Mysore
29
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

136 ಸ್ಥಾನ ಬರುತ್ತೆ ಎಂದಿದ್ದಕ್ಕೆ ನನ್ನನ್ನು ಮೆಂಟಲ್‌ ಎಂದಿದ್ದರು : ಡಿ.ಕೆ ಶಿವಕುಮಾರ್

ಬೆಂಗಳೂರು : ಸರ್ಕಾರ ಬರುವ ಸಂದರ್ಭದಲ್ಲಿ 136 ಸ್ಥಾನ ಬರುತ್ತದೆ ಎಂದಿದ್ದೆ. ಆಗ ನನ್ನನ್ನು ಬಹಳಷ್ಟು ಜನ ಮೆಂಟಲ್‌ ಆಗಿದ್ದಾನೆ ಎಂದು ಲೇವಡಿ ಮಾಡಿದ್ದರು ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹಳೆಯ ವಿಷಯವನ್ನು ಮೆಲುಕು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್‌ ಇಂಡಿಯಾ ಚಳುವಳಿ 82ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ನಾವೇ ಸರ್ಕಾರ ಮಾಡುತ್ತೇವೆ ಎಂದು ಹೇಳಿ ಕೆಲವರ ಕಾಲಿಗೆ ಬಿದ್ದಿದ್ದರು. ಅವರ ಹೆಸರು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಸಮ್ಮಿಶ್ರ ಸರ್ಕಾರ ಮಾಡುತ್ತೇವೆ ಎಂದು ಬರೆದುಕೊಂಡಿದ್ದರು. ಆದರೆ ನಾನು ಮಾತ್ರ 136ಕ್ಕೆ ಸ್ಟಿಕ್‌ ಆಗಿದ್ದೆ ಎಂದರು.

ಸೋನಿಯಾ ಗಾಂಧಿ ಅವರು ಇಷ್ಟು ಸೀಟ್‌ ಹೇಗೆ ಬರುತ್ತದೆ ಎಂದು ಕೇಳಿದ್ದರು. ನಾನೇ ಹೊಲ ಉತ್ತು, ಗೊಬ್ಬರ ಹಾಕಿದ್ದೇನೆ. ಈ ಕಾರಣದಿಂದ ನನಗೆ ಗೊತ್ತು ಎಂದು ಉತ್ತರಿಸಿದ್ದೆ. ಕೆಲವು ಸೀಟು ಹಂಚಿಕೆಯಲ್ಲಿ ನಾವೂ ಸ್ವಲ್ಪ ತಪ್ಪು ಮಾಡಿದೆವು. 224ರ ಪೈಕಿ 215 ಸೀಟು ಹಂಚಿಕೆ ಒಮ್ಮತದ ಪ್ರಕಾರ ಒಗ್ಗಟ್ಟಿನಲ್ಲೇ ಆಗಿದೆ. ಪಕ್ಷಕ್ಕೋಸ್ಕರ ಹಲವು ಹಿರಿಯರು ಟಿಕೆಟ್‌ ತ್ಯಾಗ ಮಾಡಿದ್ದಾರೆ. ಮಾಟ ಮಂತ್ರ ಮಾಡಿ ಸರ್ಕಾರ ಮಾಡಿದ್ದೇವೆ ಎಂದು ವಿಪಕ್ಷ ನಾಯಕರೊಬ್ಬರು ಮಾತನಾಡಿದ್ದಾರೆ‌. ಅವರ ಹೆಸರು ಹೇಳಲು ಇಷ್ಟ ಪಡುವುದಿಲ್ಲ ಎಂದು ಹೇಳಿ ಪರೋಕ್ಷವಾಗಿ ಕುಮಾರಸ್ವಾಮಿ ಅವರಿಗೆ ಟಾಂಗ್‌ ಕೊಟ್ಟರು.

ಕ್ವಿಟ್ ಇಂಡಿಯಾ ಚಳುವಳಿ ಮಾದರಿಯೇ ಈಗ ಅಗತ್ಯವಿದೆ. ಅಂದು ಬ್ರಿಟಿಷರ ವಿರುದ್ದ ನಾವು ಹೋರಾಟ ಮಾಡಿದ್ದೆವು. ಇಂದು ಕೋಮುವಾದ, ಸರ್ವಾಧಿಕಾರ ವಿರುದ್ದ ನಾವು ಹೋರಾಟ ಮಾಡಬೇಕಾಗಿದೆ. ಇಂಡಿಯಾ ರಕ್ಷಿಸಿ ಅಂತ ಎಲ್ಲ ರಾಷ್ಟ್ರೀಯ ನಾಯಕರು ಇಂಡಿಯಾ ಸಭೆಗೆ ಬಂದರು. ಬಿಜೆಪಿ ಭಾರತದಿಂದ ಬಿಟ್ಟು ತೊಲಗಲಿ ಅಂತ ಕಾರ್ಯಕ್ರಮ ಮಾಡಬೇಕು. ಕಾಂಗ್ರೆಸ್ ಮುಕ್ತ ಭಾರತ ಅಂತ ಅವರು ಹೇಳುತ್ತಿದ್ದರು. ನಾವು ಈಗ ಬಿಜೆಪಿ ಮುಕ್ತ ಭಾರತ ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.

ಭಾಗ್ಯದ ಲಕ್ಷ್ಮಿ ಬಾರಮ್ಮ ಹಾಡನ್ನು ಹಾಡಿದ ಡಿಕೆಶಿ ಪ್ರತಿಯೊಂದು ವಾರ್ಡ್, ಬೂತ್, ಗ್ರಾಮ ಪಂಚಾಯತ್‌ ಮಟ್ಟದಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ (Gruha Lakshmi) ಕಾರ್ಯಕ್ರಮ ಉದ್ಘಾಟನೆ ಮಾಡುತ್ತಿದ್ದೇವೆ. ಅದರ ನೇರ ಪ್ರಸಾರ ಫಲಾನುಭವಿಗಳನ್ನೆಲ್ಲ ಸೇರಿಸಿ ಪ್ರತಿ ಪಂಚಾಯತಿಯಲ್ಲೂ ಮಾಡಬೇಕು. ಬೆಂಗಳೂರಲ್ಲಿ 198-200 ಕಡೆಗಳಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮ ಮಾಡುತ್ತೇವೆ. ಜನರನ್ನು ಫಲಾನುಭವಿಗಳನ್ನು ಸೇರಿಸಿ ಸಂಭ್ರಮ ಸಡಗರದ ಮೂಲಕ ಆಚರಿಸಬೇಕು ಎಂದು ಕರೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ