Mysore
24
scattered clouds
Light
Dark

ಬಿಜೆಪಿ ಲೀಡರ್ ಲೆಸ್ ಆದ್ರೆ ಕಾಂಗ್ರೆಸ್ ಶೇಮ್‌ಲೆಸ್ : ಯತ್ನಾಳ್ ತಿರುಗೇಟು

ಮೈಸೂರು : ಸಿಎಂ ಸಿದ್ದರಾಮಯ್ಯ ಸರ್ಕಾರ ಅಸ್ಥಿರತೆಯ ಭೀತಿ ಎದುರಿಸುತ್ತಿದೆ. ಬರ ಪರಿಸ್ಥಿತಿ ನಿರ್ವಹಣೆ ಮಾಡುವಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ. ರಾಜ್ಯದಾದ್ಯಂತ ಭೀಕರ ಬರಗಾಲ ಉಂಟಾಗಿದೆ. ಆದರೆ ಇತ್ತ ಗಮನ ಹರಿಸದೆ ಆಂತರಿಕ ಕಲಹದಲ್ಲಿ ಕಾಂಗ್ರೆಸ್ ಮುಳುಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಸ್ಥಿರವಾಗಿದೆ. ಸಿಎಂ ಸಿದ್ದರಾಮಯ್ಯನವರಿಗೂ ಅಸ್ಥಿರತೆಯ ಭೀತಿ ಕಾಡುತ್ತಿದೆ. ಅವರನ್ನು ಕೆಳಗಿಳಿಸುತ್ತಾರೆಂಬ ಭೀತಿ ಆವರಿಸಿದೆ. ಹಾಗಾಗಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಿ ಸ್ಥಾನ ಭದ್ರಪಡಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.

ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು ಜರಿದಿದ್ದ ಕಾಂಗ್ರೆಸ್ ನಾಯಕರಿಗೆ, ಅವರ ಪಾರ್ಟಿ ಎಂದರೆ ಶೇಮ್‌ಲೆಸ್ ಪಾರ್ಟಿ ಎನ್ನುವ ಮೂಲಕ ಯತ್ನಾಳ್ ತಿರುಗೇಟು ನೀಡಿದ್ದಾರೆ.

ಬಿಜೆಪಿಯಲ್ಲಿ ಪ್ರತಿಪಕ್ಷ ನಾಯಕನಿಲ್ಲದಿದ್ದರೂ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ಮಾಡುತ್ತಿದ್ದೇವೆ. ಸದನದ ಒಳಗೆ ಹಾಗೂ ಹೊರಗೂ ಬಿಜೆಪಿ ಸರ್ಕಾರದ ನಿಲುವುಗಳನ್ನು ಖಂಡಿಸುವ ಕೆಲಸ ಮಾಡುತ್ತದೆ. ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿರುವುದನ್ನು ಒಪ್ಪಿಕೊಳ್ಳುತ್ತೇನೆ. ಮುಂದಿನ ನಾಲ್ಕು ದಿನ ಅಥವಾ ನಲವತ್ತು ದಿನದಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಆಗಬಹುದು ಎಂದು ತಿಳಿಸಿದರು.

ನಮ್ಮಲ್ಲಿ ವಿಪಕ್ಷನಾಯಕನಿಲ್ಲ ಎಂದು ನಾವ್ಯಾರು ಸುಮ್ಮನೆ ಕುಳಿತಿಲ್ಲ. ಸರ್ಕಾರದ ವೈಫಲ್ಯಗಳ‌ ವಿರುದ್ಧ ನಮ್ಮದೇಯಾದ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದೇವೆ ಎಂದು ಕಾಂಗ್ರೆಸ್ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ