ಮೈಸೂರು: ಚಾಮುಂಡಿ ಬೆಟ್ಟದ ಪಾವಿತ್ಯ್ರತೆಗೆ ಧಕ್ಕೆ ಬಾರದ ರೀತಿಯಲ್ಲಿ ಆಕರ್ಷಕ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು ಅಂತ ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು , ಚಾಮುಂಡಿ ಬೆಟ್ಟವನ್ನು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು. ಪ್ರವಾಸಿಗರಿಗೆ ಆಕರ್ಷಣೀಯವಾಗುವಂತೆ, ಭಕ್ತರಿಗೆ ನೆಮ್ಮದಿ ಸಿಗುವವಂತೆ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಮಾಡಲಾಗುವುದು. ಈ ಸಂಬಂಧ ತಜ್ಞರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಪ್ರವಾಸಿ ತಾಣಗಳಲ್ಲಿ ವೀಕ್ಷಕರ ಸಂಖ್ಯೆ ಹೆಚ್ಚಳ
ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ. ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಅನುವು ಮಾಡಿಕೊಟ್ಟ ಬಳಿಕ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರವಾಸಿ ತಾಣಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ ಪಾಟೀಲ್ ಹೇಳಿದರು.
ಚಾಮುಂಡೇಶ್ವರಿ ಗೆ ವಿಶೇಷ ಪೂಜೆ
ಸಚಿವರಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಹೆಚ್.ಕೆ ಪಾಟೀಲ್, ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇಗುಲದ ಪ್ರಾಂಗಣದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಳೆದರು. ಇದೇ ವೇಳೆ ಅಭಿವೃದ್ಧಿ ಸಂಬಂಧ ಕೆಲ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.
ಮೈಸೂರು ಟೂರಿಸಂಗೆ ಹೆಚ್ಚು ಪ್ರಾಶಸ್ತ್ಯ
ಮೈಸೂರು, ಪ್ರವಾಸಿಗರ ಸ್ವರ್ಗ. ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ಕೊಡುತ್ತಾರೆ. ಅಂಬಾವಿಲಾಸ ಅರಮನೆ , ಜಗನ್ಮೋಹನ ಅರಮನೆ , ಚಾಮುಂಡಿಬೆಟ್ಟ , ನಂಜನಗೂಡಿಗೆ ಹೆಚ್ಚೆಚ್ಚು ಜನರು ಆಗಮಿಸುತ್ತಾರೆ. ಇಲ್ಲಿ ಟೂರಿಸಂ ಸರ್ಕ್ಯುಟ್ ಆಗ್ಬೇಕು ಅನ್ನೋದು ಬಹಳ ವರ್ಷಗಳ ಬೇಡಿಕೆ. ಸಿಎಂ ಸಿದ್ದರಾಮಯ್ಯ ಕೂಡ ಮೈಸೂರಿನ ಮೂಲದವರೆ ಆಗಿದ್ದು, ಇದೀಗ ಜನರಲ್ಲಿ ನಿರೀಕ್ಷೆ ಇಮ್ಮಡಿಯಾಗಿದೆ.