Mysore
24
few clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜಿಎಸ್‌ಟಿ ನಡೆದು ಬಂದ ದಾರಿ

  • ಪ್ರೊ.ಆರ್.ಎಂ.ಚಿಂತಾಮಣಿ

ಇದೇ ಜೂನ್ 30ಕ್ಕೆ ಭಾರತದಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (goods and services tax gst ) ಜಾರಿಯಾಗಿ ಆರು ವರ್ಷಗಳು ಪೂರ್ಣಗೊಂಡಿವೆ. ಇದು ಅಷ್ಟು ದೊಡ್ಡ ಅವಧಿಯಲ್ಲದಿದ್ದರೂ ಅರ್ಧ ದಶಕಕ್ಕಿಂತಲೂ ಹೆಚ್ಚು ಅವಧಿಯಲ್ಲಿಯ ಸಾಧನೆಗಳನ್ನು ಗಮನದಲ್ಲಿಟ್ಟುಕೊಂಡು ಈವರೆಗಿನ ಅನುಭವದ ಆಧಾರದ ಮೇಲೆ ಮುಂದಿನ ಸುಧಾರಣೆಗಳ ಬಗ್ಗೆ ಚಿಂತಿಸಬೇಕಾಗುತ್ತದೆ. ಜಿಎಸ್‌ಟಿ ಯಶಸ್ಸು ನಮ್ಮ ಒಕ್ಕೂಟ ವ್ಯವಸ್ಥೆಯ ಯಶಸ್ಸೇ ಆಗಿದೆ. ಈ ಯಶಸ್ಸಿಗೆ ಎರಡು ದಶಕಗಳಿಗೂ ಹೆಚ್ಚು ಸಮಯದ ಸೈದ್ಧಾಂತಿಕ ಮತ್ತು ಆಡಳಿತಾತ್ಮಕ ಚರ್ಚೆಗಳ ಹಿನ್ನೆಲೆ ಇದೆ. ಕೇಂದ್ರ ಮತ್ತು ರಾಜ್ಯಗಳ ವಿಚಾರ ವಿನಿಮಯದ ಅನುಭವವಿದೆ. ಎಲ್ಲದಕ್ಕೂ ಹೆಚ್ಚಾಗಿ ಒಮ್ಮತದ ನಿರ್ಧಾರಗಳ ಕಿರೀಟವಿದೆ.

ಜೂನ್ ತಿಂಗಳ ಒಟ್ಟು ಜಿಎಸ್‌ಟಿ ಸಂಗ್ರಹ 1.61 ಲಕ್ಷ ಕೋಟಿ ರೂ. ದಾಟಿದೆ ಎಂದು ಕೇಂದ್ರ ಸರ್ಕಾರದ ವರದಿ ಹೇಳುತ್ತದೆ. ಕಳೆದ ಆರು ತಿಂಗಳುಗಳಲ್ಲಿ 1.5 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿದಿದೆ. ಆದರೆ ಮಧ್ಯಮಾವಧಿಯಲ್ಲಿ 20 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ವಾರ್ಷಿಕ ಸಂಗ್ರಹವಾಗುವ ನಿರೀಕ್ಷೆ ಇದೆ. ಇದರಲ್ಲಿ ರಾಜ್ಯಗಳ ಪಾಲು, ಕೇಂದ್ರದ ಪಾಲು ಮತ್ತು ಅಂತರ ರಾಜ್ಯ ಜಿಎಸ್‌ಟಿ ಅಲ್ಲದೆ ವಿದೇಶಿ ವ್ಯಾಪಾರದಲ್ಲಿ ಸಂಗ್ರಹವಾದ ತೆರಿಗೆಗಳೂ ಸೇರಿವೆ. ಇದೊಂದು ಸಾಧನೆ ಎಂದೇ ಹೇಳಬೇಕು.

ಈವರೆಗಿನ ಸುಧಾರಣೆಗಳು

ಇದು ಒಮ್ಮೆಲೇ ಆದ ಬೆಳವಣಿಗೆಯಲ್ಲ. ಮೊದಲು ಸಮಸ್ಯಾತ್ಮಕವಾಗಿದ್ದ ಮತ್ತು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ದರಗಳು ಮತ್ತು ನಿಯಮಗಳಿದ್ದ ಮಾರಾಟ ತೆರಿಗೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬೇಕಾಗಿತ್ತು. ಅದಕ್ಕಾಗಿ ರಾಜ್ಯ ಹಣಕಾಸು ಮಂತ್ರಿಗಳ ಅಧಿಕಾರಯುಕ್ತ ಸಮಿತಿ ರಚಿಸಿ ಅವರಲ್ಲೇ ಒಬ್ಬರು ಅಧ್ಯಕ್ಷರಾಗಿದ್ದರು, ಕೇಂದ್ರ ಅರ್ಥ ಸಚಿವರು ಸದಸ್ಯರು. ಹಲವು ವರ್ಷಗಳ ಚರ್ಚೆಗಳ ನಂತರ ಎಲ್ಲ ರಾಜ್ಯಗಳಲ್ಲಿಯೂ ಏಕರೂಪ ಮೌಲ್ಯವಧಿತ ತೆರಿಗೆಯನ್ನು (vaiue added tax) ಮಾರಾಟ ತೆರಿಗೆ ಬದಲಾಗಿ ಜಿಎಸ್‌ಟಿ ಜಾರಿಗೆ ತರುವ ನಿರ್ಧಾರವಾಯಿತು. ಅದರಂತೆ ಸಂವಿಧಾನ ತಿದ್ದುಪಡಿಯೂ ಆಗಿ 2003ರಿಂದ ಹೊಸ ತೆರಿಗೆ ಜಾರಿಯಾಗಿ 2005ರ ಹೊತ್ತಿಗೆ ಎಲ್ಲ ರಾಜ್ಯಗಳಲ್ಲಿಯೂ ಅಸ್ತಿತ್ವಕ್ಕೆ ಬಂದಿತು. ಆ ಹೊತ್ತಿಗೆ ಕೇಂದ್ರ ಮತ್ತು ರಾಜ್ಯಗಳಲ್ಲಿದ್ದ 18ಕ್ಕೂ ಹೆಚ್ಚು ಪರೋಕ್ಷ ತೆರಿಗೆಗಳನ್ನು ಒಂದುಗೂಡಿಸಿ ದೇಶಕ್ಕೆಲ್ಲ ಒಂದು ಪರೋಕ್ಷ ತೆರಿಗೆ ಜಾರಿ ಮಾಡುವ ಪರಿಕಲ್ಪನೆ ಬಂದಿತ್ತು. ಅದೇ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ). ಅದೇ ಅಧಿಕಾರಯುಕ್ತ ಸಮಿತಿ ಜಿಎಸ್‌ಟಿ ಸಮಿತಿಯಾಯಿತು. ಅಲ್ಲಿ ಚರ್ಚೆಗಳಾಗಿ ಒಮ್ಮತದ ಕರಡು ಜಿಎಸ್‌ಟಿ ಕಾಯ್ದೆ ಸಿದ್ಧವಾಯಿತು. ಈ ಸಮಿತಿಯ ಅಧ್ಯಕ್ಷರು ಕೇಂದ್ರ ವಿತ್ತ ಸಚಿವರು. ನಂತರ ಸಂವಿಧಾನ ತಿದ್ದುಪಡಿಗಳಾಗಿ ಜಿಎಸ್‌ಟಿ ಕಾಯ್ದೆ ಅಸ್ತಿತ್ವಕ್ಕೆ ಬಂತು. ಅದೇ ಸಮಿತಿ ಸಂವಿಧಾನಬದ್ಧ ಉನ್ನತಾಧಿಕಾರವುಳ್ಳ ಜಿಎಸ್‌ಟಿ ಕೌನ್ಸಿಲ್ ಆಗಿ ಪರಿವರ್ತಿತವಾಗಿದೆ. ಜಿಎಸ್‌ಟಿ ಜಾರಿಯಲ್ಲಿದೆ, ಸುಧಾರಣೆಗಳೂ ಮುಂದುವರಿಯುತ್ತಿವೆ.

ಕೌನ್ಸಿಲ್ ತಿಂಗಳಿಗೊಂದು ಸಭೆ (ಅವಶ್ಯವಿದ್ದಲ್ಲಿ ಹೆಚ್ಚು) ನಡೆಸಿ ಹಿಂದೆ ನಡೆದುದ್ದನ್ನು ಪರಾಮರ್ಶಿಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಜನಾಭಿಪ್ರಾಯಕ್ಕೂ ಮನ್ನಣೆ ಕೊಡುತ್ತದೆ. ಜಿಎಸ್‌ಟಿ ದಿನ ಕಳೆದಂತೆ ಸರಳ, ಪಾರದರ್ಶಕ ಮತ್ತು ತೆರಿಗೆದಾರ ಸ್ನೇಹಿಯಾಗುತ್ತಿರುವುದು ಒಳ್ಳೆಯದು. ಉದ್ಯಮಿಗಳು ಮತ್ತು ವ್ಯಾಪಾರಿಗಳು ಸಹಕರಿಸುತ್ತಿದ್ದು, ತಮ್ಮ ಅಹವಾಲುಗಳನ್ನು ಕೌನ್ಸಿಲ್ ಮುಂದಿಟ್ಟು ಸೂಕ್ತ ಪರಿಹಾರ ಪಡೆಯುತ್ತಿದ್ದಾರೆ.

ಈವರೆಗಿನ ಅನುಭವದಿಂದ ತೆರಿಗೆ ಮುಕ್ತ ಮತ್ತು ನಾಲ್ಕು ದರಗಳಲ್ಲಿಯ (ಶೇ.5, 12, 18 ಮತ್ತು 28) ಪಟ್ಟಿಗಳಲ್ಲಿರುವ ಉತ್ಪನ್ನ ಮತ್ತು ಸೇವೆಗಳ ಸಂಖ್ಯೆಗಳನ್ನು ಬದಲಾಯಿಸಲಾಗಿದೆ. ಪಟ್ಟಿಯಲ್ಲಿ ತೀರಾ ಕಡಿಮೆ (ಅತಿ ಐಷಾರಾಮಿ ಮತ್ತು ‘ಪಾಪಿ’ ಉತ್ಪನ್ನವೆನ್ನಬಹುದಾದ ತಂಬಾಕು ಮುಂತಾದವು) ಸರಕು ಮತ್ತು ಸೇವೆಗಳು ಉಳಿದಿವೆ. ಆರಂಭದಲ್ಲಿ 229 ಸೇವೆ, ಸರಕುಗಳಿದ್ದು ಈಗ ಕೇವಲ 37 ಉಳಿದಿವೆ. ಬದಲಾವಣೆ ಮುಂದುವರಿಯುವುದು

ತೆರಿಗೆ ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಕೆಯಿಂದ ಸರಳವಾಗುವುದಲ್ಲದೆ ತೆರಿಗೆ ಸಂಗ್ರಹವೂ ಹೆಚ್ಚಿದೆ. ಇ-ಇನ್ವಾಯ್ಸಿಂಗ್ ಮತ್ತು ಇ-ವೇ ಬಿಲ್‌ಗಳು ಜಾರಿಯಾದದ್ದರಿಂದ ತೆರಿಗೆ ತಪ್ಪಿಸುವುದು ಕಡಿಮೆಯಾಗಿದೆ. ಆನ್‌ಲೈನ್ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮತ್ತು ‘ಫೇಸ್‌ಲೆಸ್’ ಪರಿಶೀಲನೆಗಳಿಂದ (assessments) ತೆರಿಗೆದಾರರಿಗೆ ಕಿರುಕುಳವಾಗುವುದು ಮತ್ತು ಭ್ರಷ್ಟಾಚಾರ ನಿಂತಿವೆ. ಇದರಿಂದ ತೆರಿಗೆ ವಿನಿಮಯ ಪಾಲನೆ ಹೆಚ್ಚಾಗಿರುವುದು, ವಿಶೇಷವಾಗಿ ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆ ಹಾಗೂ ವ್ಯವಹಾರ ಮಾಡುವವರಿಗೆ ಅನುಕೂಲವಾಗಿರುವುದು ಕಂಡುಬಂದಿದೆ.

ಕಾಂಪೋಸಿಶನ್ ಜಿಎಸ್‌ಟಿ ಕಟ್ಟಬೇಕಾಗಿರುವ ಸಣ್ಣ ವ್ಯವಹಾರಸ್ತರ ಟರ್ನ್ ಓವರ್ ಮಿತಿಯನ್ನು ಹೆಚ್ಚಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತೆರಿಗೆದಾರರು ತೆರಿಗೆ ವ್ಯಾಪ್ತಿಗೆ ಬಂದಿದ್ದಾರೆ. ಇದರಿಂದ ಅಸಂಘಟಿತ ವಲಯದಲ್ಲಿದ್ದವರು ಸಂಘಟಿತ ವಲಯಕ್ಕೆ ಬಂದು ಇತರೆ ತೆರಿಗೆಗಳ ಸಂಗ್ರಹವೂ ಹೆಚ್ಚಾಗುವಂತಾಗಿದೆ.

ಅವಶ್ಯವಿರುವ ಸುಧಾರಣೆಗಳು

ಅತ್ಯಂತ ತುರ್ತಾಗಿ ಬೇಕಾಗಿರುವ ಸುಧಾರಣೆ ಎಂದರೆ ಜಿಎಸ್‌ಟಿ ನ್ಯಾಯಾಧೀಕರಣಗಳನ್ನು (tribunals) ಅಸ್ತಿತ್ವಕ್ಕೆ ತಂದು ವ್ಯಾಜ್ಯಗಳನ್ನು ಬೇಗನೆ ವಿಲೇವಾರಿ ಮಾಡಲು ಅನುವು ಮಾಡಿಕೊಡುವುದು. ಈ ದಿಕ್ಕಿನಲ್ಲಿ ಚಿಂತನೆ ನಡೆಯುತ್ತಿದ್ದರೂ ಕಾರ್ಯರೂಪಕ್ಕೆ ಬರಬೇಕಾಗಿದೆ. ಅಲ್ಲದೆ ತೆರಿಗೆದಾರರ ದೂರುಗಳನ್ನು ಆಲಿಸಿ ಪರಿಹಾರ ಒದಗಿಸಲು ಒಂಬುಡ್ಸ್‌ಮನ್ (ombudsman ) ವ್ಯವಸ್ಥೆ ಅಸ್ತಿತ್ವಕ್ಕೆ ತರಬೇಕೆಂಬುದು ತಜ್ಞರ ಅಭಿಪ್ರಾಯವಾಗಿದೆ. ಟ್ರಿಬ್ಯುನಲ್‌ಗಳು ಬೇಗ ಅಸ್ತಿತ್ವಕ್ಕೆ ಬಂದರೆ ಒಳ್ಳೆಯದು.

ಈಗ ನಾಲ್ಕು ತೆರಿಗೆ ದರಗಳಿದ್ದು ಇವುಗಳನ್ನು ಮೂರಕ್ಕೆ ಇಳಿಸಬೇಕು ಎಂಬ ವಾದ ಹಳೆಯದು. ಸಾಧಕ ಬಾಧಕಗಳನ್ನು ಪರಿಶೀಲಿಸಿ, ಶೇ.12 ಮತ್ತು 18ರ ಬದಲಾಗಿ ಶೇ.14, 15 ಮತ್ತು 16 ಇವುಗಳಲ್ಲಿ ಯಾವುದಾದರೂ ಒಂದನ್ನು ಮಧ್ಯಮ ದರವೆಂದು ನಿರ್ಧರಿಸಬೇಕು. ಇದರಿಂದ ತೆರಿಗೆದಾರರಲ್ಲದೆ ಆಡಳಿತಾತ್ಮಕವಾಗಿಯೂ ಅನುಕೂಲವಾಗುತ್ತದೆ.

ಮೊದಲು ಐಷಾರಾಮಿ ಎನ್ನಲಾಗುತ್ತಿದ್ದ ಹಲವು ವಸ್ತು ಮತ್ತು ಸೇವೆಗಳು ಈಗ ಸಾಮಾನ್ಯ ಜನರಿಗೂ ಅನಿವಾರ್ಯವಾಗಿರುವ ಅವಶ್ಯಕತೆಗಳಾಗಿವೆ. ಉದಾಹರಣೆಗೆ ದ್ವಿಚಕ್ರ ವಾಹನಗಳು. ಅದರಲ್ಲಿಯೂ ಮೊಪೆಡ್‌ಗಳು ದುಡಿಮೆದಾರರಿಗೆ ವೃತ್ತಿಯ ಅವಶ್ಯಕತೆಗಳಾಗಿವೆ. ಇಂತಹ ಹಲವು ವಸ್ತು, ಸೇವೆಗಳನ್ನು ಪಟ್ಟಿ ಮಾಡಬಹುದು. ಕೌನ್ಸಿಲ್ ಇಂಥವುಗಳನ್ನು ಪರಿಶೀಲಿಸಿ ಹೆಚ್ಚಿನ ದರದಿಂದ ಕಡಿಮೆ ದರಕ್ಕೆ ಇಳಿಸಬೇಕು. ಮಕ್ಕಳು ಕಲಿಕೆಯಲ್ಲಿ ಬಳಸುವ ಇರೇಜರ್, ಪೆನ್ಸಿಲ್ ಶಾರ್ಪ್‌ನರ್‌ನಂತಹ ಸಣ್ಣ ಉತ್ಪನ್ನಗಳನ್ನು ಹೆಚ್ಚಿನ ದರದಲ್ಲಿ ಸೇರಿಸಿದ್ದರಿಂದ ಬಡವರ ಮಕ್ಕಳಿಗೆ ತೊಂದರೆಯಾಗುತ್ತದೆ. ಇವುಗಳನ್ನು ಸಾಧ್ಯವಾದರೆ ತೆರಿಗೆ ಮುಕ್ತ ಪಟ್ಟಿಗೆ ಸೇರಿಸಬೇಕು.

ಕೆಲವು ಉತ್ಪನ್ನಗಳು ಕಡಿಮೆ ದರದ ಪಟ್ಟಿಯಲ್ಲಿದ್ದು, ಅವುಗಳ ಬಿಡಿ ಭಾಗಗಳು ಹೆಚ್ಚಿನ ದರದ ಪಟ್ಟಿಯಲ್ಲಿವೆ. ಇದೇ ರೀತಿ ಇದಕ್ಕೆ ವಿರುದ್ಧ ಸ್ಥಿತಿಯೂ ಇದೆ. ಇದನ್ನು ಸರಿಪಡಿಸಿ ಗ್ರಾಹಕ ಮತ್ತು ತೆರಿಗೆದಾರ ಸ್ನೇಹಿಯಾಗಿ ಮಾಡಬೇಕು.

ಈಗ ಪೆಟ್ರೋಲಿಯಂ ಉತ್ಪನ್ನಗಳು, ಮಾದಕ ಪೇಯಗಳು (ರಾಜ್ಯ ಅಬಕಾರಿ) ಮತ್ತು ಇತರ ಕೆಲವು ಸರಕು, ಸೇವೆಗಳು ಜಿಎಸ್‌ಟಿಯಿಂದ ಹೊರಗಿರುತ್ತದೆ. ಅವುಗಳನ್ನೂ ನಿಧಾನವಾಗಿ ಒಳಗೆ ಸೇರಿಸಬೇಕು.

ಒಂದು ಮಾತು : ಸುಧಾರಣೆ ಮತ್ತು ಬದಲಾವಣೆಗಳು ನಿರಂತರ. ಆದರೆ ಅವು ಅರ್ಥವ್ಯವಸ್ಥೆ, ಸಮಾಜ ಮತ್ತು ಪರಿಸರಕ್ಕೆ ಅನುಕೂಲವಾಗುವಂತೆ ಇರಬೇಕು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ