Mysore
25
light rain

Social Media

ಭಾನುವಾರ, 03 ನವೆಂಬರ್ 2024
Light
Dark

ಸಿದ್ದುಗೆ ತಲೆನೋವು ತಂದ ಹಣಕಾಸು ಲೆಕ್ಕಾಚಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಲೆನೋವು ಶುರುವಾಗಿದೆ. ಅವರ ಈ ತಲೆನೋವಿಗೆ ಮೊನ್ನೆ ಮೊನ್ನೆಯವರೆಗೂ ಅಧಿಕಾರದಲ್ಲಿದ್ದ ಬಿಜೆಪಿ ಕಾರಣ. ಏಕೆಂದರೆ ನಾಲ್ಕು ವರ್ಷಗಳ ಕಾಲ ಅಽಕಾರ ಸೂತ್ರ ಹಿಡಿದಿದ್ದ ಬಿಜೆಪಿ ಸರ್ಕಾರದ ಹಣಕಾಸು ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ ಎಂಬುದು ಸಿದ್ದರಾಮಯ್ಯ ಅವರ ತಲೆನೋವು.

ಅಂದ ಹಾಗೆ ಸಿದ್ದರಾಮಯ್ಯ ಹದಿನಾಲ್ಕು ಬಾರಿ ಬಜೆಟ್ ಮಂಡಿಸಿದ ಆರ್ಥಿಕ ತಜ್ಞರು. ಆದರೆ ಅಂತಹ ಆರ್ಥಿಕ ತಜ್ಞರಿಗೂ ತಲೆನೋವು ತರುವ ಕೆಲಸ ಬಿಜೆಪಿಯಿಂದಾಗಿದೆ.

ಅರ್ಥಾತ್, ಅಽಕಾರದಿಂದ ಕೆಳಗಿಳಿಯುವ ಕಾಲಕ್ಕೆ ತನ್ನ ಬಜೆಟ್‌ಗಳ ಇತಿಮಿತಿಯಲ್ಲಿ ಖರ್ಚು ಮಾಡಬೇಕಿದ್ದ ಬಿಜೆಪಿ ಸರ್ಕಾರ ಅದನ್ನು ಮೀರಿದ ಕಮಿಟ್‌ಮೆಂಟಿನ ಹೊರೆಯನ್ನು ಹೊಸ ಸರ್ಕಾರಕ್ಕೆ ವರ್ಗಾಯಿಸಿದೆ.

ಈಗಿರುವ ಮಾಹಿತಿಯ ಪ್ರಕಾರ, ಬಿಜೆಪಿ ಸರ್ಕಾರ ಹೆಚ್ಚುವರಿಯಾಗಿ ಮಂಜೂರು ಮಾಡಿದ ಕಾಮಗಾರಿಗಳ ಮೊತ್ತ ಎರಡು ಲಕ್ಷ ಕೋಟಿ ರೂ.ಗಳನ್ನು ಮೀರುತ್ತಿದೆ. ಈ ರೀತಿ ಅದು ಹೆಚ್ಚುವರಿಯಾಗಿ ಮಂಜೂರು ಮಾಡಿ ಹೋದ ಕಾಮಗಾರಿಗಳ ಹಣವನ್ನು ಈಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಬಂಧಿಸಿದ ಗುತ್ತಿಗೆದಾರರಿಗೆ ನೀಡಬೇಕು.

ಸ್ವತಃ ಸಿದ್ದರಾಮಯ್ಯ ಅವರ ಪ್ರಕಾರ ಇಂತಹ ಹೆಚ್ಚುವರಿ ಹಣವನ್ನು ಪಾವತಿ ಮಾಡಲು ಸರ್ಕಾರಕ್ಕೆ ಆರು ವರ್ಷಗಳು ಬೇಕು. ಇದರರ್ಥ ಬೇರೇನೂ ಅಲ್ಲ. ಈಗ ಅಸ್ತಿತ್ವಕ್ಕೆ ಬಂದಿರುವ ಸರ್ಕಾರ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಿರಲಿ, ಸದ್ಯದ ಪರಿಸ್ಥಿತಿಯನ್ನು ನಿರ್ವಹಣೆ ಮಾಡಿಕೊಂಡು ಹೋಗುವುದೂ ಕಷ್ಟ. ಹೀಗೆ ನಿರ್ವಹಣೆ ಮಾಡಿಕೊಂಡು ಹೋಗಬೇಕೆಂದರೆ ಅದು ತನ್ನ ಬಜೆಟ್‌ನ ಯೋಜನಾ ಬಾಬ್ತಿಗೆ ಕತ್ತರಿ ಹಾಕಬೇಕು.

ಅಂದ ಹಾಗೆ ಯೋಜನೆ ಮತ್ತು ಯೋಜನೇತರ ಬಾಬ್ತು ಎಂದರೆ ಬಜೆಟ್‌ನ ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳ ಪೈಕಿ ಯೋಜನೇತರ ಬಾಬ್ತು ಎಂಬ ಕಣ್ಣನ್ನು ಮುಚ್ಚಿಕೊಳ್ಳಲು ಸಾಧ್ಯವೇ ಇಲ್ಲ. ಏಕೆಂದರೆ ಈ ಬಾಬ್ತಿನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ, ಪಿಂಚಣಿಯಿಂದ ಹಿಡಿದು ಸರ್ಕಾರ ಮಾಡಿದ ಸಾಲದ ಮೇಲಿನ ಅಸಲು, ಬಡ್ಡಿ, ಚಕ್ರಬಡ್ಡಿ ತೀರಿಸುವ ತನಕ ಹಲವು ವೆಚ್ಚಗಳನ್ನು ಮಾಡಬೇಕಾಗುತ್ತದೆ.

ಒಂದು ಬಜೆಟ್‌ನ ಯೋಜನೇತರ ಬಾಬ್ತಿನ ಗಾತ್ರ ಹೆಚ್ಚಾಗುತ್ತಾ ಹೋದರೆ ಅದು ರಾಜ್ಯದ ಅಭಿವೃದ್ಧಿಗೆ ಮಾರಕವೆಂದೇ ಪರಿಗಣಿಸಲಾಗುತ್ತದೆ. ಆದರೆ ಯೋಜನೆ ಎಂಬ ಕಣ್ಣಿನ ಕೆಲಸ ಬೇರೆ. ಅದು ಸಂಪೂರ್ಣವಾಗಿ ರಾಜ್ಯದ ಅಭಿವೃದ್ಧಿಯನ್ನು ಸಂಕೇತಿಸುತ್ತದೆ. ಹೊಸ ರಸ್ತೆ, ಅಣೆಕಟ್ಟೆ, ಕಟ್ಟಡಗಳ ನಿರ್ಮಾಣ ಸೇರಿದಂತೆ ಹಲವು ಬಗೆಯಲ್ಲಿ ಆದಾಯ ತಂದುಕೊಡುವ ಬಾಬ್ತು ಎಂದು ಪರಿಗಣಿಸಲಾಗುತ್ತದೆ.

ಅಂದ ಹಾಗೆ ಯೋಜನೆ ಮತ್ತು ಯೋಜನೇತರ ಬಾಬ್ತುಗಳ ಪೈಕಿ ಯೋಜನೆಯ ಬಾಬ್ತಿಗೆ ಕತ್ತರಿ ಹಾಕಬಹುದು. ಆದರೆ ಯೋಜನೇತರ ಬಾಬ್ತಿಗೆ ಕತ್ತರಿ ಹಾಕಲು ಸಾಧ್ಯವಿಲ್ಲ. ಈಗ ಸಿದ್ದರಾಮಯ್ಯ ಅವರಿಗೆ ತಲೆನೋವಾಗಿರು ವುದೇ ಈ ಅಂಶ. ಬಿಜೆಪಿ ಸರ್ಕಾರ ಹೊರಿಸಿ ಹೋದ ಹೊಣೆಗಾರಿಕೆಯನ್ನು ಅನಿವಾರ್ಯವಾಗಿ ಹೊತ್ತಿರುವ ಅವರು ಮುಂದಿನ ದಿನಗಳಲ್ಲಿ ಯೋಜನಾ ಬಾಬ್ತಿಗೆ ಕತ್ತರಿ ಹಾಕಬೇಕಾಗುತ್ತದೆ. ಈ ಮಧ್ಯೆ ಜನರಿಗೆ ನೀಡಿದ ಐದೂ ಗ್ಯಾರಂಟಿ ಯೋಜನೆಗಳಿಗಾಗಿ ಅವರು ಐವತ್ತು ಸಾವಿರ ಕೋಟಿ ರೂಪಾಯಿಗಳಷ್ಟು ಹಣ ಹೊಂದಿಸಬೇಕು.

ಅವರ ಮುಂದಿರುವ ಈ ಅನಿವಾರ್ಯತೆಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರ ಚಿಂತೆಗೆ ಕಾರಣ.

ಏಕೆಂದರೆ ತಮ್ಮ ಮುಂದಿರುವ ಈ ಹಣಕಾಸು ಸವಾಲಿನ ಕಾರಣಕ್ಕಾಗಿ ಸಿದ್ದರಾಮಯ್ಯ ಅವರು ಶಾಸಕರ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಈ ಅಂಶವೇ ರಾಜ್ಯ ಕಾಂಗ್ರೆಸ್‌ನ ಹಲ ಶಾಸಕರ ಪಾಲಿಗೆ ಈಗ ಚಿಂತೆಯ ವಿಷಯ. ಇದರ ಪರಿಣಾಮವಾಗಿಯೇ ಇಂತಹ ಶಾಸಕರು ಪಕ್ಷದ ತುರ್ತು ಶಾಸಕಾಂಗ ಸಭೆ ಕರೆಯುವಂತೆ ಆಗ್ರಹಿಸಿದ್ದರು ಮತ್ತು ಇಂತಹ ಆಗ್ರಹದ ಪರಿಣಾಮವಾಗಿ ಶಾಸಕಾಂಗ ಸಭೆಯೂ ನಡೆಯಿತು.

ಕುತೂಹಲದ ಸಂಗತಿ ಎಂದರೆ ಶಾಸಕರ ಇಂತಹ ಬೇಡಿಕೆ ಬೇರೆ ಬೇರೆ ರೂಪ ಪಡೆಯಿತಲ್ಲದೆ, ಇದು ಸರ್ಕಾರದ ವಿರುದ್ಧ ಬಂಡಾಯ ಎಂದು ಹೇಳುವ ಪ್ರಯತ್ನಗಳಾದವು. ಸಹಜವಾಗಿಯೇ ಇದನ್ನು ಎತ್ತಿ ಹಿಡಿದುಕೊಂಡ ಬಿಜೆಪಿ, ಈ ಬೆಳವಣಿಗೆ ಸರ್ಕಾರದ ಅಸ್ಥಿರತೆಯ ಸಂಕೇತ ಎಂದು ಬಣ್ಣಿಸಲು ಹಿಂಜರಿಯಲಿಲ್ಲ. ಅದು ಇಂತಹ ಪ್ರಯತ್ನ ಮಾಡುವುದರ ಹಿಂದೆ ಒಂದು ರಾಜಕೀಯ ಲಾಭದ ಉದ್ದೇಶವೂ ಇದೆ. ಮುಂಬರುವ ಪಾರ್ಲಿಮೆಂಟ್ ಚುನಾವಣೆಯ ಹೊತ್ತಿಗೆ ಸರ್ಕಾರ ದುರ್ಬಲವಾಗಿದೆ ಎಂದು ತೋರಿಸಲು ತಾವು ಸಫಲವಾದರೆ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯ ಎಂಬುದು ಅದರ ಯೋಚನೆ. ಹೀಗೆ ಒಂದು ಸನ್ನಿವೇಶವನ್ನು ಲಾಭದಾಯಕವಾಗಿ ಪರಿವರ್ತಿಸಿಕೊಳ್ಳಲು ಬಿಜೆಪಿ ಹೊರಟಿದ್ದರೆ, ತನ್ನ ಮುಂದಿರುವ ಸವಾಲನ್ನೇ ಬಿಜೆಪಿಯ ವಿರುದ್ಧದ ಅಸ್ತ್ರವನ್ನಾಗಿ ಪರಿವರ್ತಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ ಮಾಡಿದ ತಪ್ಪುಗಳಿಂದ ಇವತ್ತು ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ ಎಂದು ಶಾಸಕರು ದೂರುತ್ತಾ ಹೋದರೆ ಏನಾಗುತ್ತದೆ? ಸಹಜವಾಗಿಯೇ ಜನರ ಮನಸ್ಸಿನಲ್ಲಿ ಬಿಜೆಪಿಯ ಆರ್ಥಿಕ ವೈಫಲ್ಯಗಳ ಬಗ್ಗೆ ಅಸಹನೆ ಮೂಡುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ನೆಟ್ಟಗೆ ನಿಭಾಯಿಸಲಾಗದವರಿಗೆ ಎಷ್ಟು ಬೆಂಬಲ ಕೊಟ್ಟರೇನು? ಎಂಬ ಯೋಚನೆ ಶುರುವಾಗುತ್ತದೆ.

ಹೀಗೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರ ಸರ್ಕಾರ ಎಂದು ಬಿಜೆಪಿ ಬಣ್ಣಿಸುವುದು, ಮತ್ತದೇ ಕಾಲಕ್ಕೆ ಬಿಜೆಪಿ ರಾಜ್ಯವನ್ನು ದಿವಾಳಿ ಮಾಡಿದೆ ಎಂದು ಕಾಂಗ್ರೆಸ್ ಪ್ರತಿಬಿಂಬಿಸುವುದೇ ಮುಯ್ಯಿಗೆ ಮುಯ್ಯಿ ರಾಜಕಾರಣ. ಈ ಪೈಕಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಅಸ್ಥಿರ ಸರ್ಕಾರ ಎಂದು ಪ್ರತಿಬಿಂಬಿಸುವ ಬಿಜೆಪಿಗೆ ದೊಡ್ಡ ಮಟ್ಟದ ಯಶಸ್ಸು ಸಿಗುತ್ತದೆ ಅಂತ ಹೇಳುವುದು ಕಷ್ಟ.

ಏಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ಸರ್ಕಾರ ದುರ್ಬಲವಾಗುವುದನ್ನು ಕಾಂಗ್ರೆಸ್ ಪಕ್ಷದ ಶಾಸಕರು ಬಯಸುವುದಿಲ್ಲ.

ಒಂದು ಮಟ್ಟದಲ್ಲಿ ಕೆಲ ಸಚಿವರ ಕಾರ್ಯ ವೈಖರಿಯ ಬಗ್ಗೆ ಕೆಲ ಶಾಸಕರಲ್ಲಿ ಅಸಮಾಧಾನವಿದ್ದರೂ, ಅದು ಪರ್ಯಾಯ ಸರ್ಕಾರ ಬರಲಿ ಎಂದು ಬಯಸುವ ಮಟ್ಟದಲ್ಲಿಲ್ಲ. ಮತ್ತದು ಸಾಧ್ಯವೂ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇವತ್ತಿನ ತಮ್ಮ ಅಸಮಾಧಾನದ ಮೂಲವೇ ಹಿಂದಿನ ಬಿಜೆಪಿ ಸರ್ಕಾರವಾಗಿರುವುದರಿಂದ ಅದರ ಜತೆ ಕೈ ಜೋಡಿಸುವ ಪ್ರಯತ್ನವನ್ನು ಅವರು ಮಾಡುವುದಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಲು ಹೋದರೆ ರಾಜಕೀಯವಾಗಿ ಅದು ಆತ್ಮಹತ್ಯೆಯಾಗಬಹುದೇ ಹೊರತು ಬೇರೇನಲ್ಲ. ಹೀಗಾಗಿ ಸರ್ಕಾರವನ್ನು ಅಸ್ಥಿರವೆಂದು ಪ್ರತಿಬಿಂಬಿಸುವ ಮತ್ತದನ್ನು ದುರ್ಬಲವಾಗಿಸುವ ಯೋಚನೆಗೆ ಶಕ್ತಿ ದೊರೆಯುವುದು ಕಷ್ಟ.

ಆದರೆ ಅದೇ ಕಾಲಕ್ಕೆ ಇವತ್ತಿನ ಆರ್ಥಿಕ ದುಸ್ಥಿತಿಗೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ಮಾಡುವ ಆರೋಪ ಅದಕ್ಕೆ ರಾಜಕೀಯ ಲಾಭ ತಂದು ಕೊಡಬಹುದು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ