ಮದುವೆಯಾಗುವುದಾಗಿ ನಂಬಿಸಿ 27 ವರ್ಷದ ಯುವತಿಯ ಮೇಲೆ ಹೋಟೆಲ್ ಮ್ಯಾನೇಜರ್ ಅತ್ಯಾಚಾರ ನಡೆಸಿ ಮೋಸ ಮಾಡಿರುವ ಪ್ರಕರಣ ಮೈಸೂರು ನಗರದಲ್ಲಿ ದಾಖಲಾಗಿದೆ. ಸಂತ್ರಸ್ತೆ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಆರೋಪಿ ಆಕೆಯ ಜತೆ ಸಲುಗೆ ಬೆಳೆಸಿ ಪ್ರೀತಿಯ ನಾಟಕವಾಡಿ ಬಳಿಕ ದೈಹಿಕ ಸಂಪರ್ಕ ಬೆಳೆಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿಂದೆಯೊಮ್ಮೆ ಸಂತ್ರಸ್ತೆ ಗರ್ಭವತಿಯಾದಾಗ ಬಲವಂತವಾಗಿ ಮಾತ್ರೆ ನೀಡಿ ಗರ್ಭಪಾತ ಮಾಡಿಸಿದ್ದ ಆರೋಪಿ ಮದುವೆಯಾಗುವುದಾಗಿ ನಂಬಿಸಿ ಮತ್ತೊಮ್ಮೆ ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ್ದಾನೆ. ಈ ಸಂದರ್ಭದಲ್ಲಿ ಆಕೆಯ ಬೆತ್ತಲೆ ಫೋಟೊ ಹಾಗೂ ವಿಡಿಯೊಗಳನ್ನೂ ಸಹ ಆರೋಪಿ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದಾನೆ.
ಸದ್ಯ ಗರ್ಭವತಿಯಾಗಿರುವ ಸಂತ್ರಸ್ತೆ ತನ್ನನ್ನು ಮದುವೆಯಾಗುವಂತೆ ಕೇಳಿದ್ದು, ಆರೋಪಿ ಜಾತಿನಿಂದನೆ ಮಾಡಿ ನಿರಾಕರಿಸಿದ್ದಾನೆ. ಜತೆಗೆ ಆಕೆಯ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿಯ ಬೆಂಬಲಕ್ಕೆ ಆತನ ತಂದೆ ನಿಂತಿದ್ದು ಸಂತ್ರಸ್ತೆಯನ್ನು ನಿಂದಿಸಿ ಹೊಟೇಲ್‌ನಿಂದ ತಳ್ಳಿದ್ದಾರೆ. ಇಷ್ಟೆಲ್ಲಾ ಆರೋಪವನ್ನು ಮಾಡಿರುವ ಸಂತ್ರಸ್ತೆ ತನಗೆ ವಂಚನೆ ಮಾಡಿದ ಆರೋಪಿ ಹಾಗೂ ಬೆಂಬಲ ನೀಡಿದ ಆತನ ತಂದೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಎನ್ ಆರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.





