ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಮುಂಗಡಪತ್ರವನ್ನು ಚಾತಕ ಪಕ್ಷಿಯಂತೆ ಕಾಯುತ್ತಿತ್ತು ಚಿತ್ರೋದ್ಯಮ. ಈ ಬಾರಿ ಅವರು ಹೊಸದೇನನ್ನೂ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಹೇಳಿಲ್ಲ.
2015 -16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ನಂತರದ ಸರ್ಕಾರವು ಸದರಿ ಯೋಜನೆಯನ್ನು ಬೆಂಗಳೂರಿಗೆ ವರ್ಗಾಯಿಸಲು ಉದ್ದೇಶಿಸಿತ್ತು. ಆದರೆ ಇಲ್ಲಿಯವರೆಗೂ ಅನುಷ್ಠಾನಗೊಳಿಸಿರುವುದಿಲ್ಲ. ನಮ್ಮ ಸರ್ಕಾರವು ಹಿಂದೆ ಘೋಷಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲಿದೆ.
ಬೆಂಗಳೂರಿನಲ್ಲಿರುವ ಡಾ.ರಾಜಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು.
ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತು. ಈ ಬಾರಿ ಆಯ್ಕೆ ಸಮಿತಿಗಳನ್ನು ರಚಿಸಿ, ಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು’ – ಇವು ಚಿತ್ರೋದ್ಯಮಕ್ಕೆ ಸಂಬಂಽಸಿದಂತೆ ಮುಂಗಡ ಪತ್ರದಲ್ಲಿ ಹೇಳಿರುವ ಪ್ರಸ್ತಾವನೆಗಳು.
ಚಿತ್ರನಗರಿ ಯೋಜನೆ ಈಗಾಗಲೇ ಹೇಳಿರುವಂತೆ ಐದು ದಶಕಗಳಿಗೂ ಹಿಂದಿನ ಯೋಜನೆ. ಆ ನಂತರ ಬಂದ ಸರ್ಕಾರಗಳ ನಿರಾಸಕ್ತಿಯೋ, ಉದ್ಯಮದ ಇಚ್ಛಾಶಕ್ತಿಯ ಕೊರತೆಯೋ, ಇನ್ನೇನೋ ಒಟ್ಟಿನಲ್ಲಿ ಅದು ಕಾರ್ಯಗತವಾಗಿಲ್ಲ, ಮೈಸೂರಿನ ಇಮ್ಮಾವಿನಲ್ಲಿ ಈಗಾಗಲೇ ಚಿತ್ರನಗರಿಗಾಗಿ 110 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಆ ನಿಟ್ಟಿನಲ್ಲಿ ಕೆಲಸಗಳು ಸಾಗತೊಡಗಿವೆ ಎನ್ನಲಾಗಿದೆ. ಚಿತ್ರನಗರಿಯ ನೀಲಿನಕ್ಷೆ, ಜಾಗತಿಕ ಟೆಂಡರ್ ಕರೆಯುವುದೇ ಮೊದಲಾದ ಕೆಲಸಗಳು ಇನ್ನು ಆರಂಭವಾಗಬಹುದು. ಚಿತ್ರನಗರಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ ಎಂದು ಮುಂಗಡ ಪತ್ರದಲ್ಲಿ ಹೇಳಲಾಗಿದೆ.
ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತುಸಂಗ್ರಹಾಲಯವನ್ನು ಡಾ.ರಾಜಕುಮಾರ್ ಸ್ಮಾರಕದ ಬಳಿ ನಿರ್ಮಿಸುವುದಾಗಿ ಹೇಳಲಾಗಿದೆ. ಸ್ಮಾರಕದಲ್ಲಿ ಡಾ.ರಾಜಕುಮಾರ್ ಅವರು ನಡೆದು ಬಂದ ದಾರಿಯ ಕುರಿತಂತೆ ಹೇಳುವ ಸಂಗ್ರಹಾಲಯವನ್ನು ಸ್ಥಾಪಿಸುವುದು, ಮೊದಲು ಇದ್ದ ಯೋಜನೆ. ರಾಜಕುಮಾರ್ ಅವರ ಜೀವಿತ ಕಾಲದಲ್ಲೇ ಇಂತಹದೊಂದು ಸಂಗ್ರಹಾಲಯದ ಯೋಚನೆ ಅವರ ಕುಟುಂಬಕ್ಕೇ ಇತ್ತು. ಅದಕ್ಕಾಗಿ ರಾಜಕುಮಾರ್ ಅವರಿಗೆ ಸಂಬಂಧಪಟ್ಟಂತೆ ತಮ್ಮಲ್ಲಿರುವ ಸಂಗ್ರಹ ಯೋಗ್ಯ ವಸ್ತುಗಳನ್ನು ನೀಡಲು ಅವರ ಸಂಸ್ಥೆ ಸಾರ್ವಜನಿಕರಿಗೆ ಕರೆ ನೀಡಿತ್ತು. ಅದಕ್ಕಾಗಿ, ಗಾಂಽನಗರದ ಹೋಟೆಲೊಂದರಲ್ಲಿ ಕಚೇರಿಯನ್ನೂ ತೆರೆದಿತ್ತು. ಇದೀಗ ಚಲನಚಿತ್ರ ನಡೆದು ಬಂದ ಇತಿಹಾಸದ ಕುರಿತಂತೆ ವಸ್ತು ಸಂಗ್ರಹಾಲಯ ಸ್ಥಾಪನೆಯ ಬಗ್ಗೆ ಹೇಳಲಾಗಿದೆ.
ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಯೋಜಿತ ಸಿನಿಮಾ ಭಂಡಾರವೂ ಕನ್ನಡ ಚಿತ್ರರಂಗ ನಡೆದು ಬಂದ ದಾರಿಯನ್ನು ಹೇಳುವ ಪ್ರಾಚ್ಯಾಗಾರ ಎನ್ನುವುದಿತ್ತು. ಅಕಾಡೆಮಿ ಇರುವ ನಂದಿನಿ ಬಡಾವಣೆಯ ಕಟ್ಟಡದ ತಳಮಹಡಿಯಲ್ಲಿ ಇದಕ್ಕೆ ಬೇಕಾದ ಕೆಲಸಗಳು ನಡೆದಿವೆ. ಹಳೆಯ ಚಿತ್ರಗಳ ಪ್ರಿಂಟ್‌ಗಳನ್ನು ಜೋಪಾನವಾಗಿರಿಸಲು ಹವಾನಿಯಂತ್ರಣ ವ್ಯವಸ್ಥೆ, ಗ್ರಂಥಾಲಯಕ್ಕೆ ಬೇಕಾದ ಕಪಾಟು, ವಗೈರೆ ಮುಂತಾಗಿ ಅಲ್ಲಿ ಸಿದ್ಧವಾಗುತ್ತಿದೆ. ಹಳೆಯ ನೆಗೆಟಿವ್‌ಗಳನ್ನು ಸಂಗ್ರಹಿಸಿ, ಅದನ್ನು ಹಿಂದಿನಂತೆ ಮಾಡಲು ತಗಲುವ ವೆಚ್ಚ ಮತ್ತಿತರ ಬಾಬತ್ತುಗಳಿಗಾಗಿ ಸರ್ಕಾರದಿಂದ ಅನುದಾನ ನಿರೀಕ್ಷಿಸಲಾಗಿತ್ತು ಎನ್ನುತ್ತಿವೆ ಮೂಲಗಳು. ಮುಂದೇನಾಗುತ್ತದೋ ನೋಡಬೇಕು.
ಸಹಾಯಧನದ ವಿಷಯ. 2019ರಿಂದ 2022ರವರೆಗೆ, ಅಂದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತಯಾರಾದ ಚಲನಚಿತ್ರಗಳಲ್ಲಿ ಸಹಾಯಧನಕ್ಕಾಗಿ ಗುಣಮಟ್ಟದ ಚಿತ್ರಗಳ ಆಯ್ಕೆ ಆಗಿಲ್ಲ. ಸಹಾಯಧನ ನೀಡುವ ಚಿತ್ರಗಳ ಸಂಖ್ಯೆಯಲ್ಲಿ ಏರಿಕೆಯೋ ಇಳಿಕೆಯೋ ಇಲ್ಲದೆ ಇರುವುದರಿಂದ, ಮುಂಗಡ ಪತ್ರದಲ್ಲಿ ಈ ಪ್ರಸ್ತಾಪದ ಅಗತ್ಯ ಇತ್ತೇ ಎನ್ನುವ ಪ್ರಶ್ನೆಯೂ ಇದೆ. ಸಹಾಯಧನ ಮಾತ್ರವಲ್ಲ, ಪ್ರಶಸ್ತಿಗಳ ಆಯ್ಕೆ, ಪ್ರದಾನವೂ ಈ ಅವಧಿಯದ್ದು ಆಗಬೇಕು. ನಾಲ್ಕು ವರ್ಷಗಳ, ಎರಡೆರಡು ಆಯ್ಕೆ ಸಮಿತಿಗಳ ರಚನೆ, ಚಿತ್ರಗಳ ವೀಕ್ಷಣೆಗೆ ಕನಿಷ್ಠ ಎಂದರೂ ಆರೆಂಟು ತಿಂಗಳ ಸಮಯ ಬೇಕಾಗಬಹುದು. ಇರಲಿ.
ಮುಂಗಡ ಪತ್ರದಲ್ಲಿ ವಿಶೇಷಗಳೇನೂ ಇಲ್ಲ. ಮಾಧ್ಯಮಗಳಿಗೆ ಅದರಲ್ಲೂ ನವಮಾಧ್ಯಮಗಳಿಗೆ ತಮಗೆ ಬೇಕಾದಂತೆ ರೋಚಕವಾಗಿ ಹೇಳಲು ಸುದೀಪ್ ಪ್ರಸಂಗ ಇದೆ. ನಟ ಸುದೀಪ್ ಅವರು ಈಗಾಗಲೇ, ವೃಥಾ ತಮ್ಮ ಮೇಲೆ ಹೊರಿಸಲಾದ ಆರೋಪ, ಅದರಿಂದಾದ ನೋವು, ತಮ್ಮ ವರ್ಚಸ್ಸಿಗೆ ಆದ ಧಕ್ಕೆ ಇವುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ವಾಣಿಜ್ಯ ಮಂಡಳಿಯಾಗಲಿ, ನಿರ್ಮಾಪಕರ ಸಂಘವಾಗಲಿ, ಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಪೂರ್ವಾಪರ ಯೋಚನೆ, ಸಾಕ್ಷ ಇತ್ಯಾದಿಗಳನ್ನು ಪರಿಶೀಲಿಸಬೇಕು ಎಂದೂ ಹೇಳಿದ್ದಾರೆ. ಚಿತ್ರೋದ್ಯಮದ ಸಂಸ್ಥೆಗಳಾದ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಈ ಪತ್ರವನ್ನು ಅವರು ಬರೆದಿದ್ದಾರೆ.
ನಿರ್ಮಾಪಕ ಎನ್.ಕುಮಾರ್ ಅವರು, ಸುದೀಪ್ ಮುಂದಿನ ಚಿತ್ರದಲ್ಲಿ ನಟಿಸಲು ಒಪ್ಪಿ ಸಂಭಾವನೆಯ ಪೂರ್ತಿ ಮೊತ್ತವನ್ನು ಪಡೆದಿದ್ದಾರೆ, ಈಗ ಕಾಲ್‌ಶೀಟ್ ಕೊಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಅದಕ್ಕೆ ವಕೀಲರ ಮೂಲಕ ಮಾನನಷ್ಟ ದಾವೆ ಹೂಡುವ ಪತ್ರದ ಮೂಲಕ ಸುದೀಪ್ ಉತ್ತರ ನೀಡಿದ್ದರು.
ಕುಮಾರ್ ಅವರು ಪತ್ರಿಕಾಗೋಷ್ಠಿ ಕರೆದ ಬೆನ್ನಲ್ಲೇ, ನಿರ್ಮಾಪಕ ರೆಹಮಾನ್ ಅವರು ಕೂಡ ಪತ್ರಿಕಾಗೋಷ್ಠಿ ಕರೆದರು. ಅವರ ಆರೋಪ, ತಾವು ಸುದೀಪ್ ಸಲಹೆಯಂತೆ ಬೇರೆ ಭಾಷೆಗಳಲ್ಲಿ ತಯಾರಾಗಿ ಯಶಸ್ವಿಯಾದ ಚಿತ್ರಗಳ ಕನ್ನಡ ನಿರ್ಮಾಣದ ಹಕ್ಕುಗಳನ್ನು ಕೊಂಡುಕೊಂಡದ್ದರಿಂದ ಆದ ನಷ್ಟದ ಕುರಿತಾಗಿತ್ತು. ಸುದೀಪ್ ಅವರಿಂದಾಗಿ ತಮಗೆ ನಷ್ಟ ಆಗಿದೆ, ಅವರಿಂದ ತಮಗೆ ಹಣ ಬರಬೇಕಾಗಿದೆ ಎಂದು ರೆಹಮಾನ್ ಅವರಿಗೆ ಈ ಮೊದಲೇ ತಿಳಿದಿರಲಿಲ್ಲವೇ? ಕುಮಾರ್ ಪತ್ರಿಕಾಗೋಷ್ಠಿ ಕರೆದಾಗ ನೆನಪಾಯಿತೇ? ಮುಂತಾಗಿ ಈಗ ಪ್ರಶ್ನೆಗಳೆದ್ದಿವೆ. ಹ್ಞಾಂ, ಚಿತ್ರನಿರ್ಮಾಣದಿಂದ ಸದ್ಯ ದೂರವಿರುವ ರೆಹಮಾನ್ ಅವರು ‘ಹುಚ್ಚ’, ‘ಯಜಮಾನ’ ಖ್ಯಾತಿಯ ನಿರ್ಮಾಪಕರು.
ಈ ಎರಡು ಪತ್ರಿಕಾಗೋಷ್ಠಿಗಳು, ಅದಕ್ಕೆ ಉತ್ತರವೋ ಎನ್ನುವಂತೆ ಜಾಕ್ ಮಂಜು ಅವರು ಸುದೀಪ್ ಪರವಾಗಿ ಕರೆದ ಪತ್ರಿಕಾಗೋಷ್ಠಿ ಎಲ್ಲವೂ ಚಿತ್ರರಂಗದ ಒಳಗಿನ ಎಲ್ಲವನ್ನೂ ಬೀದಿಗೆ ತಂದು ನಿಲ್ಲಿಸಿದೆ. ಕನ್ನಡ ಮಾತ್ರವಲ್ಲ, ಬಹುತೇಕ ಎಲ್ಲ ಭಾರತೀಯ ಭಾಷೆಗಳ ಚಿತ್ರರಂಗಗಳಲ್ಲೂ ಸಿನಿಮಾ ವ್ಯವಹಾರ ಪಾರದರ್ಶಕವಾಗಿ ನಡೆಯುವುದಿಲ್ಲ ಎನ್ನುವುದು ಬಲ್ಲಿದರ ಮಾತು. ಅಲ್ಲಿ ಕರಾರುಗಳು ಕಡಿಮೆ. ಏನಿದ್ದರೂ ಮಾತಿನ ಮೇಲೆಯೇ ನಂಬಿಕೆ.
ಡಿಜಿಟಲ್ ಕ್ರಾಂತಿಯ ನಂತರ ಮನರಂಜನೋದ್ಯಮ ಕಾರ್ಪೊರೇಟ್ ಸಂಸ್ಕ ತಿಗೆ ಹೊರಳುತ್ತಿರುವ ಈ ದಿನಗಳಲ್ಲಿ, ಕನ್ನಡ ಚಿತ್ರೋದ್ಯಮದಲ್ಲಿ ಬಹಳಷ್ಟು ಮಂದಿ ಹಳೆಯ ವ್ಯವಹಾರ ರೀತಿಗೆ ಜೋತು ಬಿದ್ದಾರೆ ಎನ್ನಲಾಗುತ್ತಿದೆ. ಸಂಭಾವನೆ, ಮಾರಾಟ ಎಲ್ಲದರಲ್ಲೂ ರಾಮ–ಕೃಷ್ಣರ ಲೆಕ್ಕ ಇಲ್ಲಿ ಸಾಮಾನ್ಯ ಎನ್ನುವುದು ಹಿರಿಯರ ಮಾತು, ಅನುಭವ. ಹೊಸ ರೀತಿಗೆ ಎಲ್ಲ ಉದ್ಯಮಿಗಳೂ ಹೊಂದಿಕೊಂಡಿಲ್ಲ.
ಚಿತ್ರನಿರ್ಮಾಣದ ಆರಂಭದ ದಿನಗಳಿಗೂ ಇಂದಿಗೂ ಅಜಗಜಾಂತರವಿದೆ. ಆ ದಿನಗಳಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಲೇ, ಅದನ್ನು ಹಂಚಿಕೆ ಮಾಡುವ ವಿತರಕರು ಯಾರು ಎನ್ನುವುದು ನಿರ್ಧಾರ ಆಗುತ್ತಿತ್ತು. ಅವರು ನಿರ್ಮಾಣ ಹಂತದಲ್ಲೇ ನಿರ್ಮಾಪಕರಿಗೆ ಹಣ ನೀಡುತ್ತಿದ್ದರು. ಪ್ರದರ್ಶಕರೂ ಆ ಚಿತ್ರ ತಂತಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲು ಮುಂಗಡ ಕೊಡುತ್ತಿದ್ದರು. ‘ಬರುತ್ತದೆ’ ಎಂದು ಆ ಚಿತ್ರದ ಸ್ಲೆ ಡ್ ಚಿತ್ರದ ಆರಂಭ ಹಾಗೂ ಮಧ್ಯಂತರದಲ್ಲಿ ಕಾಣಬಹುದಿತ್ತು.
ವಿತರಕರ ಜಾಗಕ್ಕೆ ನಂತರ ಸಾಧಾರಣದಿಂದ ಮೀಟರ್ ಬಡ್ಡಿಯವರೆಗೆ ವಸೂಲು ಮಾಡುವ ಲೇವಾದೇವಿದಾರರು ಬಂದರು. ನಿಗದಿತ ದಿನದಂದು ತಾವು ಪಡೆದ ಹಣ ಹಿಂದಿರುಗಿಸಲಾರದೆ, ನಿರ್ಮಾಪಕರೊಬ್ಬರು ಸಾವನ್ನಪ್ಪಿದ (ಕೊಲೆಯಾದ) ಘಟನೆಯೂ ನಡೆದಿತ್ತು!
ಚಿತ್ರಗಳ ನಿರ್ಮಾಣಕ್ಕೆ ಬ್ಯಾಂಕುಗಳು ಸಾಲ ಕೊಡಲು ಆರಂಭಿಸಿದ ನಂತರ, ನಿರ್ಮಾಪಕರು ದುಬಾರಿ ಬಡ್ಡಿಯಿಂದ ಇನ್ನು ತಪ್ಪಿಸಿಕೊಳ್ಳಬಹುದು ಎಂದುಕೊಂಡರು. ಆದರೆ ಹಾಗಾಗಲಿಲ್ಲ. ಬೇಲಿಯೇ ಹೊಲ ಮೇಯ್ದಂತಹ ಪ್ರಸಂಗವೊಂದು ಕನ್ನಡ ಚಿತ್ರಗಳಿಗೆ ಬ್ಯಾಂಕ್ ನೆರವು ಸಿಗದಂತೆ ಮಾಡಿತು ಎನ್ನುತ್ತಾರೆ ಈ ಕುರಿತು ತೊಂದರೆಗೊಳಗಾದ ನಿರ್ಮಾಪಕರೊಬ್ಬರು.
ನಿರ್ಮಾಪಕ–ನಟರ ನಡುವೆ ಇದ್ದ ಭಿನ್ನಾಭಿಪ್ರಾಯ ಬೀದಿಗೆ ಬಂದದ್ದನ್ನು ಯಾರೂ ಒಪ್ಪುವುದಿಲ್ಲ.





