- ಡಾ. ಐಶ್ವರ್ಯಾ ಎಸ್ ಮೂರ್ತಿ
ಯುದ್ದ ಮತ್ತು ಇತರ ಹಿಂಸಾತ್ಮಕ ಸಂದರ್ಭಗಳಲ್ಲಿ ಅತೀ ಹೆಚ್ಚು ಹಿಂಸೆ ಅನುಭವಿಸುವವರು ಮಹಿಳೆಯರು ಹಾಗೂ ಮಕ್ಕಳು ಎನ್ನುವುದನ್ನು ನಾನು ಕಣ್ಣಾರೆ ಅನುಭವಿಸಿದೆ. ಎಷ್ಟೋ ಬಾರಿ ನಮ್ಮ ಮೊಬೈಲ್ ಕ್ಲಿನಿಕ್ ಗಳಲ್ಲಿ ನಾವು ಪರೀಕ್ಷೆ ಮಾಡಿದ ನಂತರ ನಮ್ಮ ಭಾಷಾಂತರಕಾರರ ಬಳಿ ತಮ್ಮ ಸಮಸ್ಯೆಗಳ ಕುರಿತು ಬಾಯಿ ಬಿಚ್ಚಲೂ ಅವರು ಹೆದರುತ್ತಿದ್ದರು .
ನನಗೆ ಈಗಲೂ ಬಹಳಷ್ಟು ಕಾಡುವ ಒಂದು ನೆನಪೆಂದರೆ ಬುದ್ರಿ ಎಂಬ ಹುಡುಗಿಯ ಕಥೆ. ಅಲ್ಲಿ ಬಹಳಷ್ಟು ಜನ ಬುದ್ರಿ ಹೆಸರಿನವರು ಇದ್ದರು , ಕಾರಣ ಬುಧವಾರ ಹುಟ್ಟಿದ ಹೆಣ್ಣು ಮಕ್ಕಳಿಗೆ ಬುದ್ರಿ ಎಂಬ ಹೆಸರು. ಹದಿನೈದು ವರ್ಷದ ಹೆಣ್ಣುಮಗಳು ಒಮ್ಮೆ ಕ್ಲಿನಿಕ್ ಗೆ ಬಂದು ಎಷ್ಟು ಸರಿ ಕೇಳಿದರು ಏನು ಸಮಸ್ಯೆ ಎಂದು ಹೇಳದೆ ಸುಮ್ಮನೆ ಹೊರಟು ಹೋದಳು. ಮತ್ತೆ ಮೂರು ವಾರದ ನಂತರ ಕ್ಲಿನಿಕ್ ಗೆ ಬಂದಾಗ ಅವಳ ಮುಖ ಕೈಕಾಲುಗಳು ಊತ ಬಂದು ಅವಳು ಕಷ್ಟಪಟ್ಟು ಉಸಿರಾಡುತ್ತಿರುವುದನ್ನು ನೋಡಿ ತಕ್ಷಣ ಕೆಲವು ತುರ್ತು ಪರೀಕ್ಷೆಗಳನ್ನು ಮಾಡುವಂತೆ ನಮ್ಮ ಲ್ಯಾಬ್ ಅಸಿಸ್ಟೆಂಟ್ ಗೆ ತಿಳಿಸಿದೆವು. ನಿಮಗೆ ನಂಬುವುದು ಕಷ್ಟವಾಗಬಹುದು. ಅವಳ ರಕ್ತದಲ್ಲಿನ ಹಿಮೋಗ್ಲೋಬಿನ್ ಅಂಶ ಕೇವಲ ಎರಡು ಪ್ರತಿಷತವಿತ್ತು. ಕ್ಲಿನಿಕ್ ನಿಲ್ಲಿಸಿ ಅವಳನ್ನು ತಕ್ಷಣವೇ ನಮ್ಮ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತಂದು ರಕ್ತ ವರ್ಗಾವಣೆಗೆ ಅನುವು ಮಾಡಿದೆವು. ಐದು ತಿಂಗಳ ಹಿಂದೆ ಸಂಘರ್ಷ ಎರಡು ವಿರುದ್ಧ ಗುಂಪುಗಳ ನಡುವೆ ನಡೆದ ಒಂದು ಗುಂಡಿನ ದಾಳಿಯಲ್ಲಿ ಬುದ್ರಿಯ ಅಮಾಯಕ ತಂದೆ ತಾಯಿ ತೀರಿ ಹೋಗಿದ್ದರು. ಅವಳನ್ನು ಅವಳ ತಾಯಿಯ ತಂಗಿ ಸಾಕಿಕೊಂಡಿದ್ದಳು, ಈ ಸಮಯದಲ್ಲಿ ಅವಳ ಚಿಕ್ಕಪ್ಪ ಮತ್ತು ಅವನ ಮಗ ಇಬ್ಬರೂ ಸಂಘರ್ಷದ ಗುಂಪಿನ ಕೆಲವರೊಡನೆ ಸೇರಿ ಅವಳಿಗೆ ಲೈಂಗಿಕ ಕಿರುಕುಳ ಕೊಟ್ಟು, ಆ ಹೆಣ್ಣು ಮಗಳು ಸತತವಾಗಿ ರಕ್ತಸ್ರಾವ ಅನುಭವಿಸಿದ್ದು ಇಷ್ಟು ರಕ್ತಹೀನ ಸ್ಥಿತಿಗೆ ಕಾರಣವಾಗಿತ್ತು. ಮೌನ ಮುರಿದು ಆ ಹಿಂಸೆಯ ಆಘಾತದಿಂದ ಹೊರ ಬಂದು ಇಷ್ಟನ್ನು ನಮ್ಮ ಬಳಿ ಹಂಚಿಕೊಳ್ಳ ಬಹುದು ಎಂಬ ಭರವಸೆ ಆಕೆಯಲ್ಲಿ ಮೂಡಿದ್ದು ಐದಾರು ದಿನಗಳ ನಂತರವೇ . ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಇಂದ ಬುದ್ರಿ ಹುಷಾರಾದ ಮೇಲೆ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಯಿತು.
ಛತ್ತೀಸ್ ಗಢದ ಬಿಜಾಪುರ ಮತ್ತು ಮಣಿಪುರದ ಚುರಚಂದಪುರಗಳಲ್ಲಿ ಕೆಲಸ ಮಾಡುತ್ತಿದ್ದಾಗ ಈ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಮಾನಸಿಕ ಆರೈಕೆ ಮತ್ತು ಜಾಗೃತಿ ಮೂಡಿಸುವ ಕಾರ್ಯ ನಡೆದಿದ್ದವು. ಈಗ ಮಣಿಪುರದ ಸ್ಥಿತಿಯೂ ಗಂಭೀರವಾಗಿದೆ. ಬಿಜಾಪುರದಲ್ಲಿ ಒಮ್ಮೆ ಪಾಲ್ನಾರ್ ಎಂಬ ಹಳ್ಳಿಯಲ್ಲಿ ಬೆಳಿಗ್ಗೆಯೇ ಎರಡೂ ಗುಂಪುಗಳ ನಡುವೆ ದಾಳಿಯ ಸಂದರ್ಭದಲ್ಲಿ ನಮ್ಮ ಮೊಬೈಲ್ ಕ್ಲಿನಿಕ್ ಕಾಡಿನ ಮಧ್ಯೆ ತಲುಪಲು ಕಷ್ಟವಾಗಿ, ಓರ್ವ ಗೊಂಡಿ ಬುಡಕಟ್ಟಿನ ಗರ್ಭಿಣಿ ಹೆಣ್ಣುಮಗಳು ಹೆರಿಗೆ ನೋವಿನಿಂದ ರಾತ್ರಿಯಿಂದ ಬಳಲಿ, ನಾವು ಇರುವಲ್ಲಿಗೆ ಅವಳನ್ನು ಅವಳ ತಂದೆ ಮತ್ತು ಗಂಡ ಎರಡು ಉದ್ದನೆಯ ಕಟ್ಟಿಗೆಗೆ ಜೋಲಿಯಂತೆ ಬಟ್ಟೆ ಕಟ್ಟಿ ಸುಮಾರು ಎರಡು ಕಿಲೋಮೀಟರ್ ದೂರ ತಮ್ಮ ಹೆಗಲ ಮೇಲೆ ಇಟ್ಟುಕೊಂಡು ಕರೆತಂದಿದ್ದರು. ಹೆರಿಗೆ ನೋವು ಶುರುವಾಗಿ ಸುವಾರು ಗಂಟೆಗಳು ಕಳೆದಿತ್ತು, ರಕ್ತಸ್ರಾವವೂ ಇದ್ದುದರಿಂದ ತಕ್ಷಣವೇ ನಾವು ಮರದ ಕೆಳಗೆ ಇದ್ದ ಜಾಗದಲ್ಲಿ ನಾಲ್ಕು ಕಡೆಗಳಲ್ಲಿಯೂ ನಮ್ಮಲ್ಲಿದ್ದ ಹೊದಿಕೆಗಳನ್ನು ಮರೆಯಾಗಿ ಇರಿಸಿ ಹೆರಿಗೆ ಮಾಡಿಸಿ, ತಾಯಿ ಮಗುವನ್ನು ಹೆಚ್ಚಿನ ಚಿಕಿತ್ಸೆಗೆ ನಮ್ಮ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಕರೆತಂದೆವು. ಹೆಚ್ಚಿನ ಸಮಯ ರಕ್ತಸ್ರಾವ ಮುಂದುವರೆದಿದ್ದರೆ ತಾಯಿ ಮತ್ತು ಮಗುವಿನ ಜೀವಕ್ಕೆ ಅಪಾಯವಿತ್ತು. ಇನ್ನು ಎಷ್ಟು ಜನ ಮಹಿಳೆಯರು ಈ ರೀತಿಯ ತಮ್ಮದಲ್ಲದ ತಪ್ಪಿಗೆ ಈ ಸಂಘರ್ಷಗಳಲ್ಲಿ ಪರೋಕ್ಷವಾಗಿ ಹಿಂಸೆ ಅನುಭವಿಸುತ್ತಾರೆ ಎಂಬುದು ನಮ್ಮ ಊಹೆಗೆ ಮೀರಿದ್ದು. ನಾನು ಇಲ್ಲಿ ಮೈಸೂರಿನಲ್ಲಿ ಕುಳಿತು ಈ ಕುರಿತು ಯೋಚಿಸಲೂ ಭಯಪಡುತ್ತೇನೆ.