ಭಾರತೀಯ ಚಿತ್ರರಂಗಕ್ಕೆ ಎಐ ಮಾರಕವಾಗಿ ಪರಿಣಮಿಸಿದೆ. ಸೆಲೆಬ್ರಿಟಿಗಳಿಗೆ ಡೀಪ್‌ಫೇಕ್ ಹೊಸ ಸಮಸ್ಯೆಯಾಗಿದ್ದು, ಅದರಲ್ಲೂ ನಟಿಯರಿಗೆ ಹೆಚ್ಚಿನ ಸಮಸ್ಯೆ ತಂದೊಡ್ಡಿದೆ. ಅವುಗಳಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಡೀಪ್ ಫೇಕ್ ವೀಡಿಯೋ ಭಾರೀ ಕುತೂಹಲವನ್ನೇ ಸೃಷ್ಠಿಸಿತ್ತು. ಒಬ್ಬರ ಬಳಿಕ ಒಬ್ಬರ ಫೇಕ್ ವಿಡಿಯೋಗಳು ವೈರಲ್ ಆಗುತ್ತಿದೆ.
ಈ ಬಗ್ಗೆ ಇದೇ ಮೊದಲ ಬಾರಿಗೆ ರಶ್ಮಿಕಾ ಮಾತನಾಡಿದ್ದು, ಈ ವಿಚಾರವನ್ನು ಹಂಚಿಕೊಳ್ಳಲು ನನಗೆ ತುಂಬಾ ನೋವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದ್ರೆ ಎಐ ತಂತ್ರಜ್ಞಾನವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಬೇಡ ಎಂದುಕೊಂಡೆ. ಎಲ್ಲರೂ ಇದರ ವಿರುದ್ಧ ಮಾತನಾಡಿದ್ದು ಧೈರ್ಯ ಕೊಟ್ಟಿದ್ದಾರೆ. ಈ ವಿಷಯಗಳು ಸಾಮಾನ್ಯವಲ್ಲ, ಇದು ನಿಮಗೆ ಎದುರಾದರೆ ಮೌನವಾಗಿರಬೇಡಿ, ಮುಂದೆ ಬಂದು ಪ್ರತಿಕ್ರಿಯಿಸಿ, ನಾವು ಒಳ್ಳೆಯ ದೇಶದಲ್ಲಿದ್ದೇವೆ, ಜನ ಬೆಂಬಲಿಸುತ್ತಾರೆ ಎಂದು ಎಲ್ಲಾ ಹುಡುಗಿಯರಿಗೆ ರಶ್ಮಿಕಾ ಹೇಳಿದ್ದಾರೆ.
ವೈರಲ್ ಆಗುತ್ತಿರುವ ನನ್ನ ಡೀಪ್‌ಫೇಕ್ ವೀಡಿಯೊ ಬಗ್ಗೆ ಮಾತನಾಡಬೇಕಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೇ, ಈ ರೀತಿ ಏನಾದರೂ ಆಗುವುದು ನನಗೆ ಮಾತ್ರವಲ್ಲ, ಪ್ರತಿಯೊಬ್ಬರಿಗೂ ತುಂಬಾ ಭಯಾನಕ. ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾರಣದಿಂದಾಗಿ ಇಂದು ನಮ್ಮಲ್ಲಿ ಹಲವರು ಇಂತಹ ಘಟನೆಗಳಿಗೆ ಗುರಿಯಾಗುತ್ತಿದ್ದಾರೆ.
ಮಹಿಳೆಯಾಗಿ ಮತ್ತು ನಟಿಯಾಗಿ, ನನ್ನ ರಕ್ಷಣೆಗೆ ಮತ್ತು ಬೆಂಬಲಕ್ಕೆ ಬಂದ ನನ್ನ ಕುಟುಂಬ, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಾನು ಕೃತಜ್ಞಳಾಗಿದ್ದೇನೆ. ಆದರೆ, ನಾನು ಶಾಲೆ ಅಥವಾ ಕಾಲೇಜಿನಲ್ಲಿದ್ದಾಗ ಇಂತಹ ಘಟನೆ ನಡೆದಿದ್ದರೇ, ನಾನು ಅದನ್ನು ಹೇಗೆ ನಿಭಾಯಿಸುತ್ತಿದ್ದೇ ಎಂಬುದು ನಿಜಕ್ಕೂ ನನಗೆ ಗೊತ್ತಿಲ್ಲ. ನಮ್ಮಲ್ಲಿ ಹೆಚ್ಚಿನವರು ಇಂತಹ ಕೆಟ್ಟ ಘಟನೆಗೆ ಸಾಕ್ಷಿಯಾಗುವ ಮೊದಲು ತುರ್ತಾಗಿ ಪರಿಹರಿಸಬೇಕಾಗಿದೆ” ಎಂದು ಮನವಿ ಮಾಡಿದ್ದರು.
ರಣಬೀರ್ ಕಪೂರ್ ಮತ್ತು ರಶ್ಮಿಕಾ ನಟನೆಯ ಬಾಲಿವುಡ್ ಸಿನಿಮಾ ‘ಅನಿಮಲ್’ ಡಿಸೆಂಬರ್ 1 ರಂದು ತೆರೆಗೆ ಬರಲಿದೆ. ಇದರ ಪ್ರಚಾರಕ್ಕಾಗಿ ಅನಿಮಲ್ ತಂಡ ಹೈದರಾಬಾದ್‌ಗೆ ಹೋಗಿದ್ದ ವೇಳೆ ಮಾಧ್ಯಮಗಳ ಪ್ರಶ್ನೆಗೆ ರಶ್ಮಿಕಾ ಉತ್ತರಿಸಿದ್ದಾರೆ.