ಮೈಸೂರು : ಡಿಸೆಂಬರ್ 10 ರಿಂದ ಆರಂಭವಾಗುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಎಕದಿನ, ಟಿ20 ಮತ್ತು ಟೆಸ್ಟ್ ಸೀರಿಸ್ ಆಡಲು ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ನಡುವೆಯೇ ವಿರಾಟ್ ಕೊಹ್ಲಿ ಅಚ್ಚರಿಯ ನಡೆ ಸದ್ಯ ಭಾರೀ ಸದ್ದು ಮಾಡುತ್ತಿದೆ
ವಿಶ್ವಕಪ್ ಸೋತಾಗಿನಿಂದ ಭಾರತ ತಂಡದ ನಾಯಕ ರೊಹಿತ್ ಶರ್ಮಾ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ಅವರ ಭವಿಷ್ಯದ ಬಗ್ಗೆ ಊಹಾಪೋಹಗಳು ಹೆಚ್ಚಾಗಿವೆ. ಇದರ ಮಧ್ಯೆ ದಕ್ಷಿಣ ಆಫ್ರಿಕಾ ನಡುವಿನ ಸಿರೀಸ್ ಮೇಲೆ ನಿರಾಸಕ್ತಿ ತೋರಿರುವ ವಿರಾಟ್ ಕೊಹ್ಲಿ ನಡೆ ಬಗ್ಗೆ ಹಲವಾರು ಪ್ರಶ್ನೆಗಳು ಭುಗಿಲೆದ್ದಿವೆ. ಈ ಕುರಿತು ವಿರಾಟ್ ಕೊಹ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ರಜೆಗಾಗಿ ಲಂಡನ್‌ಗೆ ತೆರಳಿದ್ದಾರೆ.
ವಿರಾಟ್ ಕೊಹ್ಲಿ ದ.ಆಫ್ರಿಕಾ ನಡುವೆ ನಡೆಯುವ ವೈಟ್ ಬಾಲ್ ಕ್ರಿಕೆಟ್‌ನಿಂದ ವಿರಾಮ ತೆಗೆದುಕೊಳ್ಳುವುದಾಗಿ ಖುದ್ದು ತಂಡದ ಆಯ್ಕೆಗಾರರು ಮತ್ತು ಬಿಸಿಸಿಐನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಸದ್ಯ ವೈಟ್ ಬಾಲ್‌ನಿಂದ ವಿರಾಮ ಪಡೆದು ಡಿಸೆಂಬರ್ 26 ರಿಂದ ಆರಂಭವಾಗಲಿರುವ ಟೆಸ್ಟ್ ನಲ್ಲಿ ಪಾಲ್ಗೊಳ್ಳುವುದಾಗಿ ವಿರಾಟ್ ಹೇಳಿದ್ದಾರೆ ಎನ್ನಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
2024ರಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ಆತಿಥ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ವಿರಾಟ್ ಲಬ್ಯತೆ ಕುರಿತು ಈಗಾಗಲೇ ಹಲವಾರು ಪ್ರಶ್ನೆಗಳು ಉದ್ಭವಿಸಿದ್ದು, ಇದಕ್ಕೆ ಪುಷ್ಠಿ ನೀಡುವಂತೆ ದ.ಆಫ್ರಿಕಾ ವಿರುದ್ಧ ವಿರಾಟ್ ಟಿ20 ಯಲ್ಲಿ ಕಾಣಿಸಿಕೊಳ್ಳದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಭಾರತ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಫೈನಲ್ ನಲ್ಲಿ ಸೋತು ರನ್ನರ್ ಅಪ್ ಆಗಿತ್ತು. ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ ಕೋಹ್ಲಿ 3 ಶತಕ ಸಹಿತ ಸಾರ್ವಕಾಲಿಕ 791 ರನ್ ಬಾರಿಸಿ ಸರಣಿ ಪುರುಷೋತ್ತಮ ಪ್ರಶಸ್ತಿಗೂ ಭಾಜನರಾಗಿದ್ದರು.
ಭಾರತ ತಂಡ ಟೂರ್ನಿಯಲ್ಲಿ ತಾನಾಡಿದ 10 ಪಂದ್ಯಗಳನ್ನು ಗೆದ್ದು, ಫೈನಲ್‌ನಲ್ಲಿ ಮುಗ್ಗರಿಸಿತ್ತು. ಇದಾದ ಬಳಿಕ ಭಾರತ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ಕೊಹ್ಲಿ ನಿರ್ಧಾರದಿಂದ ಅಭಿಮಾನಿಗಳಲ್ಲಿ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದು, 2024 ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಆಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.