Mysore
21
overcast clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಡಿಕೆ ಶಿವಕುಮಾರ್‌ ಪ್ರಕರಣ ಸಿಬಿಐಗೆ ನೀಡಿದ್ದೇ ಕಾನೂನು ಬಾಹಿರ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದೇ ಕಾನೂನು ಬಾಹಿರವಾಗಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕಿಡಿಕಾರಿದ್ದಾರೆ.

ಇದೊಂದು ರಾಜಕೀಯ ಪ್ರೇರಿತ ಸಂಚಾಗಿದ್ದು, ಸಿಎಂ ಸಿದ್ದರಾಮಯ್ಯ, ಡಿಕೆಶಿ ಅವರನ್ನು ಕಟ್ಟಿಹಾಕುವ ಪ್ರಯತ್ನವಾಗಿದೆ ಎಂದು ಅವರು ದೂರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಇಲ್ಲಿಯವರೆಗೆ ಎಲ್ಲಾ ಪ್ರತಿ ಪಕ್ಷಗಳನ್ನು ಮುಗಿಸುವ ಸಂಚು ನಡೆಸಿದ್ದಾರೆ. ವಿರೋಧ ಪಕ್ಷದ ನಾಯಕರಿಂದ ಉಂಟಾಗುವ ತೊಂದರೆ ಅರಿತು ಅವರ ಧ್ವನಿ ಅಡಗಿಸಲು ಇಡಿ, ಸಿಬಿಐ ಮೂಲಕ ಬೆದರಿಕೆ ಹಾಕಲಾಗುತ್ತಿದೆ ಎಂದರು.

ಸಂಪುಟ ಸಭೆಯಲ್ಲಿ ಡಿಕೆ ಶಿವಕುಮಾರ್‌ ಅವರ ಮೇಲಿನ ಪ್ರಕರಣವನ್ನು ಹಿಂಪಡೆಯುವ ರಾಜ್ಯ ಸರ್ಕಾರದ ತೀರ್ಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಇದು ಕಾನೂನು ವಿಚಾರವಾದ್ದರಿಂದ ಗೊಂದಲವಿದೆ. ಇದರ ಮಧೆ ಬಿಜೆಪಿ ಹಲವಾರು ತಪ್ಪು ಮಾಹಿತಿಯನ್ನು ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಹಂಚಿಕೊಂಡು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಖರ್ಗೆ ಹಂಚಿಕೊಂಡ ಮಾಹಿತಿಯೇನು?

9-9-2019ರಂದು ಈಡಿಯಿಂದ ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ರವಾನೆಯಾಗಿ, ಅದರಲ್ಲಿ ಸೆಕ್ಷನ್ 62 ಅಡಿಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಮತ್ತಿತರರ ವಿರುದ್ಧದ ಅಕ್ರಮ ಆಸ್ತಿ ಸಂಪಾದನೆ (PMLA) ಪ್ರಕರಣದಲ್ಲಿ ಆದಾಯ ತೆರಿಗೆ ಇಲಾಖೆ ದಾಖಲಿಸಿರುವ ದೂರಿನ ಮೇಲೆ ಈಡಿ ನಡೆಸಿರುವ ತನಿಖೆಯ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ತಿಳಿಸಿತ್ತು. ಜನಪ್ರತಿನಿಧಿಗಳ ವಿರುದ್ಧ ಯಾವುದೇ ತನಿಖೆಯಾದಾಗ ಆಯಾ ರಾಜ್ಯ ಸರ್ಕಾರಕ್ಕೆ ಆ ಪ್ರಕರಣದ ಕುರಿತು ಮಾಹಿತಿ ರವಾನೆಯಾಗುತ್ತದೆ. ಈ ಮಾಹಿತಿಯನ್ನು 2-9-2019ರಂದು ಸಿಬಿಐಗೂ ರವಾನಿಸಿದ್ದೇವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

“17-9-2019ರಂದು ಎಜಿ ಅವರು ಯಾವುದೇ ಅಭಿಪ್ರಾಯ ನೀಡದೇ, ಐದು ದಿನಗಳ ಕಾಲ ಕಾಯುತ್ತಾರೆ. 24-9-2019ರಂದು ಈಡಿ ಇಲಾಖೆಯ ಮೂಲ ಪತ್ರ ಅಡ್ವಕೇಟ್ ಜನರಲ್ ಅವರ ಬಳಿ ಇದೆ ಎಂದು ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹೊಸ ಫೈಲ್ ಓಪನ್ ಮಾಡಿ, ಅದೇ ದಿನ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ತೀರ್ಮಾನ ಮಾಡಲಾಗುತ್ತದೆ. ಅಲ್ಲಿಯವರೆಗೂ ಅಡ್ವಕೇಟ್ ಜನರಲ್ ಅವರ ಅಭಿಪ್ರಾಯ ಪಡೆದಿರುವುದಿಲ್ಲ. ನಂತರ 25-9-2019ರಂದು, ಮುಖ್ಯಮಂತ್ರಿಗಳು ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಮೌಖಿಕವಾಗಿ ಆದೇಶ ನೀಡುತ್ತಾರೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಅಡ್ವಕೇಟ್ ಜನರಲ್ ಅವರ ಬಳಿ ದೂರವಾಣಿ ಮೂಲಕ ಚರ್ಚೆ ಮಾಡಿರುವುದಾಗಿ ಆಗಿನ ಮುಖ್ಯಮಂತ್ರಿ ತಿಳಿಸಿರುತ್ತಾರೆ” ಎಂದು ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ