Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಉಗಾಂಡ

ನವದೆಹಲಿ : ಆಫ್ರಿಕಾ ಪ್ರಾಂತ್ಯದ ಕೊನೆಯ ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ರುವಾಂಡ ತಂಡವನ್ನು ಸೋಲಿಸಿ 2024ರ ಪುರುಷರ ಟಿ-20 ವಿಶ್ವಕಪ್ ಕ್ರಿಕೆಟ್ ಗೆ ಅರ್ಹತೆ ಪಡೆಯುವ ಮೂಲಕ ಉಗಾಂಡ ತಂಡವು ಇತಿಹಾಸ ನಿರ್ಮಿಸಿದೆ.

ಐಸಿಸಿ ವಿಶ್ವಕಪ್‌ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಉಗಾಂಡ ತಂಡ ಪಾಲ್ಗೊಳ್ಳಲಿದೆ. ಆ ಮೂಲಕ ನಮೀಬಿಯಾದೊಂದಿಗೆ ಟಿ-20 ವಿಶ್ವಕಪ್ ನಲ್ಲಿ ಆಡುವ ಅರ್ಹತೆ ಪಡೆದ ಎರಡನೆ ಆಫ್ರಿಕಾ ತಂಡವಾಗಿ ಉಗಾಂಡ ಹೊರಹೊಮ್ಮಿದೆ. ಆ ಮೂಲಕ ಟಿ20 ಮಾದರಿಯಲ್ಲಿ ಆಡುತ್ತಿರುವ ಐದನೇ ದೇಶವಾಗಿ ಉಗಾಂಡ ಗುರುತಿಸಿಕೊಂಡಿದೆ.

ತಾನಾಡಿದ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಗಮನಾರ್ಹ ಗೆಲುವು ಸಾಧಿಸುವ ಮೂಲಕ, ಆಫ್ರಿಕಾ ಪ್ರಾಂತ್ಯದಿಂದ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯಿತು. 2024ರಲ್ಲಿ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಾದಲ್ಲಿ ಆಯೋಜನೆಗೊಳ್ಳಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ನಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಂಡಿತು.

ಮತ್ತೊಂದೆಡೆ, ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆಯುವ ನೆಚ್ಚಿನ ತಂಡವಾಗಿದ್ದ ಜಿಂಬಾಬೈ ಕ್ವಾಲಿಫೈ ಆಗುವಲ್ಲಿ ವಿಫಲವಾಗಿದೆ. ತಾನಾಡಿರುವ ಐದು ಪಂದ್ಯಗಳ ಪೈಕಿ ಮೂರು ಪಂದ್ಯಗಳ ಗೆಲುವಿನ ಮೂಲಕ ಆರು ಅಂಕಗಳನ್ನು ಸಂಪಾದಿಸಿರುವ ಜಿಂಬಾಬೈ ತಂಡವು ಸದ್ಯ ಮೂರನೆಯ ಸ್ಥಾನದಲ್ಲಿದೆ.

ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿರುವ ಓಮನ್, ನೇಪಾಳ, ಪಪುವ ನ್ಯೂ ಗಿನಿಯ ಹಾಗೂ ಕೆನಡಾ ತಂಡಗಳೊಂದಿಗೆ ಮತ್ತೊಂದು ಆಫ್ರಿಕಾ ತಂಡವಾಗಿ ನಮೀಬಿಯಾ ಕೂಡಾ ಅರ್ಹತೆ ಗಿಟ್ಟಿಸಿದೆ. ಅತಿಥಿ ದೇಶ ಎಂಬ ಕಾರಣಕ್ಕೆ ಅಮೆರಿಕಾ ಕೂಡಾ ಟಿ-20 ಕ್ರಿಕೆಟ್ ವಿಶ್ವಕಪ್ ಗೆ ಅರ್ಹತೆ ಪಡೆದಿದೆ.

1998ರಿಂದ ಉಗಾಂಡವು ಐಸಿಸಿಯ ಸಹ ಸದಸ್ಯ ದೇಶವಾಗಿದ್ದರೂ ಈವರೆಗೆ ಅದಕ್ಕೆ ಟೆಸ್ಟ್ ಅಥವಾ ಏಕದಿನ ತಂಡದ ಸ್ಥಾನಮಾನ ದೊರೆತಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ