Mysore
23
overcast clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಖಾಲಿ ನಿವೇಶನಗಳಿಂದಾಗುವ ಕಿರಿಕಿರಿಗೆ ಪರಿಹಾರ

  • ವಸಂತಕುಮಾರ್ ಮೈಸೂರುಮಠ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸ್ವಚ್ಛತೆ ಕಾಪಾಡಲು ವಿವಿಧ ಬಗೆಯ ಕಾರ್ಯಕ್ರಮಗಳು, ಕಾರ್ಯಾಗಾರಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೆ, ಖಾಲಿ ನಿವೇಶನಗಳ ನೈರ್ಮಲ್ಯತೆ ಬಗ್ಗೆ ಯಾರೂ ಗಂಭೀರವಾಗಿ ಚಿಂತನೆ ಮಾಡುತ್ತಿಲ್ಲ. ಸಾರ್ವಜನಿಕರು ಮನೆ ನಿರ್ಮಿಸುವ ಮಹದಾಸೆಯಿಂದ ನಿವೇಶನಗಳನ್ನು ಖರೀದಿಸುತ್ತಾರೆ. ನಂತರ ಕಾರಣಾಂತರಗಳಿಂದ ಮನೆ ಕಟ್ಟಲಾಗದೆ ನಿವೇಶನವನ್ನು ಖಾಲಿ ಬಿಡುತ್ತಾರೆ; ಅಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವುದನ್ನೂ ಮರೆಯುತ್ತಾರೆ.

ಖಾಲಿ ಬಿಡುವ ನಿವೇಶನಗಳಲ್ಲಿ ಗಿಡಗಂಟಿಗಳು ಬೆಳೆದು ಹಾವು, ಚೇಳು, ಕ್ರಿಮಿ ಕೀಟಗಳ ಆವಾಸ ಸ್ಥಾನವಾಗಿ ಮಾರ್ಪಡುತ್ತದೆ. ಇದರಿಂದ ಅಕ್ಕಪಕ್ಕದ ಮನೆಗಳ ನಿವಾಸಿಗಳಿಗೆ, ದಾರಿಹೋಕರಿಗೆ ತೊಂದರೆಗಳಾಗುವ ಸಾಧ್ಯತೆಗಳಿವೆ. ಆದರೆ, ಎಲ್ಲ ನಿವೇಶನಗಳಲ್ಲಿಯೂ ಸ್ವಚ್ಛತೆ ಕಾಪಾಡಲು ನಗರಪಾಲಿಕೆ ಅಥವಾ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಕಷ್ಟಸಾಧ್ಯವಾದ ಕೆಲಸ. ಆದ್ದರಿಂದ ನಗರವಾಸಿಗಳು, ಸಾರ್ವಜನಿಕರು ನಿವೇಶನಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಕೈಜೋಡಿಸಬೇಕು. ಅಲ್ಲದೆ, ನಿವೇಶನಗಳಲ್ಲಿ ನೈರ್ಮಲ್ಯ ರಕ್ಷಣೆಗೆ ಪರ್ಯಾಯ ಮಾರ್ಗಗಳೂ ಇವೆ.

ಮೈಸೂರು ನಗರಪಾಲಿಕೆಯು ಅಂತಹ ಖಾಲಿ ನಿವೇಶನಗಳ ಮಾಲೀಕರಿಂದ ಹಣ ಪಾವತಿಸಿಕೊಳ್ಳುತ್ತಿರುವುದರಿಂದ ಅವುಗಳ ಸ್ವಚ್ಛತೆಯನ್ನು ಕಾಪಾಡುವುದು ಅದರ ಕರ್ತವ್ಯ. ಇದಕ್ಕೆ ಪರಿಹಾರ – ವರ್ಷದ ಎರಡು ತಿಂಗಳ ಮಟ್ಟಿಗೆ ಒಬ್ಬ ಆಯ್ದ ಅಭಿಯಂತರರ ಅಡಿಯಲ್ಲಿ ಸಾಕಷ್ಟು ಯಂತ್ರೋಪಕರಣಗಳ ಮತ್ತು ಕೆಲಸಗಾರರ ಜೊತೆಗೆ ಒಂದು ವಿಶೇಷ ಕಾರ್ಯಪಡೆ ರಚಿಸಿ ಪಾಲಿಕೆಯ ಸರಹದ್ದಿನಲ್ಲಿರುವ ಖಾಲಿ ನಿವೇಶಗಳನ್ನು ಸ್ವಚ್ಛಗೊಳಿಸಲಿ. ನಂತರ ಅಲ್ಲಿನ ಹಸಿ ತ್ಯಾಜ್ಯವನ್ನು ರವಾನೆ ಮಾಡಿ, ಸಂಸ್ಕರಿಸಿ ಗೊಬ್ಬರ ಮಾಡಿ, ಪೌರಕಾರ್ಮಿಕರ ಮೂಲಕ ಬೆಳಗಿನ ಪಾಳಿಯಲ್ಲಿ ನಗರವಾಸಿಗಳಿಗೆ ಮಾರಾಟ ಮಾಡಿ, ಆ ಹಣವನ್ನೂ ಅವರ ಹಿತರಕ್ಷಣೆಗಾಗಿ ಉಪಯೋಗಿಸಲಿ. ನಿವೇಶನಗಳು ಮೈಸೂರು ನಗರಾಭಿವೃದ್ಧಿ ಪ್ರಾಽಕಾರ (ಮುಡಾ)ದ ಸುಪರ್ದಿಯಲ್ಲಿದ್ದರೆ, ಪಾಲಿಕೆಯ ಪಡೆಯೇ ಅವನ್ನೂ ಸ್ವಚ್ಛಗೊಳಿಸಿ, ತಕ್ಕ ಖರ್ಚು ವೆಚ್ಚವನ್ನು ಅದರಿಂದ ವಸೂಲಿ ಮಾಡಿಕೊಳ್ಳಬಹುದು.

ವಿವಿಧ ಬಡಾವಣೆಗಳಲ್ಲಿರುವ ನಿವಾಸಿಗಳು ತಮ್ಮ ಮನೆಯ ಅಕ್ಕಪಕ್ಕದಲ್ಲಿ ಖಾಲಿ ನಿವೇಶನಗಳಿದ್ದರೆ, ಅವುಗಳಿಂದ ಆತಂಕ ಉಂಟಾಗುತ್ತಿದ್ದರೆ, ಅಂತಹ ನಿವೇಶನಗಳ ಮಾಲೀಕರನ್ನು ಸಂಪರ್ಕಿಸಿ, ಅವರಿಂದ ಅನುಮತಿ ಪಡೆದು ಆ ನಿವೇಶನಕ್ಕೆ ಮಾಲೀಕರ ಅಥವಾ ಸ್ಥಳೀಯ ನಿವಾಸಿಗಳ ಖರ್ಚಿನಲ್ಲಿಯೇ ಬೇಲಿ ಹಾಕಿಸಿ ಅಲ್ಲೊಂದು ಪುಟ್ಟ ತೋಟವನ್ನು ನಿರ್ಮಿಸಿಕೊಳ್ಳಬಹುದು. ಅವರ ಖರ್ಚಿನಲ್ಲೇ ಹೂವು, ಟೊಮೆಟೊ ಹಣ್ಣು, ಸೊಪ್ಪುಸದೆ, ಕಾಯಿಪಲ್ಯೆ ತರಕಾರಿ ಮುಂತಾದ ದಿನನಿತ್ಯದ ಸಾವಯವ ಅಗತ್ಯಗಳನ್ನು ಬೆಳೆದುಕೊಳ್ಳ ಬಹುದು ಮತ್ತು ಆ ಮಾಲೀಕರಿಗೆ, ಅವರಿಗೆ ಬೇಕಾದಾಗ ನಿವೇಶನವನ್ನು ಬಿಟ್ಟುಕೊಡುವುದಾಗಿ ಮತ್ತು ಆ ಜಾಗದಲ್ಲಿ ಮರಗಳಾಗುವ ಪ್ರಭೇದಗಳನ್ನು ನೆಡುವುದಿಲ್ಲ ಎಂದು ಒಂದು ಮುಚ್ಚಳಿಕೆ ಬರೆದುಕೊಡಬಹುದು.

ಈ ಸಕಾರಾತ್ಮಕ್ಕೆ ಸಹಭಾಗಿತ್ವಕ್ಕೆ ಯಾರ ವಿರೋಧವೂ ಇರುವುದಿಲ್ಲ. ನಗರದ ವಿವಿಧ ಸಾರ್ವಜನಿಕ ಸೇವಾ ಸಂಸ್ಥೆಗಳಾದ ನಗರಪಾಲಿಕೆ, ಮುಡಾ ತೋಟಗಾರಿಕೆ ಇಲಾಖೆ ತಮ್ಮ ಸಹಾಯ ಹಸ್ತವನ್ನು ನೀಡಿದರೆ ಒಳಿತು. ಪಾಲಿಕೆಯು ಅಂತಹ ಸ್ವಚ್ಛ ಮಾಡಿದ ನಿವೇಶನಗಳ ಮೇಲೆ ವಿಧಿಸುವ ಸ್ವಚ್ಛತಾ ಶುಲ್ಕ ವಸೂಲಿ ನಿಲ್ಲಿಸಬೇಕು; ಪಾಲಿಕೆಯ ತ್ಯಾಜ್ಯ ವಸ್ತು ಸಂಸ್ಕಾರ ಘಟಕಗಳಲ್ಲಿ ಉತ್ಪತ್ತಿಯಾಗುವ ಸಾವಯವ ಗೊಬ್ಬರವನ್ನು ಪೌರಕಾರ್ಮಿಕರ ಮೂಲಕ ಕೊಳ್ಳಲು ಇಚ್ಛೆ ಇರುವವರ ಮನೆ ಬಾಗಿಲಿಗೆ ತಲುಪಿಸಲು ಸಹಾಯ ಮಾಡಬಹುದು.

ತೋಟಗಾರಿಕೆ ಇಲಾಖೆಯವರು ನಿವಾಸಿಗಳಿಗೆ ಉತ್ತಮ ತಳಿಗಳ ಬೀಜ, ಸಸಿ ಮತ್ತು ತೋಟಗಾರಿಕೆ ಸಲಹೆಗಳನ್ನು ನೀಡಬಹುದು; ಮುಡಾ ಕೂಡ ಅಂತಹ ನಿವೇಶನಗಳಿಗೆ ಬೊಂಬಿನ ಬೇಲಿಗಳನ್ನೂ ಹಾಕಲು ಸಹಾಯಹಸ್ತ ನೀಡಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ