Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಸರ್ಕಾರಿ ಗೌರವಗಳೊಂದಿಗೆ ನಡೆದ ನಟಿ ಲೀಲಾವತಿ ಅಂತ್ಯ ಸಂಸ್ಕಾರ

ಹಿರಿಯ ನಟಿ ಲೀಲಾವತಿ ಅವರು ತಮ್ಮ ಇಷ್ಟದ ತೋಟದಲ್ಲಿಯೇ ಮಣ್ಣಾಗಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿಯವರು ನಿನ್ನೆ (ಡಿಸೆಂಬರ್ 08) ಸಂಜೆ ನಿಧನ ಹೊಂದಿದ್ದರು. ಅವರನ್ನು ಇಂದು (ಡಿಸೆಂಬರ್ 09) ಅವರ ನೆಲಮಂಗಲದ ಬಳಿ ಸೋಲದೇವನಹಳ್ಳಿಯ ತೋಟದಲ್ಲಿ ಭಂಟ ಸಮುದಾಯದ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ಪೂರೈಸಿ ಅಂತಿಮ ಸಂಸ್ಕಾರ ಮಾಡಲಾಯಿತು.

85 ವರ್ಷ ವಯಸ್ಸಾಗಿದ್ದ ಲೀಲಾವತಿಯವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ಡಿಸೆಂಬರ್ 08) ಕೊನೆ ಉಸಿರೆಳೆದರು. ಬೆಂಗಳೂರಿನಲ್ಲಿ ಹಲವಾರು ಕಲಾವಿದರು, ರಾಜಕಾರಣಿಗಳು ಹಾಗೂ ಅಭಿಮಾನಿಗಳು ಅವರ ಅಂತಿಮ ದರ್ಶನ ಪಡೆದುಕೊಂಡರು. ನೆಲಮಂಗಲದಲ್ಲಿಯೂ ಸಹಾ ಅವರ ಅಂತಿಮ ದರ್ಶನಕ್ಕೆ ಇಲ್ಲಿನ ಅಂಬೇಡ್ಕರ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಸಹಸ್ರಾರು ಮಂದಿ ಅಭಿಮಾನಿಗಳು ಲೀಲಾವತಿ ಅವರ ಅಂತಿಮ ದರ್ಶನ ಪಡೆದುಕೊಂಡರು. ಬಳಿಕ ಇಂದು ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿಯೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ರವೀಂದ್ರ ಕಲಾಕ್ಷೇತ್ರದಿಂದ ಲೀಲಾವತಿ ಅವರ ಪಾರ್ಥಿವ ಶರೀರವನ್ನು ಅವರ ನಿವಾಸವಾಗಿದ್ದ ಸೋಲದೇವನಹಳ್ಳಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ಸಂಸ್ಕಾರಕ್ಕೆ ಸಕಲ ವ್ಯವಸ್ಥೆ ಮಾಡಲಾಗಿತ್ತು. ಅಂತಿಮ ಸಂಸ್ಕಾರ ಮಾಡುವ ಮುನ್ನ ಲೀಲಾವತಿಯವರ ಪಾರ್ಥಿವ ಶರೀರಕ್ಕೆ ಪುತ್ರ ವಿನೋದ್ ರಾಜ್​ಕುಮಾರ್ ಹಾಗೂ ಇತರರು ಪೂಜೆ ಮಾಡಿದರು. ಲೀಲಾವತಿಯವರು ಭಂಟ ಸಮುದಾಯಕ್ಕೆ ಸೇರಿದ್ದ ಕಾರಣ ಅದೇ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.

ಹೂವಿನ ಪಲ್ಲಕ್ಕಿಯ ಮೂಲಕ ಮೆರವಣಿಗೆ ಮಾಡಿ ಅಂತ್ಯಕ್ರಿಯೆ ಜಾಗಕ್ಕೆ ಬರಲಾಯಿತು. ಅದಾದ ಬಳಿಕ ವಿನೋದ್‌ ರಾಜ್‌ ಹಾಗೂ ಇತರರು ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿದರು ನಂತರ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯ್ತು, ಮೂರು ಸುತ್ತು ಬಂದೂಕು ತೋಪು ಹಾರಿಸಿ ನಮನ ಸಲ್ಲಿಸಲಾಯ್ತು

ಬಳಿಕ ಲೀಲಾವತಿ ಪುತ್ರ ವಿನೋದ್ ರಾಜ್ ಹಾಗೂ ಮೊಮ್ಮಗ ಸೇರಿ ಹಲವು ವಿಧಿ-ವಿಧಾನಗಳನ್ನು ಮಾಡಿದರು. ಸೋಲದೇವನಹಳ್ಳಿಯ ಜನತೆ, ಲೀಲಾವತಿಯವರ ಬಂಧುಗಳು, ಅಪಾರ ಸಂಖ್ಯೆಯ ಅಭಿಮಾನಿಗಳ ಸಮ್ಮುಖದಲ್ಲಿ ಲೀಲಾವತಿಯರು ಮಣ್ಣು ಸೇರಿದರು.

ವಿನೋದ್‌ ರಾಜ್‌ ಅಳಲು: ವಯೋಸಹಜದಿಂದ ಹೃದಯ ಸ್ತಂಭನ ಆಗಿಹೋಯ್ತು. ಭಗವಂತ ನನ್ನ ಒಂಟಿ ಮಾಡಿಬಿಟ್ಟ. ಆಸ್ಪತ್ರೆಗೆ ಕರೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ವೈದ್ಯರು ಬಾಯಿಗೆ ನೀರು ಬಿಡಿ ಎಂದರು, ನಾನು ನೀರು ಕೊಟ್ಟಾಗ ಕುಡಿಯುತ್ತಲೇ ಪ್ರಾಣಬಿಟ್ಟರು, ಅಮ್ಮಾ ಅಂತ ಕೂಗಿದೆ, ನಮ್ಮಿಬ್ಬರ ಬಾಂಧವ್ಯಕ್ಕೆ ಏನು ಹೇಳೋದು, ಅವರ ಆಸ್ಪತ್ರೆ ಉದ್ಘಾಟನೆ ಆಯ್ತು. ಕರುಣ ಎಂಬ ಸಂಸ್ಥೆಯಿದು, ಅದು ಪುಣ್ಯದ ಕೆಲಸ. ಈ ಪೊಲೀಸರೇ ನನ್ನ ಜೊತೆಗಿದ್ದವರು. ನಮ್ಮ ಜೊತೆ ಇವರೆಷ್ಟು ಒದ್ದಾಡಿದರು. ಇವರೇ ನನಗೆ ಅಣ್ಣ ತಮ್ಮಂದಿರು ಎಂದು ಗದ್ಗದಿತರಾದರು.

ಅಮ್ಮ ಒಂದು ಮಾತು ಹೇಳುತ್ತಿದ್ದರು, ಈಗ ನಾನಿದ್ದೇನೆ, ನನ್ನ ನಂತರ ನಿನಗೆ ಅಭಿಮಾನಿಗಳು, ವಾಹಿನಿಯವರು ಇರುತ್ತಾರೆ, ಅವರ ಜೊತೆಜೊತೆಯಾಗಿ ಸಮಾಜಪರ ಕೆಲಸ ಮಾಡಿಕೊಂಡು ಹೋಗಬೇಕು. ನಾನು ಮನೆಯಲ್ಲಿ ಸುಮ್ಮನೆ ಕುಳಿತರೆ ಹುಚ್ಚನಾಗುತ್ತೇನೆ, ಅಮ್ಮನನ್ನು ಕಳೆದುಕೊಂಡು ಇಂದು ನನಗೆ ಯಾವ ರೀತಿ ನೋವಾಗುತ್ತಿದೆ ಎಂದು ಹೇಳಲು ನನಗೆ ಸಾಧ್ಯವಿಲ್ಲ, ಅನುಭವಿಸಿದವನಿಗೇ ಗೊತ್ತು, ಕೆಲಸ ಮಾಡುತ್ತಾ.. ಮಾಡುತ್ತಾ ಆ ನೋವನ್ನು ನಾನು ಮರೆಯಬೇಕಷ್ಟೆ ಎಂದು ತಮ್ಮ ಅಳಲನ್ನು ತೋಡಿಕೊಂಡರು ವಿನೋದ್‌ ರಾಜ್‌ ಅವರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ