*ಸಂತೋಷ ತಾಮ್ರಪರ್ಣಿ
‘ಸಾಯೋಕಿಂತ ಮೊದಲು ದಸರಾ ತೋರ್ಸೋ’ ಅಂತಾ ಹತ್ತು ವರ್ಷದಿಂದ ಕೇಳುತ್ತಲೇ ಇದ್ದಳು ಧಾರವಾಡದ ನಮ್ಮಜ್ಜಿ. ಹೀಗಾಗಿ, ಕಳೆದ ವರ್ಷ ದಸರಾ ಸಮಯಕ್ಕೆ ಮೈಸೂರಿಗೆ ಬರಲು ಹೇಳಿದೆವು. ಅಜ್ಜಿ ಜೊತೆ ನನ್ನ ತಂಗಿ, ಅವಳ ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ ಮತ್ತವರ ಮಕ್ಕಳು, ಅಕ್ಕ-ಪಕ್ಕದ ಮನೆಯವರು ಎಲ್ಲಾ ಸೇರಿ ಒಟ್ಟು ಹದಿನಾಲ್ಕೇ ಜನ ಬಂದರು! ಜೊತೆಗೆ ಸಣ್ಣದು, ದೊಡ್ಡದು ಸೇರಿ ಇಪ್ಪತ್ತಾರು ಲಗೇಜುಗಳಿದ್ದವು.
ದಸರಾ ಮೆರವಣಿಗೆಯಲ್ಲಿ ಡ್ಯೂಟಿ ಇಲ್ಲದಿದ್ದರೆ, ನಾಲ್ಕು ಆನೆಗಳನ್ನು ರೇಲ್ವೆ ಸ್ಟೇಷನ್ನಿಗೆ ಕಳಿಸುವ ಪ್ರಸಂಗ ಬರುತ್ತಿತ್ತು – ಇವರನ್ನೆಲ್ಲ ಮನೆಗೆ ಕರೆದುಕೊಂಡು ಬರಲು. ಕೊನೆಗೆ, ಇವನ್ನೆಲ್ಲ ತುಂಬಿಸಿಕೊಂಡು ಒಂದಾದ ಮೇಲೊಂದರಂತೆ ಐದು ಆಟೋಗಳು ಬಂದವು ಮನೆಗೆ. ಆಹಾ, ಎಂಥಾ ಮೆರವಣಿಗೆ ಅಂತೀರಾ ಅದು!
ಮನೆ ಸೇರಿದ ಮೇಲೆ, ಒಂದು ಸ್ನಾನ, ಒಂದು ತಿಂಡಿ, ಎರಡು ಟೀ, ಒಂದು ಕಾಫಿ, ಒಂದಷ್ಟು ಹರಟೆ ಮುಗಿಸುವಷ್ಟರಲ್ಲಿ ಹನ್ನೆರಡಾಯಿತು. ಈಗಾಗಲೇ ನಾನು ಬೇಗನೆ ರೆಡಿಯಾಗುವಂತೆ ಸಾಕಷ್ಟು ಬಾರಿ ಹೇಳಿದ್ದರೂ ಏನೂ ಪ್ರಯೋಜನವಾಗಿರಲಿಲ್ಲ. ಹೋಗಲಿ ಊಟವನ್ನಾದರೂ ಹೊರಗಡೆಯೇ ಮಾಡೋಣ ಎಂದರೂ ಯಾರೂ ಕೇಳಲಿಲ್ಲ.
ಅಡುಗೆ, ಊಟ, ಸಿಂಗಾರ ಎಲ್ಲಾ ಮುಗಿಸಿ ರೆಡಿಯಾಗುವಷ್ಟರಲ್ಲಿ ಮಧ್ಯಾಹ್ನ ಮೂರೂವರೆ! ನನ್ನ ಸಹನೆ ಮುಗಿದಿತ್ತು. ಇನ್ನು ಆಟೋ ಹುಡುಕಿ, ಇವರನ್ನೆಲ್ಲ ಇದರಲ್ಲಿ ಮೆರವಣಿಗೆ ಹೊರಡಿಸಿ, ಆ ಮೆರವಣಿಗೆಯನ್ನು ನೋಡುವುದು ಅಸಾಧ್ಯದ ಮಾತು. ಇದ್ದದ್ದನ್ನು ಸ್ವಲ್ಪ ಖಾರವಾಗಿಯೇ ಹೇಳಿದೆ.
ಆಗ ಶುರುವಾಯಿತು ನೋಡಿ ನನ್ನ ಹೊಗಳಿಕೆ- ಇಲ್ಲೀ ತನಾ ಬಂದು ಏನೂ ನೋಡಲಾರದ ಧಾರಾವಾಡಕ್ಕ ಹೋದ್ರ ಮಂದಿ ನಮ್ಮನ್ನ ನೋಡಿ ನಗತಾರ; ನೀ ದಸರಾ ತೋರಸ್ತಿ ಅಂತ ಇಲ್ಲಿತನಕ ಬಂದಿವಿ, ಇಲ್ಲಾಂದ್ರ ನಾವ್ಯಾಕ ಬರತಿದ್ವಿ; ವ್ಯಾಳ್ಯಾ ಆಗತದ ಅಂತಾ ಮೊದಲ ಹೇಳಬೇಕಿತ್ತಿಲ್ಲೋ, ಊಟಾ ಹೊರಗ ಮಾಡತಿದ್ವಿ, ಅಲ್ಲಿಂದ ಇಲ್ಲಿ ತನಕ ತಿನಲಿಕ್ಕ ಬಂದೇವಿ ಏನ್ ನಾವು… ಹೀಗೆ ಬಂದವರು ತಲೆಗೊಂದರಂತೆ ಹೇಳಿದ ಮೇಲೆ, ಅಜ್ಜಿ ಕಣ್ಣಲ್ಲಿ ನೀರು ತಂದುಕೊಂಡು ಹೇಳಿದಳು, ‘ದಸರಾ ನೋಡಿ ಸಾಯಬೇಕು ಅನಕೊಂಡಿದ್ದೆ. ಆ ಪುಣ್ಯಾನೂ ಇಲ್ಲ ನೋಡಪಾ ನನಗ. ಗುಡೀ ತನಕ ಬಂದು, ದೇವ್ರ ದರ್ಶನಾ ಸಿಗಲಾರದಂಗ ಆತು…’
ನನ್ನ ಹೆಂಡತಿ ಪಕ್ಕದಲ್ಲಿ ಕರೆದು ಮೆಲುವಾಗಿ ಹೇಳಿದಳು, ‘ಏನಾದ್ರೂ ಮಾಡಿ, ಮೆರವಣಿಗಿ ತೋರಸ್ರಿ… ಪಾಪ ಎಲ್ಲಾರೂ ಬ್ಯಾಸರಾ ಮಾಡ್ಕೋಳ್ಳಿಕತ್ತಾರ.’
‘ಬ್ಯಾಸರಾ ವಾಡ್ಕೋಳ್ಳಿಕತ್ತಾರ’ ಅನ್ನೋದು ‘ಬಾಯಿಗೆ ಬಂದಂತೆ ಬಯ್ಯುತ್ತಿದ್ದಾರೆ’ ಅನ್ನುವುದರ ತದ್ಭವ ರೂಪ!
ಆದರೆ, ಇವರು ಬಯ್ಯುತ್ತಾರಂತ ಮೆರವಣಿಗೆಯನ್ನು ಇನ್ನೊಮ್ಮೆ ಮಾಡಿಸಲಾದೀತೇ? ಈಗ ನೋಡಲಿಕ್ಕೆ ಉಳಿದಿರುವುದು ಪಂಜಿನ ಕವಾಯತು ಮಾತ್ರ. ಅದನ್ನೇ ಅಜ್ಜಿಗೆ ಹೇಳಿದೆ.
‘ಅಲ್ಲೇನ ಇರತದೋ?’ ಉಡಾಫೆಯಿಂದಲೇ ಕೇಳಿದಳು.
‘ಅಜ್ಜೀ, ಪಂಜು ಹಿಡಕೊಂಡು ಕವಾಯತು??. ಅಂದ್ರ…. ವ್ಯಾಯಾಮ ಮಾಡತಾರ’ ಅಂತಂದೆ. ಜೊತೆಗೆ, ‘ಭಾರಿ ವಿಶೇಷ, ವಿದೇಶದಿಂದ ಬಂದ ಮಂದಿನೂ ಇರ್ತಾರ ಅಲ್ಲಿ’ ಅಂತಾ ಸೇರಿಸಿದೆ.
‘ನೀನೂ ಹೋಗಬೇಕಿಲ್ಲೋ ಅಲ್ಲಿ, ಒಂದೆರಡು ಇಂಚು ಹೊಟ್ಟಿ ಆದರೂ ಇಳೀತಿತ್ತು’
ಮೆರವಣಿಗೆ ತಪ್ಪಿಸಿಕೊಂಡ ಸಿಟ್ಟನ್ನು ಹೀಗಂದು ತೀರಿಸಿಕೊಂಡಳು.
ಆದರೆ, ಬೇರೆ ಏನೂ ದಾರಿಯಿಲ್ಲದೆ ಅಲ್ಲಿಗೇ ಹೋಗುವುದೆಂದು ತೀರ್ಮಾನಿಸಿ ಬನ್ನಿಮಂಟಪ ಗ್ರೌಂಡ್ ತಲುಪಿದೆವು.
ಆಕಾಶದಲ್ಲಿ ಎಷ್ಟು ನಕ್ಷತ್ರಗಳಿವೆಯೋ ಅಷ್ಟೇ ಜನರಿದ್ದರು ಅಲ್ಲಿ- ಒಂದು ಹೆಚ್ಚಿಲ್ಲ, ಒಂದು ಕಡಿಮೆಯಿಲ್ಲ. ಇಂದ್ರಿಯ ನಿಗ್ರಹ ಎಷ್ಟು ಸಾಧಿಸಿದ್ದೀರಿ ಅನ್ನುವುದು ಗೊತ್ತಾಗುವುದೇ ಇಲ್ಲಿ. ಜಲಬಾಧೆ, ವಿಸರ್ಜನೆಗಳನ್ನು ಎಷ್ಟರಮಟ್ಟಿಗೆ ನಿಯಂತ್ರಿಸಬಲ್ಲಿರಿ ಅನ್ನುವುದರ ಮೇಲೆ ನಿಮ್ಮ ತಪಸ್ಸಿನ ಬಲವನ್ನು ಅಳೆಯಬಹುದು.
ಹೇಗೋ ಒಳಗೆ ಹೋಗಿ, ಒಂದು ಕಡೆ ತಳ ಊರಿದೆವು. ಕಾರ್ಯಕ್ರಮ ಶುರುವಾಯಿತು. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಮಂತ್ರಿ, ಅಶ್ವದಳ, ಒಬ್ಬೊಬ್ಬರಾಗಿ ಸುತ್ತು ಹೊಡೆದರು. ರಾಷ್ಟ್ರಗೀತೆ ಮುಗೀತು. ಹಿಂದೆಲೇ ಸಂಗೀತ, ನೃತ್ಯ, ಲೇಸರ್ ಶೋ ಎಲ್ಲಾ ಮುಗಿದ ಮೇಲೆ ಪಂಜು ಹಿಡಿದುಕೊಂಡು ನೂರೈವತ್ತು-ಇನ್ನೂರು ಜನ ಬಂದರು. ಅವರ ಮುಖಗಳು ಕಾಣದೆ ಕೈಯಲ್ಲಿನ ಪಂಜು ಮಾತ್ರ ಸ್ಪಷ್ಟವಾಗಿ ಕಾಣುತ್ತಿತ್ತು.
ಕವಾಯತು ಶುರುವಾಯಿತು. ಬೇರೆ ಬೇರೆ ಜಾಗದಲ್ಲಿ ಸಾಗಿ, ಕೆಲವರು ಬಗ್ಗಿ, ಕೆಲವರು ಕೈಯನ್ನು ಕೆಳಗೆ? ಮೇಲೆ ಹಿಡಿದು, ಚಿಕ್ಕ ಚಿಕ್ಕ ಗುಂಪಾಗಿ ಒಡೆದು ಪಂಜುಗಳಿಂದ ‘ವೆಲ್ ಕಮ್’ ಅಂತಾ ಬರೆದು ತೋರಿಸಿದರು. ಜನರ ಕರತಾಡನ ಮುಗಿಲು ಮುಟ್ಟಿತು.
ಆಮೇಲೆ ಹ್ಯಾಪಿ ದಸರಾ, ಕರ್ನಾಟಕ ಪೊಲೀಸ್, ವೆಲ್‌ಕಮ್ ಟು ಆಲ್, ಜೈ ಚಾಮುಂಡಿಗಳೆಲ್ಲಾ ಬಂದು ಹೋದವು. ನಮ್ಮಜ್ಜಿಗೆ ಒಂದೂ ತಿಳಿಯಲಿಲ್ಲ. ಕಾಣಲಿಲ್ಲ ಎಂದಲ್ಲ- ಅವೆಲ್ಲ ಇಂಗ್ಲೀಷಿನಲ್ಲಿದ್ದವು ಅದಕ್ಕೆ! ನಾನು ಅವಳಿಗೆ ಅವನ್ನೆಲ್ಲ ಓದಿ ಹೇಳುತ್ತಿದ್ದೆ. ಒಂದೇ ಸಲ ಕನ್ನಡದಲ್ಲಿ ಬಂದು ಹೋಗಿದ್ದು ಅಜ್ಜಿಯ ಗಮನಕ್ಕೆ ಬರಲಿಲ್ಲ. ಕವಾಯತು ಮುಗಿದ ಕೂಡಲೇ, ಮಗನನ್ನು ಸ್ಕೂಲಿನ ಬಸ್ಸಿಗೆ ಹತ್ತಿಸಲು ಬೆಳಿಗ್ಗೆ ಅಮ್ಮ ಹೇಗೆ ಓಡುತ್ತಾಳೋ ಹಾಗೆ ಜನ ಹೊರಬಂದಿತು – ಗ್ರೌಂಡಿನಿಂದ.
ರಾತ್ರಿ ಮನೆಗೆ ಬಂದ ಮೇಲೆ ಧಾರವಾಡದಲ್ಲಿರುವ ಮಗನಿಗೆ ಫೋನು ಮಾಡಿ, ಸ್ಪೀಕರ್‌ನಲ್ಲಿಟ್ಟು ಕೊಟ್ಟೆವು.
‘ಇವತ್ತು ಮೋಕಳೀಕ ಆತ ನೋಡ ಪಾ ನನಗ ಮ್ಯಾಲೆ ಹೋಗಲಿಕ್ಕ. ಏನ ಛಂದ ಇತ್ತ ಪಾ ದಸರಾ ಅಂತೇನಿ… ಸಕ್ರಿಗೆ ಇರುವಿ ಮುತ್ತಿದಂಗ ಮುಕರಿತ್ತ ಮಂದಿ. ಏನಾರ ಸರಕಾರದವ್ರ ಒಳಗ ಫುಕಟ ಬಿಟ್ಟು ಹೊರಗ ಹೋಗಬೇಕಂದರ ಎರಡರಷ್ಟ ರೊಕ್ಕ ಇಟ್ಟಿದ್ದರ, ಬಂದ ರೊಕ್ಕದಾಗ ಧಾರವಾಡದಾಗಿನ ಎಲ್ಲಾ ಮಂದಿ ಎರಡೆರಡ ಸಲ ಕಾಶಿ ಯಾತ್ರಾ ಮಾಡಬಹುದಿತ್ತ…’
‘ಅವ್ವಾ, ಏನೇನ್ ನೋಡಿದಿ?’ ನನ್ನ ಸೋದರಮಾವ ಅಲ್ಲಿಂದ ಕೇಳಿದ.
‘ಪಂಜಿನ ಕವಾಯತು… ಅದ… ಬೆಂಕಿ ಹಿಡಕೊಂಡ ವ್ಯಾಯಾಮ ಮಾಡೋದು. ಬೆಂಕ್ಯಾಗ ಬರೀತಾರೋ ಅವರು, ಬೆಂಕ್ಯಾಗ… ಅದೂ ಹೆಂಗ ಬರೀತಾರಂದೀ… ಎರಡ ಕಣ್ಣ ಸಾಲಂಗಿಲ್ಲಾ