ಮೈಸೂರು ಜಿಲ್ಲೆಯ ನಂಜನಗೂಡು ನಗರಸಭೆಯ 20ನೇ ವಾರ್ಡ್‌ನ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಕೀಲ ಮಹೇಶ್ ಅತ್ತಿಖಾನೆ ಅವರು ಜಯಭೇರಿ ಬಾರಿಸಿದ್ದಾರೆ.
ಈ ಹಿಂದೆ ಇದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದ ದೊರೆಸ್ವಾಮಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು ಹಾಗೂ ನಗರಸಭೆ ಸದಸ್ಯ ಸ್ಥಾನಕ್ಕೂ ಸಹ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ವಾರ್ಡಗೆ ಡಿಸೆಂಬರ್ 27ರಂದು ಉಪಚುನಾವಣೆ ನಡೆದಿತ್ತು. ಕಾಂಗ್ರೆಸ್ ಪಕ್ಷದಿಂದ ದೊರೆಸ್ವಾಮಿ, ಜೆಡಿಎಸ್‌ನಿಂದ ಸುಬ್ರಹ್ಮಣ್ಯ, ಪಕ್ಷೇತರ ಅಭ್ಯರ್ಥಿಯಾಗಿ ಜಯಲಕ್ಷ್ಮಿ ಹಾಗೂ ಬಿಜೆಪಿಯಿಂದ ಮಹೇಶ್ ಅತ್ತಿಖಾನೆ ಕಣಕ್ಕಿಳಿದಿದ್ದರು.
ಈ ಉಪಚುನಾವಣೆಯಲ್ಲಿ ಒಟ್ಟು 568 ಮತಗಳು ಚಲಾವಣೆಗೊಂಡಿದ್ದು, ಪಕ್ಷೇತರ ಅಭ್ಯರ್ಥಿ: 5, ಕಾಂಗ್ರೆಸ್: 186, ಬಿಜೆಪಿ: 231, ಜೆಡಿಎಸ್: 144, ನೋಟಾ: 2 ಮತಗಳನ್ನು ಪಡೆದಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವು ದಾಖಲಿಸಿದ್ದಾರೆ.





