ಬೆಂಗಳೂರು : ವಿದ್ಯುತ್ ಉತ್ಪಾದನೆ ಮಾಡುವ ಸಾಮಥ್ರ್ಯ ಇದ್ದರೂ ರಾಜ್ಯ ಸರ್ಕಾರ ಕೃತಕ ವಿದ್ಯುತ್ ಅಭಾವ ಸೃಷ್ಟಿಸುವ ಮೂಲಕ ದುಬಾರಿ ದರದಲ್ಲಿ ವಿದ್ಯುತ್ ಖರೀದಿ ಮಾಡಿ ಕಮಿಷನ್ ಪಡೆಯಲು ಹೊರಟಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಮರ್ಪಕವಾಗಿ ವಿದ್ಯುತ್ ಉತ್ಪಾದನೆ ಮಾಡಿದರೆ ಉಳಿತಾಯವಾಗುವಷ್ಟು ವಿದ್ಯುತ್ ಉತ್ಪಾದಿಸಬಹುದು. ಆದರೆ ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡದೆ ಗ್ಯಾರಂಟಿ ಯೋಜನೆಗಳ ಬಗ್ಗೆ ಕಾಲಹರಣ ಮಾಡಿದೆ. ಮಳೆ ಅಭಾವದಿಂದ ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ಹೇಳಿ ವಿದ್ಯುತ್ ಖರೀದಿ ಮಾಡಲು ಮುಂದಾಗುತ್ತಿದೆ ಎಂದು ಆರೋಪಿಸಿದರು.
1500 ಮೆಗಾವ್ಯಾಟ್ ವಿದ್ಯುತ್ ಖರೀದಿಸುವ ಬಗ್ಗೆ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಸರ್ಕಾರವೇ ಹೇಳಿರುವ ಮಾಹಿತಿ ಪ್ರಕಾರ ಪ್ರತಿದಿನ 40 ಕೋಟಿ ವಿದ್ಯುತ್ ಖರೀದಿಗೆ ಬೇಕಾಗುತ್ತದೆ ಎಂದರು.
ರಾಜ್ಯದಲ್ಲಿ 32,912.52 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಜಲವಿದ್ಯುತ್‍ನಲ್ಲಿ ಶೇ.50ರಷ್ಟು ಅಂದರೂ 1953.3 ಮೆ.ವ್ಯಾ ವಿದ್ಯುತ್ ಉತ್ಪಾದಿಸಬಹುದು. ಶಾಖೋತ್ಪನ್ನ ವಿದ್ಯುತ್ ಘಟಕಗಳಿಂದ 9947.56 ಮೆ.ವ್ಯಾ ಉತ್ಪಾದಿಸಬಹುದು. ಕೂಡ್ಲಗಿಯಲ್ಲಿ ಇನ್ನೆರು ಶಾಖೋತ್ಪನ್ನ ಘಟಕ ಆರಂಭಿಸಿದರೆ 4000 ಮೆ.ವ್ಯಾ ವಿದ್ಯುತ್ ಉತ್ಪಾದಿಸಬಹುದು. ಹೀಗೆ ರಾಜ್ಯದಲ್ಲಿ ಸರಾಸರಿ 16 ಸಾವಿರದಿಂದ 18 ಸಾವಿರ ಮೆ.ವ್ಯಾಟ್‍ವರೆಗೂ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳಿದರು.
ಇಂಧನ ಸಚಿವ ಕೆ.ಜೆ.ಜಾರ್ಜ್ ಅವರಿಗೆ ದುಡ್ಡಿನ ಅಗತ್ಯವಿಲ್ಲ ಎಂದು ಭಾವಿಸುತ್ತೇನೆ. ಆದರೂ ಸರ್ಕಾರ ವಿದ್ಯುತ್ ಖರೀದಿ ಮಾಡಿ ಕಮಿಷನ್ ಪಡೆಯಲು ಹೊರಟಿದೆ. ಸರ್ಕಾರದ ಲೋಪದೋಷಗಳನ್ನು ಹೇಳಿದ್ದು, ಯಾವ ರೀತಿ ಪರೀಕ್ಷಿಸಿಕೊಳ್ಳಬಹುದು ಎಂಬುದನ್ನು ಹೇಳಿದ್ದೇನೆ. ಸತ್ಯ ಹರಿಶ್ಚಂದ್ರ ಸರ್ಕಾರ ಐದು ತಿಂಗಳಲ್ಲಿ ಮಾಡಿದ್ದು ಸಾಕು, ಕಮಿಷನ್ ನಿಲ್ಲಿಸಿ ಜನರ ಸಮಸ್ಯೆ ಪರಿಹರಿಸಿ ಎಂದರು.
ಬರಗಾಲದಿಂದಾಗಿ ಆಹಾರಧಾನ್ಯ ಉತ್ಪಾದನೆ ಸಾಕಷ್ಟು ಕಡಿಮೆಯಾಗಲಿದ್ದು, ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಗಬಹುದು. ಅದಕ್ಕೆ ಯಾವ ಸಿದ್ದತೆ ಮಾಡಿಕೊಂಡಿದ್ದೀರಿ? ಎಂದು ಪ್ರಶ್ನಿಸಿದರು. ಮಾಹಿತಿ ಇಲ್ಲದೆ ಆರೋಪ ಮಾಡುತ್ತಿಲ್ಲ. 25-35 ವರ್ಷಗಳಿಂದ ಮಾಡಿಕೊಂಡು ಬಂದಿರುವುದು ಸಾಕು. ಇನ್ನಾದರೂ ಜನರ ಸಮಸ್ಯೆ ಬಗೆಹರಿಸಲು ಗಮನ ನೀಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೆಸರು ಹೇಳದೆ ಪ್ರಸ್ತಾಪಿಸಿದರು.