ಹಾವೇರಿ : ಹಿರೇಕೆರೂರು ರೈತರ ಕಡೆಯಿಂದ ಶಿವಾನಂದ ಪಾಟೀಲ್‍ಗೆ ಒಂದು ಕೋಟಿ ರೂ. ಕೊಡುತ್ತೇವೆ ಆತ್ಮಹತ್ಯೆ ಮಾಡಿಕೊಳ್ತಾರಾ? ಕೇಳಿ ಎಂದು ಮಾಜಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದ್ದಾರೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಈ ವೇಳೆ ರೈತರ ಆತ್ಮಹತ್ಯೆಯ ಬಗ್ಗೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಹಾವೇರಿ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ರೈತ ಸಮುದಾಯವನ್ನು ಕಡೆಗಣಿಸಿದೆ. ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ 18 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಹಾವೇರಿ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಿಲ್ಲ. ಕಳೆದ ಬಾರಿ ನಾವು ಈ ವೇಳೆಗಾಗಲೇ ರೈತರಿಗೆ ಸೌಲಭ್ಯಗಳನ್ನು ಕೊಟ್ಟಿದ್ದೆವು. ಅಡುಗೆ ಮಾಡಿಟ್ಟಿದ್ದೇವೆ ಆದರೆ ಅದನ್ನು ಜನರಿಗೆ ಬಡಿಸಲು ಆಗದಂತಹ ಸರ್ಕಾರ ಇದಾಗಿದೆ ಎಂದು ಕುಟುಕಿದ್ದಾರೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ ನೀರಾವರಿ ಯೋಜನೆಗಳನ್ನು ಕೂಡಾ ಜನರಿಗೆ ಈ ಸರ್ಕಾರ ತಲುಪಿಸುತ್ತಿಲ್ಲ. ವಿದ್ಯುತ್‍ಗೂ ಹೆಚ್ಚಿನ ದರ ವಿಧಿಸುತ್ತಿದ್ದಾರೆ. ಯಾವುದೇ ದರವನ್ನೂ ಸರ್ಕಾರ ಕಡಿಮೆ ಮಾಡುತ್ತಿಲ್ಲ. ಹಿರೇಕೆರೂರು ತಾಲೂಕಿನಲ್ಲಿ ಅಕ್ರಮವಾಗಿ ಎಂಆರ್‍ಪಿಗಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದಾರೆ. ಈ ವೇಳೆ ಬಾರುಕೋಲನ್ನು ಬೀಸುವ ಮೂಲಕ ವಿನೂತನವಾಗಿ ಸರ್ಕಾರಕ್ಕೆ ಚಾಟಿ ಏಟು ಕೊಡುತ್ತಿದ್ದೇನೆ ಎಂದಿದ್ದಾರೆ.
ಆಪರೇಷನ್ ಹಸ್ತದ ವಿಚಾರವಾಗಿ, ಕಾಂಗ್ರೆಸ್‍ಗೆ ಹೋಗುವವರಿಗೆ ಲೋಕಸಭೆ ಚುನಾವಣೆ ಬಳಿಕ ಬಹಳ ಕಷ್ಟವಾಗಲಿದೆ. ಈಗಾಗಲೇ ಗೃಹ ಸಚಿವ ಜಿ.ಪರಮೇಶ್ವರ್ ಬಂದವರು ಲಾಸ್ಟ್ ಬೆಂಚ್‍ನಲ್ಲಿ ಕೂರಬೇಕು ಎಂದಿದ್ದಾರೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.