Mysore
20
overcast clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ನಕಲಿ ನೋಂದಣಿ ಮಾಡಿದ ಅಧಿಕಾರಿಗೆ ಮೂರು ವರ್ಷ ಜೈಲು: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು : ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಥವಾ ಕಾನೂನಿನಡಿಯಲ್ಲಿ ನಿಷೇಧಿಸಲಾದ ಇತರ ದಾಖಲೆಗಳ ಆಧಾರದ ಮೇಲೆ ಆಸ್ತಿ ವಹಿವಾಟುಗಳನ್ನು ಅಧಿಕೃತಗೊಳಿಸುವ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ಮತ್ತು ಅಂತಹ ನಕಲಿ ನೋಂದಣಿಯನ್ನು ರದ್ದುಗೊಳಿಸುವ ನೋಂದಣಿ ವಿಧೇಯಕವನ್ನು ಸಚಿವ ಕೃಷ್ಣಭೈರೇಗೌಡ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದ್ದಾರೆ. ಮಸೂದೆಯು ಸರ್ವಾನುಮತದಿಂದ ಅಂಗೀಕಾರಗೊಂಡಿದೆ.

ಸದನದಲ್ಲಿ ಮಸೂದೆಯನ್ನು ಮಂಡಿಸಿ, ಈ ಮಸೂದೆ ಏಕೆ ಅವಶ್ಯಕ? ಎಂದು ತಿಳಿಸಿರುವ ಸಚಿವರು, “ನೋಂದಣಿ ಕಾಯ್ದೆ 1908ರಲ್ಲಿ ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಯಾವುದೇ ಮಾಲೀಕತ್ವ ಇಲ್ಲದ, ದಾಖಲೆ ಇಲ್ಲದ ಅಥವಾ ನಿಜವಾದ ಮಾಲೀಕರಂತೆ ನಟಿಸುವ ಮೂಲಕ ಮಾಡಿದ ಮೋಸದ ನೋಂದಣಿಯನ್ನು ರದ್ದುಪಡಿಸಲು ನೋಂದಣಿ ಪ್ರಾಧಿಕಾರಕ್ಕೆ ಅಧಿಕಾರ ಇರುವುದಿಲ್ಲ.

ನೊಂದ ಮಾಲೀಕರು ಸಿವಿಲ್ ನ್ಯಾಯಾಲಯದ ಮೂಲಕ ಮೋಸದ ನೋಂದಣಿಯನ್ನು ರದ್ದು ಮಾಡಬೇಕಿರುತ್ತದೆ. ಆದರೆ, ನ್ಯಾಯಾಂಗ ಆದೇಶ ಪಡೆಯುವ ಪ್ರಕ್ರಿಯೆ ಕನಿಷ್ಟ 10 ವರ್ಷಕ್ಕೂ ಹೆಚ್ಚಿರುತ್ತದೆ. ಇದರಿಂದಾಗಿ ಆಸ್ತಿ ಮಾಲೀಕರಿಗೆ ಕಿರುಕುಳ, ತೊಂದರೆ ಅನ್ಯಾಯವಾಗುತ್ತದೆ. ಸಾರ್ವಜನಿಕರಿಗೆ ಉಂಟಾಗುವ ಇಂತಹ ಅನ್ಯಾಯವನ್ನು ತಡೆಯುವ ನಿಟ್ಟಿನಲ್ಲಿ ಈ ಮಸೂದೆಯನ್ನು ಜಾರಿಗೆ ತರಲಾಗುತ್ತಿದೆ” ಎಂದು ಮಸೂದೆಯನ್ನು ಸಮರ್ಥಿಸಿಕೊಂಡರು.

ಅಲ್ಲದೆ, ನಕಲಿ ದಾಲೆಗಳ ಮೂಲಕ ಮೋಸ ಮಾಡುವವರಿಗೆ ಸಹಾಯವಾಗುತ್ತಿತ್ತು. ಕೆಲವು ಅಧಿಕಾರಿಗಳು ತಮಗೇ ಗೊತ್ತಿಲ್ಲದೆ ನಕಲಿ ನೋಂದಣಿ ಮಾಡಿರುತ್ತಾರೆ. ಇನ್ನೂ ಕೆಲವು ಅಧಿಕಾರಿಗಳು ಉದ್ದೇಶಪೂರ್ವಕವಾಗಿಯೇ ನಕಲೀದಾರರ ಜೊತೆ ಶಾಮೀಲಾಗಿ ತಪ್ಪು ನೋಂದಣಿ ಮಾಡಿದ್ದಾರೆ. ಇಂತಹ ಹಲವು ಪ್ರಕರಣಗಳ ದೊಡ್ಡ ಪಟ್ಟಿಯೇ ನನ್ನ ಬಳಿ ಇದೆ. ಪ್ರಸ್ತುತ ಶಾಸಕರಾಗಿರುವ ನರೇಂದ್ರ ಸ್ವಾಮಿ, ಅಭಯ್ ಪಾಟೀಲ್ ಅವರ ಆಸ್ತಿಯನ್ನೇ ಹೀಗೆ ನಕಲು ದಾಖಲೆಯ ಮೇಲೆ ಕಬಳಿಸಲಾಗಿತ್ತು. ಮಾಜಿ ಶಾಸಕರಾದ ಗೂಳಿಹಟ್ಟಿ ಶೇಖರ್ ಹಾಗೂ ಬಿ ಶಂಕರಾನಂದ್ ಸಹ ಇಂತಹ ಪರಿಸ್ಥಿತಿಯನ್ನು ಎದುರಿಸಿದ್ದರು. ಶಾಸಕರಿಗೇ ಈ ಪರಿಸ್ಥಿತಿಯಾದರೆ, ಸಾಮಾನ್ಯರ ಪರಿಸ್ಥಿತಿ ಏನು?

ಹೀಗಾಗಿ ಆಡಳಿತ ಸುಧಾರಣೆ, ಆಡಳಿತ ಸರಳೀಕರಣ ಮತ್ತು ಕಚೇರಿಗಳಲ್ಲಿ ವಿಳಂಬ, ಶೋಷಣೆ, ಸುಲಿಗೆ ಇಲ್ಲದೆ ಜನರ ಕೆಲಸ ತತಕ್ಷಣ ಆಗಬೇಕು ಎಂಬ ಕಾರಣದಿಂದ ಇಂದು ನೋಂದಣಿ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲಾಗಿದೆ ತರಲಾಗುತ್ತಿದೆ” ಎಂದು ಸಚಿವ ಕೃಷ್ಣಭೈರೇಗೌಡ ಸದನಕ್ಕೆ ತಿಳಿಸಿದರು.

ನೋಂದಣಿ ತಿದ್ದುಪಡಿ ಮಸೂದೆ 2023:

ನೋಂದಣಿ (ಕರ್ನಾಟಕ ತಿದ್ದುಪಡಿ) ಮಸೂದೆಯ ಪ್ರಕಾರ, ನೋಂದಣಿ ಅಧಿಕಾರಿ (ಸಾಮಾನ್ಯವಾಗಿ ಸಬ್-ರಿಜಿಸ್ಟ್ರಾರ್) ನಕಲಿ ದಾಖಲೆಗಳನ್ನು ನೋಂದಾಯಿಸಲು ನಿರಾಕರಿಸಬೇಕು. ಯಾವುದೇ ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಲೆಗಳು ಕೇಂದ್ರ ಅಥವಾ ರಾಜ್ಯ ಕಾಯ್ದೆಗಳಿಂದ ನಿಷೇಧಿಸಲಾಗಿದ್ದು, ಅಂತಹ ಆಸ್ತಿಗಳ ದಾಖಲೆಗಳನ್ನು ನೋಂದಾಯಿಸಲು ಅಧಿಕಾರಿಗಳು ನಿರಾಕರಿಸಬೇಕು.

ಅಧಿಕಾರಿಗಳು ನಿಯಮ ಮೀರಿ ನಕಲಿ ದಾಖಲಾತಿಗಳನ್ನು ನೋಂದಾಯಿಸಿದರೆ, ಈ ಮಸೂದೆಯು ಅಧಿಕಾರಿಗಳಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲು ಪ್ರಸ್ತಾಪಿಸುತ್ತದೆ. ದಾಖಲೆಗಳ ಮೋಸದ ನೋಂದಣಿಯಲ್ಲಿ ತೊಡಗಿರುವ ಕಂಪನಿಗಳನ್ನು ಶಿಕ್ಷಿಸಲು ಮಸೂದೆ ಪ್ರಸ್ತಾಪಿಸುತ್ತದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ