Mysore
20
overcast clouds
Light
Dark

ಮದುವೆ ಎಂಬುದು ಮಾರುಕಟ್ಟೆಯಾದಾಗ

• ದೀಪ್ತಿ ಭದ್ರಾವತಿ

ನಮ್ಮ ವಿವಾಹ ಎನ್ನುವ ಸಂಸ್ಥೆ ಗಂಡು ಮತ್ತು ಗಂಡಿನ ಕಡೆಯವರು ಮಾತ್ರವೇ ಶ್ರೇಷ್ಠ ಎನ್ನುವ ವಿಧಿ ವಿಧಾನಗಳನ್ನು ಶಾಸ್ತ್ರಗಳನ್ನು ಹೊಂದಿದೆ. ಅದು ಹೆಣ್ಣನ್ನು, ಹೆಣ್ಣಿನ ಮನೆಯವರನ್ನು ಅದೆಷ್ಟು ನರಳಿಸುತ್ತದೆ ಎಂದರೆ ಆಕ್ಷಣದಲ್ಲಿ ಹೆತ್ತವರಿಗೆ “ತಾವು ಯಾಕಾದರೂ ಹೆಣ್ಣು ಹೆತ್ತೆವೋ” ಎನ್ನುವ ಮನಸ್ಥಿತಿಯನ್ನು ಹುಟ್ಟಿಸಿಬಿಡುತ್ತದೆ. ಸಾಲ ಸೋಲ ಮಾಡಿ ಕೇಳಿದ್ದಕ್ಕೆಲ್ಲ ‘ಹೂಂ” ಎನ್ನುತ್ತ “ಹೆಣ್ಣಿನ ಕಡೆಯವರು ತಗ್ಗಿ ಬಗ್ಗಿ ನಡೀಬೇಕು” ಎಂದು ಕೊಳ್ಳುತ್ತ. ಆಚೆ ಬದಿಯವರು ಕೊಟ್ಟ ಹಿಂಸೆಯನ್ನೆಲ್ಲ ಸಹಿಸಿ ಕೊನೆಗೆ ಕಾಶೀಯಾತ್ರೆಗೆ ಹೋಗಿ ಬರುವ ವರನ ಪಾದ ತೊಳೆದು ಒರೆಸುವ ಹೆಣ್ಣಿನ ಅಪ್ಪ ಅದೆಷ್ಟು ಹತಾಶೆಗೆ ಒಳಗಾಗುತ್ತಾನೆ ಎಂದರೆ ಊಹಿಸಲು ಸಾಧ್ಯವಿಲ್ಲ. ಇನ್ನು “ನಮ್ಮ ಮಗಳನ್ನು ಚನ್ನಾಗಿ ನೋಡಿಕೊಳ್ಳಿ” ಎಂದು ಕೈಮುಗಿದು ಬೇಡುವ ಅಮ್ಮನ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಈ ಎಲ್ಲವೂ ಕೂಡ ಆ ನಂತರ ಯಾವ ಮಟ್ಟಿನ ಪರಿಣಾಮ ಬೀರುತ್ತವೆ ಎಂದರೆ ಅವರುಗಳು ತಮ್ಮ ಮಗ ಮತ್ತು ಮಗಳಿಗೆ ಹೆಣ್ಣು ಹುಟ್ಟುವುದೇ ಬೇಡ ಎಂದುಕೊಳ್ಳುತ್ತಾರೆ.
ಹಾಗಂತ ಇಲ್ಲಿ ವರದಕ್ಷಿಣ, ವರೋಪಚಾರ, ವಾಚು,ಉಂಗುರ, ಹರಾಜು ದಲ್ಲಾಳಿಗಳ ಹಾಗೆ ನಡೆಸುವ ಯಾವ ವ್ಯವಹಾರದ ಬಗ್ಗೆಯೂ ಚರ್ಚಿಸುತ್ತಿಲ್ಲ. ಆದರೆ ಅದೆಲ್ಲವೂ ಇದರ ಭಾಗವಾದ ಕಾರಣದಿಂದಾಗಿಯೇ ಇಡೀ ಕೌಟುಂಬಿಕ ವ್ಯವಸ್ಥೆ “ಹೆಣ್ಣು ಮಕ್ಕಳು ಹುಟ್ಟುವುದೇ ಬೇಡ’ ಎನ್ನುವುದನ್ನು ಮನಗಾಣಿಸುತ್ತವೆ ಎಂದು ಮಾತ್ರ ಹೇಳಬಹುದು. ಇದಕ್ಕೆ ಪೂರಕವಾಗಿ ಒಂದೆರಡು ಘಟನೆಗಳನ್ನು ನೋಡುತ್ತ ಹೋದರೆ,… ನನ್ನ ತೀರ ಹತ್ತಿರದ ಹೆಣ್ಣು ಮಗಳ ತಂದೆ ಸಣ್ಣ ವಯಸ್ಸಿನಲ್ಲಿ ತೀರಿ ಹೋದ ಮೇಲೆ ಆಕೆಯ ಅಮ್ಮ ಹಗಲೂ ರಾತ್ರಿ ಕಷ್ಟಪಟ್ಟು ಅವಳನ್ನು ಸಾಕಿ ಅವಳನ್ನೊಂದು ಘಟ್ಟಕ್ಕೆ ತಂದು ಮದುವೆಗೆ ಆಲೋಚಿಸಿದಾಗ ನೀವು ನಂಬೀರೋ ಇಲ್ಲವೋ ಗೊತ್ತಿಲ್ಲ ಬಂದ ವರಗಳ ಮತ್ತು ಅವನ ಕಡೆಯವರ ನಡತೆಗಳು ಎಷ್ಟು ಅಸಂಬದ್ಧವಾಗಿರುತ್ತಿದ್ದವು ಎಂದರೆ “ಮಗಳ ಮದುವೆ ನಂತರ ನೀವೆಲ್ಲಿದ್ದೀರಿ? ಊಟಕ್ಕೇನು ಮಾಡ್ತೀರಿ. ಹಬ್ಬ ಹರಿದಿನ ಬಂದರೆ ಅಳಿಯ ಮಗಳನ್ನು ಕರೆದು ಕಳಿಸೋದು ಯಾರು?” ತಮಾಷೆ ಎಂದರೆ ಇದೆಲ್ಲವನ್ನು ಕೇಳುತ್ತಿದ್ದದ್ದು ಹುಡುಗನ ಅಪ್ಪ ಅಮ್ಮ ಮಾನವೀಯ ಮೌಲ್ಯಗಳೇ ಇಲ್ಲದೆ “ಹೆಣ್ಣು ತಮ್ಮ ಆಸ್ತಿ” ಎಂದು ಪರಿಗಣಿ ಸುವ ಈ ಮನಸ್ಥಿತಿ ಏನನ್ನು ಬಿಂಬಿಸ ಬಹುದು. ಆ ನಂತರ ಆ ಹೆಣ್ಣು ಮಗಳು ತನಗೇ ಪರಿಚಯವಿದ್ದ ಅಮೆರಿಕಾ ದಲ್ಲಿದ್ದ ಹುಡುಗನನ್ನು ಮದುವೆಯಾಗಿ ಹೋದಳು ಎನ್ನುವಲ್ಲಿಗೆ ಅದು ಮುಗಿ ಯಿತಾದರೂ ಹಾಗೆ ಉಳಿದುಕೊಳ್ಳುವ ಹೆಣ್ಣು ಮಕ್ಕಳು ನಮ್ಮ ನಡುವೆ ಎಷ್ಟಿಲ್ಲ. ಈಗ್ಗೆ ಕೆಲವು ವರ್ಷಗಳ ಹಿಂದಕ್ಕೆ ಕಾಲವನ್ನು ಸರಿಸಿ ನೋಡಿದರೆ ಒಂದು ಹಳ್ಳಿಯಲ್ಲಿ ಸರಿಸುಮಾರು ಇಬ್ಬರು ಮೂವರಾದರೂ ಮದುವೆಯಾಗದೆ ಹೆಣ್ಣು ಮಕ್ಕಳ ವಿವರಗಳು ಸಿಕ್ಕೇ ಸಿಗುತ್ತವೆ. ಅವರೆಲ್ಲ ಯಾವ ತಪ್ಪನ್ನೂ ಮಾಡಿದವರಲ್ಲ ಕುರೂಪಿಯರಲ್ಲ ಐಬು ಇದ್ದವರೂ ಅಲ್ಲ. ಹಾಗಿದ್ದಲ್ಲಿ ಅವರೆಲ್ಲ ಹಾಗೆ ಉಳಿದುಕೊಂಡದ್ದು ಯಾಕಾಗಿ? ನಾವೆಲ್ಲ ಸಣ್ಣವರಿದ್ದಾಗ ನಮ್ಮ ಮನೆಯ ಪಕ್ಕದಲ್ಲಿ ಒಂದು ಮನೆಯಿತ್ತು. ಅದರಲ್ಲಿ ಮೂವರು ಹೆಣ್ಣು ಮಕ್ಕಳಿದ್ದರು. ಪ್ರತಿಯೊಬ್ಬರೂ ಮದುವೆ ವಯಸ್ಸು ಮೀರಿದವರು. ನಾಲ್ಕನೆಯವಳು ಮಾತ್ರ ಬೇರೆ ಜಾತಿಯ ಯಾರನ್ನೋ ಮದುವೆಯಾದ ಕಾರಣಕ್ಕೆ ಮನೆಗೆ ಬರುತ್ತಿರಲಿಲ್ಲ.

ಅವರ ತಂದೆ ಯಾವುದೋ ಹೋಟೆಲ್ಲಿನಲ್ಲಿ ಕೆಲಸ ಮಾಡುತ್ತಿದ್ದರಂತೆ ಗಂಡಿನ ಮನೆಯವರ ಆಸೆ ಆಕಾಂಕ್ಷೆಗಳ ಈಡೇರಿಸಲಾಗದೆ, ಮಕ್ಕಳ ಮದುವೆ ಮಾಡಲಾ ಗದ ಸಂಕಟದಲ್ಲಿ ಕೊರಗಿ ಕೊರಗಿ ಹೋಗಿಬಿಟ್ಟಿದ್ದರು. ಅವರೆಲ್ಲರ ಜವಾಬ್ದಾರಿ ತೆಗೆದುಕೊಂಡು ಹೊಸ ಬದುಕು ಕಾಣಿಸುವ ಪರಿಸ್ಥಿತಿಯಲ್ಲಿ ಅವರ ಏಕಾಂಗಿ ಬಡ ಅಮ್ಮ ಇರಲಿಲ್ಲ. ಒಡ ಹುಟ್ಟಿದ ಸಂಬಂಧಿಕರಿಗೂ ಕೂಡ ಇವರೆಲ್ಲರೂ ಹೊರೆಯೇ ಆಗಿದ್ದರಿಂದ ಅವನ್ಯಾರೂ ಇವರೆಡೆಗೆ ತಿರುಗಿಯೂ ನೋಡುತ್ತಿರಲಿಲ್ಲ. ಇನ್ನು ಆಗಿನ ಕಾಲಕ್ಕೆ ವಿಪರೀತ ಹೆಣ್ಣುಗಳು ಮದುವೆಗೆ ಸಿಗುತ್ತಿದ್ದ ಕಾರಣಕ್ಕೆ ಯಾರೂ ಇವರು ನೋಡಿ “ಮನೆ ತುಂಬುವ ಹೆಣ್ಣಾದರೆ ಸಾಕು” ಎನ್ನುತ್ತ ಬರಲೇ ಇಲ್ಲ. ಹಾಗೂ ಹೀಗೂ ಅಲ್ಲಿ ಇಲ್ಲಿ ಅಲೆದು ಬಂದವರು ಕೂಡ “ಬರೀ ಹೆಣ್ಣು ಮಕ್ಕಳು ಇರೋ ಮನೆ’ ಎನ್ನುತ್ತ ಹೋಗಿದ್ದು ಅವರೆಲ್ಲರ ಈಗಿನ ಸ್ಥಿತಿಗೆ ಕಾರಣವಾಗಿತ್ತು.

ಇನ್ನು ಅದಕ್ಕೆ ಸರಿಯಾಗಿ ನಮ್ಮ ಧರ್ಮ ಶಾಸ್ತ್ರಗಳು ಕೂಡ ಹೆಣ್ಣನ್ನು ಬದಿಗಿರಿಸುತ್ತಲೇ ಬಂದಿವೆ. ಗಂಡು ಮಾತ್ರವೇ ಶ್ರೇಷ್ಠ ಎನ್ನುವ ಮಾನಸಿಕತೆಯನ್ನು ಬೇಕೋ ಬೇಡವೋ ನಮ್ಮೊಳಗೆ ಹುಟ್ಟು ಹಾಕುತ್ತಲೇ ಇರುತ್ತವೆ. ಅದು ಎಷ್ಟರ ಮಟ್ಟಿಗೆ ಎಂದರೆ, ಆರೋಗ್ಯ ಇಲಾಖೆಯಲ್ಲಿ ನನ್ನ ಜೊತೆಯಲ್ಲಿಯೇ ಕೆಲಸ ಮಾಡುತ್ತಿದ್ದ ಸ್ನೇಹಿತೆಯೊಬ್ಬಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ಚಂದದ ಸಂಸಾರ ಆದರೂ ಆಕೆಗೆ ಗಂಡು ಮಗುವಾಗಲಿಲ್ಲ ಎನ್ನುವ ಕೊರಗು ಸದಾ ಇದ್ದೇ ಇತ್ತು. ಕಾರಣ ಅವಳ ಅತ್ತೆ ಮನೆಯಲ್ಲಿ ಸಾಕಷ್ಟು ಆಸ್ತಿ ಇದ್ದದ್ದು. ಅದಕ್ಕೆ ಸರಿಯಾಗಿ ಅವಳ ವಾರಗಿತ್ತಿಗೆ ಗಂಡು ಮಗು ಹುಟ್ಟಿಯೇ ಬಿಟ್ಟಿತು. ಆಕೆ ಆ ದಿನ ಅದೆಷ್ಟು ಜೋರಾಗಿ ಅಳುತ್ತ ನಮ್ಮ ಬಳಿ ಬಂದಳು ಎಂದರೆ ನಾವೆಲ್ಲ ಗಾಬರಿಯಾಗಿಬಿಟ್ಟಿದ್ದೆವು. ಅತ್ತೆ ಮನೆಯಲ್ಲಿ ತನ್ನ ಘನತೆ ಕಡಿಮೆಯಾಯಿತು ಎನ್ನುವುದು ಆಕೆಯ ಸಂಕಟ. ಒಬ್ಬ ಓದಿದ ವಿದ್ಯಾವಂತ ಮತ್ತು ನಾಲ್ಕು ಜನರಿಗೆ ಬುದ್ಧಿ ಹೇಳಬಹುದಾದ ಕೆಲಸದಲ್ಲಿದ್ದ ಆಕೆಯೇ ಅಂತಹ ಆಲೋಚನೆಗೆ ಸಿಲುಕಿಕೊಂಡಿದ್ದಳು ಎಂದರೆ ಇನ್ನು ಅವಿದ್ಯಾವಂತ ಹೆಣ್ಣು ಮಕ್ಕಳ ಪಾಡು ಏನಿರಬಹುದು. ಅವರ ಮನೆಯವರುಗಳ ತಲ್ಲಣಗಳು ಎಂತಹದ್ದು ಇರಬಹುದು? ಯೋಚಿಸುತ್ತ ಹೋದಂತೆಲ್ಲ ಇದರ ಕರಾಳ ಮುಖಗಳು ತೆರೆದುಕೊಳ್ಳುತ್ತ ಹೋಗುತ್ತವೆ. “ಎರಡೂ ಹೆಣ್ಣಾದ ಕಾರಣಕ್ಕೆ ತನ್ನ ಮಗನಿಗೆ ಬೇರೆ ಮದುವೆ ಮಾಡಲು ಆಲೋಚಿಸುವ ತಾಯಂದಿರು”, “ಹೆಣ್ಣು ಹೆತ್ತಿದ್ದಕ್ಕೆ ಬಿಟ್ಟು ಹೋಗುವ ಗಂಡ, ತಲೆಯ ಮೇಲೆ ಕುಕ್ಕಿ ಅನ್ನ ಹಾಕುವ ಅತ್ತೆ” ಏನೆಲ್ಲ ಸಂಕಟಗಳು ಎದುರು ನಿಲ್ಲುತ್ತವೆ. ಸಾವಿರಾರು ಪುಟಗಳು ಎದುರು ನಿಲ್ಲುತ್ತವೆ. ಮುಗಿಸುವ ಮೊದಲು ಬೇಡವೆಂದರೂ ನೆನಪಾಗುವ ಈ ಘಟನೆಯನ್ನು ಹೇಳುತ್ತೇನೆ. ಆ ದಿನ ಆಸ್ಪತ್ರೆಯಲ್ಲಿ ಕಾರ್ ನಿರ್ವಹಿಸುವ ಹೊತ್ತಿಗೆ ವಾರ್ಡಿನಲ್ಲಿ ಎರಡು ದಿನಗಳ ಹಿಂದೆಯಷ್ಟೆ ಹೆರಿಗೆಯಾದ ಬಾಣಂತಿಯೊಬ್ಬಳು ನಿಧಾನಕ್ಕೆ ನಡೆದು ಬಂದು ಕೈಯಲ್ಲಿದ್ದ ಪುಟ್ಟ ಹೆಣ್ಣುಗೂಸನ್ನು ತೋರಿಸಿ “ಯಾರಿಗಾದರೂ ಬೇಕಾ ಮೇಡಂ’ ಎಂದು ಕೇಳಿದ್ದಳು. ಅವಳಿಗೆ ಬೈದು ಕಳಿಸಿದ್ದೆವಾದರೂ ಆ ಮಗು ಅವಳ ಬಳಿ ಉಳಿಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಅವಳು ತಾನೇ ಹೆತ್ತ ಜೀವವನ್ನು ಬೇರೆಯವರಿಗೆ ಕೊಡಬೇಕಾದ ಅನಿವಾರ್ಯತೆ ಏನಿರಬಹುದು ಎಣಿಸಿದರೆ ಈ ಗಳಿಗೆಯಲ್ಲಿಯೂ ಎದೆ ಝಲ್ಲೆನ್ನುತ್ತದೆ..
deepthibdvt@gmail.com

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ