Mysore
20
overcast clouds
Light
Dark

ಹಿಟ್‌ ಅಂಡ್‌ ರನ್‌ ನೂತನ ಕಾನೂನು ಖಂಡಿಸಿ ಲಾರಿ ಚಾಲಕರ ಪ್ರತಿಭಟನೆ

ಕೊಳ್ಳೇಗಾಲ/ಹನೂರು : ಹಿಟ್ ಅಂಡ್ ರನ್ ಪ್ರಕರಣದಲ್ಲಿ ವಾಹನ ಚಾಲಕರಿಗೆ ಕಠಿಣ ಶಿಕ್ಷೆ ಹಾಗೂ ಹೆಚ್ಚು ದಂಡದ ಕಾನೂನು ರೂಪಿಸಿರುವುದನ್ನು ವಿರೋಧಿಸಿ ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕಿನ ರಾಮಾಪುರದಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
 
ಕೊಳ್ಳೇಗಾಲ ನಗರದ ಬಸ್‌ ನಿಲ್ದಾಣದ ಬಳಿ ಜಮಾವಣೆಗೊಂಡಿದ್ದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಮೂಲಕ ಹೊರಟು ಪ್ರಮುಖ ರಸ್ಹತೆಗಳಲ್ಲಿ ಸಾಗಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ನಂತರ ತಾಲ್ಲೂಕು ಕಚೇರಿ ತಲುಪಿ ಕೆಲಕಾಲ ಧರಣಿ ನಡೆಸಿದ್ರು.
 
ಈ ವೇಳೆ ಲಾರಿ ಚಾಲಕರು ಹಾಗೂ ಮಾಲೀಕರ ಸಂಘದ ತಾಲ್ಲೂಕು ಅಧ್ಯಕ್ಷ ಭಾಸ್ಕರ್‌ ಮಾತನಾಡಿ ನೂತನ ಕಾನೂನಿನಿಂದ ಚಾಲಕರ ಮೇಲೆ ಭಾರೀ ಪೆಟ್ಟು ಬೀಳುತ್ತದೆ. ಈ ಕಾನೂನನ್ನು ಮರು ಪರಿಶೀಲನೆ ಮಾಡಬೇಕು. ಕಾನೂನನ್ನು ವಾಪಾಸ್‌ ಪಡೆಯಬೇಕು ಎಂದು ಮನವಿ ಮಾಡಿದ್ರು. ಇನ್ನು ಹನೂರು ತಾಲ್ಲೂಕಿನ ರಾಮಾಪುರದಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರ ಸಂಘ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಮಾಜಿ ಶಾಸಕ ಆರ್ ಬಾಲರಾಜು ಹಾಗೂ ರಾಜ್ಯ ಬಿಜೆಪಿ ಒಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಜನ ಧ್ವನಿ ವೆಂಕಟೇಶ್ ಭೇಟಿ ನೀಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.
 
ಈ ವೇಳೆ ಜನ ಧ್ವನಿ ವೆಂಕಟೇಶ್ ಮಾತನಾಡಿ ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ನಿಯಮದ ಪ್ರಕಾರ ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಚಾಲಕರಿಗೆ 10 ವರ್ಷ ಜೈಲು 7 ಲಕ್ಷ ದಂಡ ವಿಧಿಸಬಹುದು ಎಂಬ ನಿಯಮದಿಂದ ಚಾಲಕರಿಗೆ ಹಾಗೂ ಮಾಲೀಕರಿಗೆ ಹೆಚ್ಚಿನ ತೊಂದರೆಯಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಚಿವರಿಗೆ ನಿಮ್ಮ ಮನವಿಯನ್ನು ಸಲ್ಲಿಸಿ ಕಾಯ್ದೆಯನ್ನು ವಾಪಸ್ ಪಡೆಯುವಂತೆ ನಾವು ಸಹ ಮನವಿ ಮಾಡಿಕೊಳ್ಳುತ್ತೇವೆ ಎಂದು ದನಿಗೂಡಿಸಿದ್ರು.
 
ಮಾಜಿ ಶಾಸಕ ಬಾಲರಾಜು ಮಾತನಾಡಿ ಬಿಎನ್ಎಸ್ ಕಾಯ್ದೆ ರದ್ದು ಮಾಡುವ ವಿಚಾರಕ್ಕೆ ಸಂಬಂಧಪಟ್ಟಂತೆ ನಿಮ್ಮ ಪ್ರತಿಭಟನೆಗೆ ನಮ್ಮ ಸಹಕಾರವು ಸಹ ಇದೆ. ಪ್ರತಿಯೊಬ್ಬ ಚಾಲಕರು ಸೂಕ್ತವಾದ ಮನಸ್ಥಿತಿ ಇಟ್ಟುಕೊಂಡು ನಡೆದರೆ ಮಾತ್ರ ಜನಜೀವನ ಚೆನ್ನಾಗಿರುತ್ತದೆ. ಚಾಲಕರ ಮುಷ್ಕರದಿಂದ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ನಾವು ಕೇಂದ್ರ ಸರ್ಕಾರಕ್ಕೆ ಒತ್ತಡ ತಂದು ನಿಮಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
 
Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ