ಬಾರ್ಬಡೋಸ್ : ಭಾರತ ಕ್ರಿಕೆಟ್ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದೆ. ಟೆಸ್ಟ್ ಸರಣಿ ವಶಪಡಿಸಿಕೊಂಡ ನಂತರ ಟೀಂ ಇಂಡಿಯಾ ಏಕದಿನ ಸರಣಿಯನ್ನು ಆಡುತ್ತಿದೆ. ಎರಡನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದ್ದು, ಇದರೊಂದಿಗೆ ವೆಸ್ಟ್ ಇಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-1 ರಿಂದ ಸಮಬಲ ಸಾಧಿಸಿದೆ.
ಈ ನಡುವೆ ಎರಡನೇ ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರರು ಅಭ್ಯಾಸ ನಡೆಸುತ್ತಿದ್ದಾಗ ಮೈದಾನದಲ್ಲಿ ಅಭಿಮಾನಿಗಳು ಹಾಜರಿದ್ದು ಆಟಗಾರರನ್ನು ಭೇಟಿಯಾಗಲು ಬಯಸಿದ್ದರು. ಅಭಿಮಾನಿಗಳ ಆಸೆಯನ್ನು ಹುಸಿಗೊಳಿಸಿದ ಟೀಂ ಇಂಡಿಯಾ ಆಟಗಾರರು ಅಭಿಮಾನಿಗಳನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಲ್ಲದೆ, ಅಭಿಮಾನಿಗಳು ನೀಡಿದ ಪುಟ್ಟ ಉಡುಗೊರೆಯನ್ನು ತೆಗೆದುಕೊಂಡರು.
ವಿರಾಟ್‌ಗೆ ವಿಶೇಷ ಉಡುಗೊರೆ
ಟೀಂ ಇಂಡಿಯಾ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಸ್ಟ್ಯಾಂಡ್‌ನಿಂದ ಹುಡುಗಿಯೊಬ್ಬಳು ಕೊಹ್ಲಿ-ಕೊಹ್ಲಿ ಎಂದು ಮತ್ತೆ ಮತ್ತೆ ಕರೆಯುತ್ತಿರುವುದು ಕೇಳಿಸಿತು. ಕೊಹ್ಲಿಯನ್ನು ಭೇಟಿಯಾಗಲು ಬಯಸಿದ್ದ ಪೋರಿ, ಅವರಿಗಾಗಿ ವಿಶೇಷ ಉಡುಗೊರೆಯೊಂದನ್ನು ತಂದಿದ್ದಳು. ಈ ಹುಡುಗಿಯ ಧ್ವನಿಯನ್ನು ಕೇಳಿದ ನಂತರ ಆಕೆಯನ್ನು ಭೇಟಿಯಾಗಲು ಕೊಹ್ಲಿ ಬಂದರು. ಈ ವೇಳೆ ಆ ಹುಡುಗಿ ಕೊಹ್ಲಿ ಕೈಗೆ ಧರಿಸುವ ಬ್ರೇಸ್ಲೆಟ್ ಒಂದನ್ನು ತಂದಿದ್ದಳು. ಅದನ್ನು ನಯವಾಗಿ ಸ್ವೀಕರಿಸಿದ ಕೊಹ್ಲಿ, ತನ್ನ ಕೈಗೆ ಧರಿಸಿಕೊಂಡರು. ಆ ಬಳಿಕ ಆ ಬಾಲಕಿಯ ಕುಟುಂಬದೊಂದಿಗೆ ಕೊಹ್ಲಿ ಸೆಲ್ಫಿ ಕೂಡ ತೆಗೆದುಕೊಂಡರು.
Fan gestures like these 🤗
Autographs and selfies ft. #TeamIndia Captain @ImRo45, @imVkohli & @surya_14kumar ✍️
Cricket fans here in Barbados also gifted a bracelet made for Virat Kohli 👌👌#WIvIND pic.twitter.com/Qi551VYfs4
— BCCI (@BCCI) July 30, 2023
ಇನ್ನು ಕೆಲವು ಅಭಿಮಾನಿಗಳೊಂದಿಗೆ ಕೊಹ್ಲಿ ಸೆಲ್ಫಿಗೆ ಪೋಸ್ ನೀಡಿದರು. ಇದೇ ವೇಳೆ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಕೂಡ ಅಭಿಮಾನಿಗಳನ್ನು ಭೇಟಿಯಾಗಿ ಆಟೋಗ್ರಾಫ್ ನೀಡಿದರು. ಹಾಗೆಯೇ ತಂಡದ ನಾಯಕ ರೋಹಿತ್ ಕೂಡ ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು.
ಎರಡನೇ ಏಕದಿನ ಪಂದ್ಯದಲ್ಲಿ ವಿಶ್ರಾಂತಿ
ಎರಡನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಮತ್ತು ರೋಹಿತ್ ಆಡಿರಲಿಲ್ಲ. ಅವರಿಗೆ ವಿಶ್ರಾಂತಿ ನೀಡಲು ತಂಡದ ಆಡಳಿತ ಮಂಡಳಿ ನಿರ್ಧರಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಸೋಲನುಭವಿಸಿದ್ದರಿಂದ ತಂಡವು ಇದರ ಭಾರವನ್ನು ಅನುಭವಿಸಬೇಕಾಯಿತು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ತಂಡದ ನಾಯಕರಾಗಿದ್ದರು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೇವಲ 181 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಈ ಗುರಿ ಬೆನ್ನಟ್ಟಿದ ವಿಂಡೀಸ್ ನಾಲ್ಕು ವಿಕೆಟ್ ಕಳೆದುಕೊಂಡು ಈ ಗುರಿಯನ್ನು ಸಾಧಿಸಿತು.