ಒಂದಂತೂ ನಿಜ. ಇಂಥವರಲ್ಲಿ ಎಲ್ಲರೂ ಚರಂಡಿ ಹೆಣವಾಗದಿರಬಹುದು. ಆದರೆ ಇವರುಗಳು ಅವನತಿ ಕಾಣುವಲ್ಲಿ ವಿಚಿತ್ರವಾದ ನ್ಯಾಯಸೂತ್ರವೊಂದು ಅವರ ಮೇಲೆ ಅಜ್ಞಾತವಾಗಿ ಸೇಡು ತೀರಿಸಿಕೊಂಡಿರುತ್ತದೆ! ಮನುಷ್ಯ ಮಾಡಿದ ಕಾನೂನಿನಿಂದ ಬಚಾವಾಗಿರಬಹುದು. ಆದರೆ ಪ್ರಕೃತಿಯೇ ಹೆಣೆದಿರುವ ನ್ಯಾಯಸೂತ್ರದಿಂದ ಶಿಕ್ಷಿತರಾದವರ ಸಂಖ್ಯೆಯೇ ದೊಡ್ಡದು.
ನಿಮಗೆ ಆಶ್ಚರ್ಯವೆನಿಸಬಹುದು. ನಕಲಿ ದಾಖಲೆ ಪತ್ರ ಸೃಷ್ಟಿಸಿದವರು, ಫೋರ್ಜರಿ ಮಾಡಿದವರು, ಅಮಾಯಕರ ಆಸ್ತಿ-ಪಾಸ್ತಿ ಲಪಟಾಯಿಸಿದವರೂ ಮುಂದೊಂದು ದಿನ ಮೋಸಕ್ಕೆ ತುತ್ತಾಗುತ್ತಾರೆ. ಈ ಪಾಖಂಡಿಗಳಿಗೂ ಮೋಸ ಮಾಡುವವರು ಇದ್ದಾರೆಯೇ? ಅಂಥವರಿಗೂ ಟೋಪಿ ಹಾಕಿದ ಜಾಣನಾರು? ಯಾವ ತಂತ್ರ ಬಳಸಿ ಮೋಸ ಮಾಡಿದರು? ಅದಕ್ಕೆ ಆಳವಾಗೇನೂ ಹುಡುಕಬೇಕಿಲ್ಲ. ಇವರುಗಳು ಮೋಸ ವಂಚನೆ ಮಾಡಲು ಯಾವ ಬಗೆಯ ದಗಾಕೋರತನದ ತಂತ್ರ ಬಳಸಿದ್ದರೋ, ಅದೇ ಕುತಂತ್ರ ಬಳಸಿ ಇವರಿಗೂ ನಾಮ ಹಾಕಿರುತ್ತಾರೆ!
ಅದು ಹೇಗೆ ಸಾಧ್ಯ? ತಮ್ಮದೇ ತಂತ್ರದಲ್ಲಿ ಪರಿಣತರಾಗಿದ್ದವರು ತಮ್ಮದೇ ಕುತಂತ್ರಕ್ಕೆ ಹೇಗೆ ತಾನೇ ಬಲಿಯಾಗುತ್ತಾರೆ ಎಂದು ನೀವು ಆಶ್ಚರ್ಯಪಡಬಹುದು!
ಮುಖ್ಯಮಂತ್ರಿಯ ಕೃಪಾಕಟಾಕ್ಷವಿತ್ತೆಂದು ಉದ್ಯಮಿಯೊಬ್ಬ ಬೆಂಗಳೂರಿನ ಆಯಕಟ್ಟಿನ ಜಾಗಗಳನ್ನೆಲ್ಲ ಖರೀದಿಸತೊಡಗಿದ. ಯಾವ ಆಸ್ತಿಗೂ ಸರಿಯಾದ ದಾಖಲೆಗಳಿಲ್ಲ. ಚಿಲ್ಲರೆ ಮೊತ್ತ ನೀಡಿ ಬರೆಸಿಕೊಂಡದ್ದೇ ಕೊಂಡದ್ದು. ಸ್ವತಃ ಮುಖ್ಯಮಂತ್ರಿಯೇ ಜೊತೆಗಿರುವಾಗ ಯಾವನ ಹೆದರಿಕೆ? ಪತ್ರಗಳೆಲ್ಲ ಕಾನೂನುಬದ್ಧವಾಗಿ ರಿಜಿಸ್ಟರ್ ಆಗಿವೆ. ಕೊಟ್ಟ ದುಡ್ಡು ಬಿಡಿಗಾಸೇ ಆಗಿರಬಹುದು. ದುಡ್ಡನ್ನಂತೂ ಕೊಟ್ಟಿದ್ದಾನೆ. ರಿಜಿಸ್ಟರ್ಡ್ ಕ್ರಯಪತ್ರ ಮಾಡಿಸಿಕೊಂಡಿದ್ದಾನೆ. ರೆಕಾರ್ಡುಗಳೆಲ್ಲಾ ಸರಿಯಾಗಿವೆ.
ಕಾಲ ಉರುಳಿತು. ಮುಖ್ಯಮಂತ್ರಿ ಅವರ ಜೊತೆಗಿದ್ದ ಪಡೆ ಪಟಾಲಂ ಎಲ್ಲವೂ ನಿಕಾಲಿಯಾದವು. ಈಗ ಒಂದೊಂದು ಆಸ್ತಿಯೂ ಕೈಗೆ ಸಿಕ್ಕದಷ್ಟು ಗೋಜಲು ಕೇಸುಗಳಿಗೆ ಸಿಕ್ಕಿಕೊಂಡಿದೆ. ಮಾರಿದವನ ಮಕ್ಕಳು, ಮೊಮ್ಮಕ್ಕಳು ಆಸ್ತಿಪಾಲಿಗಾಗಿ ದಾವೆ ಹೂಡಿದ್ದಾರೆ. ತಕರಾರು ತೆಗೆದಿದ್ದಾರೆ. ಈಗ ಒಂದೇ ಒಂದು ವ್ಯಾಜ್ಯವನ್ನು ಪರಿಹರಿಸಿಕೊಳ್ಳಲಾಗುತ್ತಿಲ್ಲ. ಬರೆಸಿಕೊಂಡದ್ದೇ ಬಾಚಿಕೊಳ್ಳುವ ಅರ್ಜೆಂಟಿನಲ್ಲಿ. ಆಗ ಕುಟುಂಬಸ್ಥರೆಲ್ಲರ ಸಮ್ಮತಿ ಸಹಿ ಹಾಕಿಸಿಕೊಂಡಿರಲಿಲ್ಲ. ಸರ್ವಕಾಲಕ್ಕೂ ತನಗೆ ಮೇಲುಗೈಯೇ ಇರುತ್ತದೆಂಬ ಭ್ರಮೆ. ಈಗ ಎಲ್ಲರೂ ಕಾಳಿಂಗಸರ್ಪಗಳಾಗಿ ಹೆಡೆ ಎತ್ತಿ ಫೂತ್ಕರಿಸುತ್ತಿದ್ದಾರೆ. 1980ರಲ್ಲಿದ್ದ 3000 ಎಕರೆಯಲ್ಲೀಗ ಅರ್ಧ ಭಾಗ ಕೈಬಿಟ್ಟಿದೆ. ಉಳಿದವನ್ನು ಅವರವರೇ ಕಲ್ಲು ನೆಟ್ಟು ಆಕ್ರಮಿಸಿಕೊಂಡಿದ್ದಾರೆ. ಈತ ಹಳೇ ಜರ್ಬಿನಲ್ಲಿ ಪೊಲೀಸರನ್ನಾಗಲೀ, ರೌಡಿಗಳನ್ನಾಗಲೀ ಕರೆಯಲಾರ. ಇವನ ಕೋಟೆ ಕುಸಿದಿರುವುದನ್ನು ಕಂಡ ಇತರ ರೌಡಿಗಳೂ ಇವನ ಆಸ್ತಿಯ ಮೇಲೆ ತಮ್ಮದೇ ಝಂಡಾ ಹಾರಿಸಿ ಕುಳಿತಿದ್ದಾರೆ.
ಕೆಲವು ಕೊಲೆಗಳಂತೂ ರಣಭೀಕರವಾಗಿರುತ್ತವೆ. ನಿಂತ ಮನುಷ್ಯನನ್ನು ನಿಂತಂತೆಯೇ ಬರ್ಬರವಾಗಿ ಸೀಳಿ ಹಾಕಿರುತ್ತಾರೆ. ಇನ್ನು ಕೆಲವರು 20-30 ಬಾರಿ ಚುಚ್ಚಿ ತಿವಿದು ಸಾಯಿಸಿರುತ್ತಾರೆ. ಮೃತನ ಮರ್ಮಾಂಗವನ್ನೇ ಕತ್ತರಿಸಿ ಎಸೆದು ಅದನ್ನು ಹತ್ತಾರು ಚೂರಾಗಿಸಿರುತ್ತಾರೆ. ಏಕಿಂಥ ಬರ್ಬರ ಭೀಕರ ಹತ್ಯೆ? ಒಂದಿಷ್ಟೂ ಮನುಷ್ಯತ್ವವೇ ಇಲ್ಲವೇ? ಎಂದರೆ ಅದು ಮೊದಲು ಇರಬೇಕಾಗಿದ್ದದ್ದು ಸತ್ತವನಿಗೇ ಎಂಬ ಸತ್ಯ ಗೋಚರಿಸುತ್ತದೆ.
ಅದ್ಯಾರೋ ಟಿವಿಯಲ್ಲಿ ಕುಳಿತು ವಾಸ್ತು ಶಾಸ್ತ್ರ ಹೇಳುತ್ತ, ಸಂತನಂತೆ ನವಿರಾಗಿ ಮಾತಾಡುತ್ತಿದ್ದ. ಬರ್ಬರವಾಗಿ ಹತ್ಯೆಯಾದ. ಪಾತಕಿಗಳು 22 ಬಾರಿ ಇರಿದು ಕೊಚ್ಚಿದ್ದರು. ಆ ಸಾಧು ಮನುಷ್ಯನ ಮೇಲೆ ಅಂಥ ಹಲ್ಲೆಯೇ? ಕೊಲೆ ಪಾತಕರಾದರೂ ಯಾರು? ಅವನೇ ಸಲಹಿದ್ದ ನಂಬುಗೆಯ ಭಂಟರು! ಬರಿಗೈಯಲ್ಲೇ ಬಲವಾಗಿ ಬಾರಿಸಿದ್ದರೆ ನೆಗೆದು ಬೀಳುವಂತಿದ್ದ ಆ ವಾಸ್ತು ಸಂತ. ಅಣಬೆಯಂತಿದ್ದ ಅವನಿಗೂ 22 ಬಾರಿ ತಿವಿದು ಕೊಲೆ ಮಾಡಬೇಕಿತ್ತೇ? ಕೊಲೆಗಾರರು ಬಾಯ್ಬಿಟ್ಟ ಕತೆಯಲ್ಲಿ ಅವನನ್ನು 32 ಬಾರಿ ಇರಿದು ಕೊಂದಿದ್ದರೂ ಪಾಪವಿರಲಿಲ್ಲವಂತೆ. ಆ ಬಗೆಯ ದಾರುಣ ಮೋಸ, ವಂಚನೆ ದ್ರೋಹವೆಸಗಿ ಅಯ್ಯೋ ಅನ್ನಿಸಿದ್ದನಂತೆ ಮೃತ ಮನುಷ್ಯ.
ದಶಕಗಳ ಹಿಂದೆ ಕೆ.ಆರ್.ನಗರ ತಾಲ್ಲೂಕಿನಲ್ಲಿ ಭೀಕರ ಕೊಲೆ ನಡೆಯಿತು. ಊರಿನ ಮುಖ್ಯಸ್ಥನನ್ನು ನಾಲ್ಕಾರು ಪಾತಕಿಗಳು ಮಚ್ಚುಗಳಿಂದ ಕೊಚ್ಚಿ ಹಾಕಿದ್ದರು. ಝಿಲ್ಲೆಂದು ಚಿಮ್ಮಿದ ರಕ್ತವನ್ನು ಮೈಗೆಲ್ಲಾ ಬಳಿದುಕೊಂಡು ಕುಣಿದಾಡಿದ್ದರು. ಯಾವ ದೃಷ್ಟಿಯಿಂದ ನೋಡಿದರೂ ಹೀನಾತಿಹೀನ ಪಾತಕ ಅದು.
ತಲೆಮರೆಸಿಕೊಂಡಿದ್ದ ಅಪರಾಧಿಗಳು ಸೆರೆ ಸಿಕ್ಕರು. ಯಾರೊಬ್ಬರಿಗೂ ಕ್ರಿಮಿನಲ್ ಹಿನ್ನೆಲೆ ಇಲ್ಲದಿದ್ದ ರೈತಾಪಿ ಯುವಕರು. ಎಂದೂ ಯಾರೊಂದಿಗೂ ಜಿದ್ದು ಸಾಧಿಸಿದವರಲ್ಲ, ಜಗಳ ಆಡಿದವರಲ್ಲ. ಗೂಂಡಾಗರ್ದಿ ಮಾಡಿದವರಲ್ಲ. ಅಂಥವರೇಕೆ ಸೀಳಿ ಸೀಳಿ ಕೊಂದರು? ಯಾರ ಪಿತೂರಿ ಪ್ರಚೋದನೆ ಅಡಗಿತ್ತು?
ಆ ವೇಳೆಗಾಗಲೇ ಕೊಲೆಗೆ ರಾಜಕೀಯ ಸ್ವರೂಪ ಬಂದಿತ್ತು. ಯಾರದೋ ಷಡ್ಯಂತ್ರ ಅಂದರು. ಸುಪಾರಿ ಕಿಲ್ಲಿಂಗ್ ಅಂದರೆ ಏಕ್ ಮಾರ್ ದೋ ತುಕಡಾ! ಅಬ್ಬಬ್ಬಾ ಎಂದರೂ ಎರಡನೇ ತಿವಿತಕ್ಕೆ ಫಿನಿಶ್ ಮಾಡಿರುತ್ತಾರೆ. ಇದಾದರೋ ನೆತ್ತಿ, ಭುಜ, ಎದೆಗಳಿಗೆ ನೇರ ಮಚ್ಚು ಬೀಸಿರುವ ಕೊಲೆ. ಚಿಮ್ಮಿದ ರಕ್ತವನ್ನು ಮೈಗೆಲ್ಲಾ ಹಚ್ಚಿಕೊಂಡು ಕುಣಿದಾಡಿರುವ ಬರ್ಬರ ಕೊಲೆ. ವೈಯಕ್ತಿಕ ಪರಮ ದ್ವೇಷ, ಸೇಡುಗಳಿರಲೇ ಬೇಕು.
ಪಾತಕಿಗಳು ಬಿಚ್ಚಿಟ್ಟ ಸತ್ಯ ಕೇಳಿ ನಾವೇ ಬೆಚ್ಚಿ ಬಿದ್ದೆವು.
ಊರ ಹಬ್ಬ, ಉತ್ಸವ, ನಾಟಕದ ವಿಚಾರದಲ್ಲಿ ಚರ್ಚೆಯಾದರೆ ಸಾಕು. ಎಲ್ಲದರಲ್ಲೂ ಮೃತನದೇ ದೊಡ್ಡ ಗಂಟಲಿನ ಯಜಮಾನಿಕೆ. ತನ್ನ ಮಾತೇ ನಡೆಯಬೇಕೆಂಬ ಹಠ. ಯಾರಾದರೂ ಯುವಕರು ಅಡ್ಡ ಮಾತಾಡಿ ಹಾಗಲ್ಲ ಹೀಗೆ ಎಂದರೆ ಸೈರಣೆ ಇಲ್ಲ.
‘ನೀನ್ಯಾರ್ಲಾ? ಭಾರಿ ಮಾತಾಡ್ತೀ. ಯಾರ ಮಗನ್ಲಾ?’ ತಿರಸ್ಕಾರದ ಧಾಷ್ಟಿಕ ಪ್ರಶ್ನೆ. ಇಂಥವರ ಮಗ ಅಂದರೆ, ‘ಓ ನೀನಾ? ಆ ಕಮಲೀ ಮಗ. ನಿಮ್ಮೌವ್ವನ್ನ ಕೇಳಿಕೊಂಡು ಬಾ. ನಾನ್ಯಾರು ಅಂತ. ಮಾಡ್ರನ್ ವೋಟ್ಲಿಗೋಗಿ ಎರಡು ದಿನಾ ಇದ್ಯಲ್ಲ ಅಂತ ಜ್ಞಾಪ್ಕ ಕೊಡು’ ಎಂದೆಲ್ಲಾ ಉಛಾಯಿಸಿ ಮಾತಾಡುತ್ತಿದ್ದ. ಮುಂದೆ ಮಾತಾಡಲಾಗದೆ ಹುಡುಗರು ಕರೆಂಟ್ ಹೊಡೆದಂತೆ ತೆಪ್ಪಗಾಗುತ್ತಿದ್ದರು. ಅವನ ಮಾತನ್ನು ಪುಷ್ಟೀಕರಿಸುವಂತೆ ಸುತ್ತಲಿದ್ದವರಿಂದ ಹಲ್ಕಾ ನಗೆ ತೂರಿ ಬರುತ್ತಿತ್ತು.
ಆ ಹುಡುಗರಾದರೂ ಎಷ್ಟೆಂದು ತಡೆದಾರು? ಅವನ ಮಾತೇ ಹಾಗೆ. ಅಮ್ಮ ಅಕ್ಕಂದಿರ ಬಳಿಗೇ ನೇರ ಬರುತ್ತಿದ್ದ. ಅಮ್ಮ ಅಕ್ಕ ಅಂದರೆ ಯಾರು? ತಮ್ಮ ಮನೆ ಮನೆತನದ ಗೌರವ ಪ್ರತಿಷ್ಠೆಗಳ ಪ್ರತೀಕ. ರಕ್ತ ಕುದ್ದು ಹೋಗುತ್ತಿತ್ತು. ಮಾತೃ ನಿಂದನೆಯನ್ನು ಮಾತ್ರ ಸಹಿಸಲಾರೆವು ಎಂದು ಮಚ್ಚುಗಳನ್ನು ಒಂದೇ ಸಮನೆ ಬೀಸಿದರು.
ಪಾತಕಿಗಳು ಎಸಗಿದ್ದು ಘನಘೋರ ಕೃತ್ಯ. ಅನುಮಾನವೇ ಇಲ್ಲ. ಕಾನೂನಿನಂತೆ ಶಿಕ್ಷೆಯಾಗಲೇ ಬೇಕು. ಅವರನ್ನು ಆ ಮಟ್ಟಿಗೆ ರೊಚ್ಚಿಗೆಬ್ಬಿಸಿದವನಿಗೆ? ಅದು ಪ್ರಕೃತಿಯ ನ್ಯಾಯ ನಿರ್ಣಯ!
ಏಕೆಂದರೆ ಹತ್ಯೆಗೀಡಾದವರು ಬದುಕುತ್ತಿದ್ದ ರೀತಿಯೇ ಹಾಗಿತ್ತು. ಚರಂಡಿ ಸಾವು ಬರೆದಿತ್ತು. ಆಸ್ಪತ್ರೆಯಲ್ಲೋ, ಮನೆಯಲ್ಲೋ ಸ್ವಾಭಾವಿಕವಾಗಿ ಅವರು ಸಾಯುವಂತಿರಲಿಲ್ಲ. ಗಟಾರದ ಸಾವನ್ನು ಅವರಾಗಿ ಬರೆದುಕೊಂಡಿದ್ದರು. ಅವರೇನು ಅಪಾಯದಲ್ಲಿರಲಿಲ್ಲ. ಆದರೆ ಬದುಕುತ್ತಿದ್ದ ರೀತಿಯೇ ತದುಕಿಸಿಕೊಳ್ಳುವಂತೆ ಅಪಾಯಕಾರಿಯಾಗಿತ್ತು.
ಮಾಡಿದ್ದುಣ್ಣೋ ಮಹರಾಯ !