇಕ್ ಗೌಡ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಪೀಠವು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಭಾರತೀಯ ಪುರಾತತ್ವ ಸರ್ವೇಕ್ಷಣೆಯ ಮಹಾನಿರ್ದೇಶಕರು (ಎಎಸ್‌ಐ), ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಆದೇಶ ನೀಡಿದೆ.
ಶ್ರೀರಂಗಪಟ್ಟಣದಲ್ಲಿ ಟಿಪ್ಪುವಿನ ಆಳ್ವಿಕೆ ಕಾಲದಲ್ಲಿ ಜುಮ್ಮಾ ಮಸೀದಿ ನಿರ್ಮಿಸಿದ್ದು, ಇದನ್ನು ಐತಿಹಾಸಿಕ ಮತ್ತು ಪುರಾತನ ಸ್ಮಾರಕವೆಂದು ಘೋಷಿಸಲಾಗಿದೆ. ಆದರೆ ಈ ಮಸೀದಿಯಲ್ಲಿ ಅಕ್ರಮವಾಗಿ ಮದರಸಾ ಕಾರ್ಯ ನಿರ್ವಹಿಸುತ್ತಿದೆ. ಇಲ್ಲಿ 50-60ಜನ ವಿದ್ಯಾರ್ಥಿಗಳಿಗೆ ಆಹಾರ, ಹೆಚ್ಚುವರಿಯಾಗಿ ಶೌಚಾಲಯ, ಸ್ನಾನ ಗೃಹಗಳು ಅತಿಥಿ ಗೃಹ ಮತ್ತು ಅಡುಗೆ ಮನೆಯನ್ನು ನಿರ್ಮಿಸಲಾಗಿದ್ದು, ಒದ್ದೆಯಾದ ಬಟ್ಟೆಗಳನ್ನು ಆವರಣದಲ್ಲಿ ಒಣಗಲು ಬಿಡಲಾಗುತ್ತಿದೆ. ಈ ಚಟುವಟಿಕೆಗಳು ಸೆಷನ್ 7, 8 ಮತ್ತು 16ರ ನಿಯಮ ಉಲ್ಲಂಘನೆಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
2020ರ ಮೇ 20 ರಂದು ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಅತಿಕ್ರಮಣ ಮತ್ತು ಉಲ್ಲಂಘನೆಗಳನ್ನು ಪರಿಹರಿಸುವಂತೆ ಅಧಿಕಾರಿಗಳಿಗೆ ಒತ್ತಾಯಿಸಲಾಗಿದೆ. ಪುರಾತನ ಸ್ಮಾರಕವಾಗಿ ಮಸೀದಿಯನ್ನು ಸಂರಕ್ಷಿಸಬೇಕೆಂದು, ಈ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.