Mysore
18
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಈ ಪ್ರಚಂಡ ಪಾತಕಿಯ ಮುಂದೆ ಮೋದಿ ಮಹಾಮೌನಿ!

ಬ್ರಿಜ್‌ಭೂಷಣ್ ಶರಣ್ ಸಿಂಗ್ ಭಾರತ ಕುಸ್ತಿ ಫೆಡರೇಷನ್ನಿನ ಅಧ್ಯಕ್ಷ. ಉತ್ತರ ಪ್ರದೇಶದ ಗೊಂಡಾ ಸೀಮೆಯ ಬಲಿಷ್ಠ ‘ಬಾಹುಬಲಿ’. ಅಪಾರ ಪ್ರಭಾವಶಾಲಿ ರಜಪೂತ. ವಯಸ್ಸು 66. ಆರು ಸಲ ಸಂಸದ. ಐದು ಬಾರಿ ಬಿಜೆಪಿ ಟಿಕೆಟ್ ಮೇಲೆ ಗೆದ್ದು ಬಂದಿದ್ದಾನೆ.

ಫೆಡರೇಷನ್ನಿನ ಅಧ್ಯಕ್ಷನಾಗಿ ಕಳೆದ 11 ವರ್ಷಗಳಲ್ಲಿ ಅದೆಷ್ಟು ಮಂದಿ ಹೆಣ್ಣುಮಕ್ಕಳ ಲೈಂಗಿಕ ಶೋಷಣೆ ಮಾಡಿದ್ದಾರೋ, ಲೆಕ್ಕವಿಲ್ಲ ಎನ್ನುತ್ತಾರೆ ಅಂತಾರಾಷ್ಟ್ರೀಯ ಖ್ಯಾತಿಯ ಕುಸ್ತಿಪಟು ಮತ್ತು ಈತನ ಬಲಿಪಶುಗಳ ಪೈಕಿ ಒಬ್ಬರಾದ ವಿನೇಶ್ ಫೋಗಟ್. ವಿನೇಶಾ, ಸಾಕ್ಷಿ ಮಲ್ಲಿಕ್ ಸೇರಿದಂತೆ ಆರು ಮಂದಿ ಕ್ರೀಡಾಪಟುಗಳು ತಮ್ಮ ಮೇಲೆ ಲೈಂಗಿಕ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದ ಬ್ರಿಜ್‌ಭೂಷಣನ ವಿರುದ್ಧ ದಿಟ್ಟ ಹೋರಾಟ ನಡೆಸಿದ್ದಾರೆ. ಆರು ತಿಂಗಳ ಈ ಸಂಘರ್ಷ ಕುರಿತು ಬೇಟೀ ಬಚಾವೋ ಎಂದು ಗಂಟಲೇರಿಸಿ ಘೋಷಣೆ ಹಾಕುವ ಮೋದಿಯವರು ಮಹಾಮೌನ ಧರಿಸಿದ್ದಾರೆ. ಹೋರಾಟಕ್ಕೆ ಮಣಿದ ದೆಹಲಿ ಪೊಲೀಸರು ಕಡೆಗೂ ಬ್ರಿಜ್‌ಭೂಷಣ್ ವಿರುದ್ಧ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆದರೂ ಬ್ರಿಜಭೂಷಣ್ ಆಟಾಟೋಪ ಅಡಗಿಲ್ಲ. ಎದೆ ಸೆಟೆಸಿ ಅಡ್ಡಾಡುತ್ತಿದ್ದಾನೆ.

ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದು ಅರಚಿದ್ದಾನೆ. ಮೋದಿಯವರಂತಹ ಮೋದಿಯವರು ಈತನ ಬಗ್ಗೆ ಏಕೆ ಅಸಹಾಯಕರು? ಅವರ ಕೈಗಳನ್ನು ಕಟ್ಟಿ ಹಾಕಿರುವ ಹಗ್ಗ ಯಾವುದು? ಅವರ ತುಟಿಗಳನ್ನು ಹೊಲಿದು ಹಾಕಿರುವ ನೂಲು ಅದ್ಯಾವುದು?

2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸೀಟುಗಳನ್ನು ಗೆಲ್ಲಿಸಿಕೊಡಲು ಬ್ರಿಜೇಶ್ ಬಿಜೆಪಿಗೆ ಬೇಕೇ ಬೇಕು. ಬೇಟಿ ಬಚಾವೊ ಎಂದು ಬ್ರಿಜೇಶನನ್ನು ಜೈಲಿಗೆ ಹಾಕಿದರೆ ಸೀಟು ಗೆಲ್ಲಿಸಿಕೊಡುವವರು ಯಾರು ಎಂಬುದು ಮೋದಿಯವರ ಚಿಂತೆ.

ಹೆಲಿಕಾಪ್ಟರುಗಳಲ್ಲೇ ಈತನ ಸಂಚಾರ. ಅಡಿಗಡಿಗೆ ಕಾಲಿಗೆ ಬಿದ್ದು ನಮಿಸುವ ಅನುಯಾಯಿಗಳು. ಹಿಂದೆ ಮುಂದೆ ಸರ್ಕಾರಿ ಅಂಗರಕ್ಷಕರು. ಕೊರಳ ತುಂಬ ಹೂಮಾಲೆಗಳು. ಹಣೆಯ ಮುಚ್ಚುವಂತೆ ವಿಭೂತಿ ಬಳಿದುಕೊಂಡು ನಡುವೆ ದೊಡ್ಡ ಕುಂಕುಮ ಧರಿಸಿದ ವ್ಯಸನಗಳ ಸರದಾರನಂತಹ ಮುಖಚಹರೆ. ಚಿನ್ನ ದಲ್ಲಿ ಸುತ್ತಿದ ರುದ್ರಾಕ್ಷಿ ಸರಗಳು, ಜರತಾರಿ ಧಿರಿಸು. ತಲೆಯ ಮೇಲೆ ಮುತ್ತಿನ ಸರ ತೊಡಿಸಿದ ಬಣ್ಣಬಣ್ಣದ ಮುಕುಟ. ವಿಶ್ವ ಹಿಂದೂ ಪರಿಷತ್‌ನ ಉಚ್ಚ ನಾಯಕ ಅಶೋಕ್ ಸಿಂಘಲ್ ಆಪ್ತನೀತ. ಭಾರತೀಯ ಜನತಾ ಪಕ್ಷ ತನಗೆ ವಹಿಸಿಕೊಟ್ಟ ಎಲ್ಲ ಕೆಲಸಗಳನ್ನೂ ಯಶಸ್ವಿಯಾಗಿ ಮಾಡಿ ತೋರಿಸಿದ್ದಾನೆ.

ಹರೆಯದಲ್ಲಿ ಕುಸ್ತಿ ಆಡುತ್ತಿದ್ದ. 1980ರ ದಶಕದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳಲ್ಲಿ ಭಾಗಿಯಾಗಿದ್ದ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನೆಲಸಮದಲ್ಲಿ ಪಾಲ್ಗೊಂಡು ಹಿಂದುತ್ವ ವರ್ಚಸ್ಸು ಗಳಿಸಿಕೊಂಡ.

ಉತ್ತರಪ್ರದೇಶದ ಅಯೋಧ್ಯೆಯಿಂದ ಶ್ರಾವಸ್ತಿಯ ತನಕ ನೂರು ಕಿ.ಮೀ. ಸುತ್ತಳತೆಯ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳ ಮಾಲೀಕ ಈತ. ಈ ಸಂಸ್ಥೆಗಳೇ ಬ್ರಿಜ್‌ಭೂಷಣ್‌ನ ಚುನಾವಣಾ ಯಂತ್ರವನ್ನು ಸಲೀಸಾಗಿ ನಡೆಸಿಕೊಡುತ್ತವೆ. ಹೀಗಾಗಿ ಈತನಿಗೆ ಬಿಜೆಪಿ ಬೇಕು ಎನ್ನುವುದಕ್ಕಿಂತ ಹೆಚ್ಚಾಗಿ ಬಿಜೆಪಿಗೆ ಈತ ಬೇಕೇ ಬೇಕು ಚುನಾವಣೆಗಳನ್ನು ಗೆಲ್ಲಲು.

ನಾನು ಕೊಲೆ ಮಾಡಿರುವುದು ಹೌದು ಎಂದು ಈತ ಸಾರ್ವಜನಿಕವಾಗಿ ಘೋಷಿಸಿದ್ದು ಉಂಟು. ಆದರೆ ಕೊಲೆಯ ಕುರಿತ ಕಾಯಿದೆ ಕಾನೂನಿನ ಕೈಗಳು ಈತನ ತನಕ ಚಾಚಿಲ್ಲ. ಈತನ ತೋಳ್ಬಲದ ಕತೆಗಳು ವಿಶೇಷವಾಗಿ ಗೊಂಡಾ ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮನೆಮಾತು. 2022ರಲ್ಲಿ ಅಂತರ್ಜಾಲ ತಾಣವೊಂದಕ್ಕೆ ಈತನೇ ಸಂದರ್ಶನ ನೀಡಿ ಹೇಳುವ ತನಕ ಈತ ಕೊಲೆ ಮಾಡಿದ್ದನೆಂಬ ವಿಚಾರ ಬಹಿರಂಗ ಆಗಿರಲಿಲ್ಲ. ಈತನ 2019ರ ಲೋಕಸಭಾ ಚುನಾವಣೆ ಪ್ರಮಾಣ ಪತ್ರದಲ್ಲಿ ಕೊಲೆ ಪ್ರಯತ್ನದ ಕೇಸೂ ಸೇರಿದಂತೆ ನಾಲ್ಕು ಕ್ರಿಮಿನಲ್ ಕೇಸುಗಳು ಮತ್ತು ಇತರೆ ಗಂಭೀರ ಅಪರಾಧ ಪ್ರಕರಣಗಳು ನಮೂದಾಗಿದ್ದವು.1980ರ ದಶಕದಲ್ಲಿ ಮೋಟರ್ ಬೈಕುಗಳ ಕಳವಿನಿಂದ ಹಿಡಿದು ಅನಧಿಕೃತ ಲಿಕ್ಕರ್ ಶಾಪ್‌ಗಳನ್ನು ನಡೆಸುತ್ತಿದ್ದ ಆಪಾದನೆಗಳೂ ಈತನ ಮೇಲಿದ್ದವು. ಈತನ ಸಿವಿಲ್ ಕಾಂಟ್ರ್ಯಾಕ್ಟರ್ ಕಸುಬಿ ನಲ್ಲಿ ಅಂದಿನ ಸಮಾಜವಾದಿ ಪಾರ್ಟಿ ಸರ್ಕಾರದ ಕ್ಯಾಬಿನೆಟ್ ಸಚಿವ ವಿನೋದ್ ಕುಮಾರ್ ಸಿಂಗ್ ಪಾಲುದಾರನಾಗಿದ್ದ.

ಪಾಲುದಾರರು ಪರಸ್ಪರ ಹಗೆಗಳಾದರು. 1993ರಲ್ಲಿ ಪಂಡಿತ್ ಸಿಂಗ್‌ನನ್ನು ಗುಂಡಿಟ್ಟು ಕೊಲ್ಲುವ ಪ್ರಯತ್ನದ ಕೇಸು ಬ್ರಿಜ್‌ಭೂಷಣ್ ಮೇಲೆ ದಾಖಲಾಯಿತು. ತನ್ನ ಮೇಲೆ 20 ಗುಂಡುಗಳನ್ನು ಹಾರಿಸಲಾಯಿತು, 14 ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕಾಯಿತು ಎಂದು ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ ಪಂಡಿತ್ ಸಿಂಗ್ ಆರೋಪಿಸಿದ್ದಾನೆ. 29 ವರ್ಷಗಳ ಕಾಲ ನಡೆದ ಈ ಕೇಸಿನಿಂದ ಬ್ರಿಜಭೂಷಣ್ ಖುಲಾಸೆಯಾದದ್ದು ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಷ್ಟೇ. ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಆರೋಪಮುಕ್ತನಾದ. ಕಳಪೆ ತನಿಖೆಗಾಗಿ ಪೊಲೀಸರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.

ಪಂಡಿತ್ ಸಿಂಗ್‌ನ ತಮ್ಮನೊಬ್ಬನಿದ್ದ. ಅವನ ಹೆಸರು ರವೀಂದರ್ ಸಿಂಗ್. ಈತ ಬ್ರಿಜ್‌ಭೂಷನ ಆಪ್ತ ಗೆಳೆಯ. ಇಬ್ಬರೂ ಕಾಂಟ್ರ್ಯಾಕ್ಟರುಗಳು, ಜೊತೆ ಸೇರಿ ಕೆಲಸ ಮಾಡುತ್ತಿದ್ದರು. ಇವರು ನಡೆಸುತ್ತಿದ್ದ ಪಂಚಾಯಿತಿ ಸಭೆಯೊಂದರಲ್ಲಿ ಗುಂಡುಗಳು ಹಾರಿದವು. ಈ ಪೈಕಿ ಒಂದು ಗುಂಡು ರವೀಂದರ್‌ಗೆ ತಗುಲಿತು. ಬ್ರಿಜ್‌ಭೂಷಣ್ ಪಕ್ಕದಲ್ಲಿ ನಿಂತಿದ್ದ ರವೀಂದರ್ ಅಲ್ಲೇ ಮೃತನಾದ. ಕೆರಳಿದ ಬ್ರಿಜ್‌ಭೂಷಣ್, ಗುಂಡು ಹಾರಿಸಿದ್ದ ವ್ಯಕ್ತಿಯ ಕೈಯಿಂದ ಬಂದೂಕನ್ನು ಕಿತ್ತುಕೊಂಡು ಅವನಿಗೆ ಗುಂಡಿಟ್ಟು ಕೊಂದ. ಈ ಘಟನೆಯನ್ನು ಖುದ್ದು ಬ್ರಿಜ್‌ಭೂಷಣ್ ಲಲ್ಲನ್ ಟಾಪ್ ಎಂಬ ಸುದ್ದಿ ಜಾಲತಾಣಕ್ಕೆ ನೀಡಿರುವ ವಿಡಿಯೋ ಸಂದರ್ಶನ ದಲ್ಲಿ ವಿವರಿಸಿದ್ದಾನೆ. ಜನ ಏನಾದರೂ ಹೇಳಿಕೊಳ್ಳಲಿ, ನನ್ನಿಂದ ಕೊಲೆಯೊಂದು ನಡೆದಿದೆ. ರವೀಂದರ್‌ನನ್ನು ಗುಂಡು ಹಾರಿಸಿ ಕೊಂದವನನ್ನು ನಾನು ಕೊಂದಿದ್ದೇನೆ ಎಂದಿದ್ದಾನೆ. ಅಯೋಧ್ಯಾ ಜಿಲ್ಲೆಯ ಫೈಜಾಬಾದ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದರಲ್ಲೂ ಸಿಂಗ್ ಈ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಂತೆ.

ಗೊಂಡಾದ ಬಿಜೆಪಿ ಅಭ್ಯರ್ಥಿಯ ಕೊಲೆ ಮಾಡಿಸಿದನೆಂದು ಅಟಲ್ ಬಿಹಾರಿ ವಾಜಪೇಯಿ ಅವರು ಅನುಮಾನಪಟ್ಟ ನಂತರವೂ ಬ್ರಿಜ್‌ಭೂಷಣ್, ಬಿಜೆಪಿಯಲ್ಲೇ ಉಳಿಯುತ್ತಾನೆ. ಪಕ್ಷದ ವಿರುದ್ಧ ಮತ ಚಲಾಯಿಸಿದಾಗ ಮಾತ್ರವೇ ಈತನನ್ನು ಉಚ್ಚಾಟನೆ ಮಾಡಲಾಗುತ್ತದೆ ಎಂಬುದು ಗಮನಾರ್ಹ. ತನಗೆ ಬಿಜೆಪಿಯ ಅಗತ್ಯವಿರುವುದಕ್ಕಿಂತ ಹೆಚ್ಚು ಬಿಜೆಪಿಗೆ ತನ್ನ ಅಗತ್ಯ ಇರುವುದಾಗಿ ಈತ ನಂಬುತ್ತಾನೆ. ತನ್ನ ತವರು ಜಿಲ್ಲೆ ಗೊಂಡಾ ಮತ್ತು ಸುತ್ತಮುತ್ತಲ ಕನಿಷ್ಠ ಆರು ಜಿಲ್ಲೆಗಳಲ್ಲಿ ಈತನ ದಟ್ಟ ಪ್ರಭಾವ ಹಬ್ಬಿ ನೆಲೆಸಿದೆ.

ಬಹ್ರೇಚ್, ಗೊಂಡಾ, ಬಲರಾಂಪುರ್, ಶ್ರಾವಸ್ತಿ ಹಾಗೂ ಅಯೋಧ್ಯಾ ಜಿಲ್ಲೆಗಳಲ್ಲಿ ಈತನ ಐವತ್ತು ಶಿಕ್ಷಣ ಸಂಸ್ಥೆಗಳಿವೆ. ಈ ಸಂಸ್ಥೆಗಳು ಈತನ ರಾಜಕೀಯ ಪ್ರಭಾವವನ್ನು ಮತ್ತಷ್ಟು ಹೆಚ್ಚಿಸಿವೆ. ರಾಜಕೀಯ ಉದ್ದೇಶಕ್ಕೆಂದು ಇವುಗಳನ್ನು ಸ್ಥಾಪಿಸಲಿಲ್ಲ. ಆದರೆ ಇಂದು ವಿದ್ಯಾರ್ಥಿಗಳು ನನ್ನ ಸುತ್ತ ತಿರುಗುತ್ತಾರೆ. ಜನ ನನ್ನನ್ನು ಮಾಫಿಯಾ ಎಂದು ಕರೆಯಬಹುದು. ಆದರೆ ವಿದ್ಯಾರ್ಥಿಗಳ ಪಾಲಿಗೆ ನಾನು ಆದರ್ಶಮೂರ್ತಿ. ಈ ಹಿಂದೆ ನಾನು ಬ್ರಾಹ್ಮಣರ ಪಾದಗಳನ್ನು ಮುಟ್ಟಿ ನಮಸ್ಕಾರ ಮಾಡುತ್ತಿದ್ದೆ. ಈಗ ಬ್ರಾಹ್ಮಣ ಯುವಕರು ನನ್ನ ಕಾಲು ಮುಟ್ಟಿ ಗುರೂಜೀ ಎಂದು ಕರೆಯುತ್ತಾರೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ.

ಬ್ರಿಜ್‌ಭೂಷಣ್ ಸಿಂಗ್ ಗಳಿಸಿಕೊಂಡಿರುವ ಕಟ್ಟರ್ ಹಿಂದುತ್ವವಾದಿಯ ವರ್ಚಸ್ಸು ಬಿಜೆಪಿಗೆ ಅನುಕೂಲಕರ. ರಾಮಮಂದಿರ ಆಂದೋಲನದ ಬಹುಮುಖ್ಯ ಚಹರೆಗಳಲ್ಲಿ ಬ್ರಿಜ್‌ಭೂಷಣ್ ಕೂಡ ಒಬ್ಬ. ಬಾಬರಿ ಮಸೀದಿ ನೆಲಸಮ ಪ್ರಕರಣದಲ್ಲಿ ದಸ್ತಗಿರಿಯಾಗಿದ್ದ…

ದಾವೂದ್ ಇಬ್ರಾಹಿಂನ ಸಹಚರರಿಗೆ ಆಶ್ರಯ ಕೊಟ್ಟ ಆಪಾದನೆಗಳ ಮೇರೆಗೆ ಹಲವು ತಿಂಗಳುಗಳ ಕಾಲ ದೆಹಲಿಯ ತಿಹಾರ ಜೈಲಿನಲ್ಲಿ ಬಂಧಿಯಾಗಿದ್ದ. 

ಅಥವಾ ಭಯೋತ್ಪಾದನೆ ಮತ್ತು ವಿಚ್ಛಿದ್ರಕಾರಿ ಚಟುವಟಿಕೆಗಳ ನಿಗ್ರಹ ಕಾಯಿದೆಯ ಅಡಿಯಲ್ಲಿ ಈತನನ್ನು ಬಂಧಿಸ ಲಾಗಿತ್ತು. ಪುರಾವೆಗಳ ಕೊರತೆಯ ಕಾರಣದಿಂದ ಆರೋಪಮುಕ್ತನಾದ.

ಈತನ 22 ವರ್ಷ ವಯಸ್ಸಿನ ಮಗ ಶಕ್ತಿಸಿಂಗ್ 2004ರಲ್ಲಿ ಆತ್ಮಹತ್ಯೆ ಮಾಡಿ ಕೊಂಡ. ತಾನು ಬರೆದಿಟ್ಟ ಪತ್ರದಲ್ಲಿ ತನ್ನ ಆತ್ಮಹತ್ಯೆಗೆ ತಂದೆ ಬ್ರಿಜ್‌ಭೂಷಣನೇ ಕಾರಣನೆಂದು ದೂರಿದ್ದ. ‘ನೀನೊಬ್ಬ ಒಳ್ಳೆಯ ತಂದೆಯಾಗಲಿಲ್ಲ. ನನ್ನ ಒಡಹುಟ್ಟಿದವರನ್ನಾಗಲಿ, ನನ್ನನ್ನೇ ಆಗಲಿ ಸರಿಯಾಗಿ ನೋಡಿಕೊಳ್ಳಲಿಲ್ಲ ನೀನು. ಯಾವಾಗಲೂ ನಿನ್ನ ಹಿತವನ್ನು ಮಾತ್ರವೇ ನೋಡಿಕೊಂಡೆ. ನಮ್ಮ ಭವಿಷ್ಯವನ್ನು ಕತ್ತಲು ಕವಿದಿದೆ. ಹೀಗಾಗಿ ಬದುಕಿರುವುದರಲ್ಲಿ ಅರ್ಥವಿಲ್ಲ’ ಎಂದು ಶಕ್ತಿಸಿಂಗ್ ತಂದೆಯ ಸ್ವಾರ್ಥಕ್ಕೆ ಕನ್ನಡಿ ಹಿಡಿದಿದ್ದ. ಮೋದಿಯವರ ಮಹಾಮೌನದ ಹಿಂದಿನ ಈ ಗುಟ್ಟು ಈಗ ಜನಜನಿತ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ