ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್ ತಾರೆ ಹಾಗೂ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯಸೇನ್ ಅವರು ಕೆನಾಡ ಓಪನ್ ಮುಡಿಗೇರಿಸಿಕೊಂಡಿದ್ದಾರೆ. ಕೆನಡಾ ಓಪನ್ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಶಿ ಫೆಂಗ್ ವಿರುದ್ಧ 21-18 ಹಾಗೂ 22-20 ಅಂತರದಲ್ಲಿ ನೇರ ಗೇಮ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿದರು. ಇದು ಲಕ್ಷ್ಯಸೇನ್ ಅವರ ಎರಡನೇ ಬಿಡಬ್ಲ್ಯುಎಫ್ ಸೂಪರ್ 500 ಪ್ರಶಸ್ತಿಯಾಗಿದೆ.
ವಿಶ್ವ ಶ್ರೇಯಾಂಕದಲ್ಲಿ 19ನೇ ಸ್ಥಾನದಲ್ಲಿರುವ ಲಕ್ಷ್ಯಸೇನ್ ವಿಶ್ವದ 10ನೇ ಸ್ಥಾನದಲ್ಲಿರುವ ಶಿ ಫೆಂಗ್ ವಿರುದ್ಧ ಅಸಾಧಾರಣ ಪ್ರದರ್ಶನ ತೋರಿದರು. ಇದರ ಫಲವಾಗಿ ಕೆನಡಾ ಓಪನ್ ಪ್ರಶಸ್ತಿ ಗೆದ್ದುಕೊಂಡರು. ಈ ಪಂದ್ಯವನ್ನು ಗೆಲ್ಲುವ ಮೂಲಕ ಅವರು ತಮ್ಮ ದಾಖಲೆಯನ್ನು 4-2 ರಿಂದ 5-2ರೊಂದಿಗೆ ಉತ್ತಮ ಪಡಿಸಿಕೊಂಡರು.
Congratulations to the talented @lakshya_sen on his outstanding victory at the Canada Open 2023!
His triumph is a testament to his tenacity and determination. It also fills our nation with immense pride. My best wishes to him for his upcoming endeavours. pic.twitter.com/DqCDmNSbhk
— Narendra Modi (@narendramodi) July 10, 2023
ಕೆನಾಡ ಓಪನ್ ಫೈನಲ್ ಪಂದ್ಯಕ್ಕೂ ಮುನ್ನ ಶಿ ಫೆಂಗ್ ಅವರನ್ನು ಆರು ಬಾರಿ ಎದುರಿಸಿದ್ದ ಲಕ್ಷ್ಯಸೇನ್ 4 ಬಾರಿ ಗೆದ್ದಿದ್ದರು. ಈ ಪಂದ್ಯದ ಗೆಲುವಿನೊಂದಿಗೆ ತಮ್ಮ ಮುನ್ನಡೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಪ್ರಸಕ್ತ ವರ್ಷದಲ್ಲಿ21ರ ಹರೆಯದ ಲಕ್ಷ್ಯ ಸೇನ್‌ಗೆ ಇದು ಮೊದಲ ಪ್ರಶಸ್ತಿ ಎಂಬುದು ಗಮನಾರ್ಹ ಸಂಗತಿ.
2022ರ ಜನವರಿಯಲ್ಲಿ ಇಂಡಿಯಾ ಓಪನ್ ಗೆದ್ದ ನಂತರ ಲಕ್ಷ್ಯಸೇನ್‌ಗೆ ಇದು ಎರಡನೇ ಬಿಡಬ್ಲ್ಯುಎಫ್ ವರ್ಲ್ಡ್ ಟೂರ್ ಪ್ರಶಸ್ತಿಯಾಗಿದೆ. ತೀವ್ರ ಒತ್ತಡದಲ್ಲೂ ಲಕ್ಷ್ಯಸೇನ್ ಅದ್ಭುತ ಪ್ರದರ್ಶನ ತೋರಿದ್ದಾರೆ. ಫೈನಲ್‌ನಲ್ಲಿ ಅಸಾಮಾನ್ಯ ಪ್ರದರ್ಶನ ತೋರಿ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ.
ಈ ಟೂರ್ನಿಯಲ್ಲಿ ಲಕ್ಷ್ಯಸೇನ್ ಅದ್ಭುತ ಆಟದ ಶೈಲಿಯನ್ನು ಪ್ರದರ್ಶಿಸಿದರು. ನಾಲ್ಕನೇ ಶ್ರೇಯಾಂಕದ ಆಟಗಾರ ಕುನ್ಲಾವುಡ್ ವಿಟಿಡ್ಸರ್ನ್ ಅವರನ್ನು ಸೋಲಿಸುವ ಮೂಲಕ ಲಕ್ಷ್ಯಸೇನ್ ಟೂರ್ನಿಯಲ್ಲಿ ಶುಭಾರಂಭ ಕಂಡಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ತಮಗಿಂತ ಮೇಲಿನ ಶ್ರೇಯಾಂಕದ ಜಪಾನ್‌ನ ನಿಶಿಮೊಟೊ ಅವರನ್ನು ಸೋಲಿಸಿದರು. ಅವರು ಕೇವಲ 44 ನಿಮಿಷಗಳಲ್ಲಿ 21-17, 21-14 ನೇರ ಗೇಮ್‌ಗಳಿಂದ ಜಪಾನ್ ಆಟಗಾರನನ್ನು ಮಣಿಸಿದ್ದರು.
ಸೆಮಿಫೈನಲ್‌ನಲ್ಲಿ ಪಿವಿ ಸಿಂಧೂಗೆ ಸೋಲು
ಇನ್ನು ಒಲಿಂಪಿಕ್ಸ್ ಪದಕ ವಿಜೇತ ಹಾಗೂ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧೂ ಅವರು ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕನೆ ಯಮಗುಚಿ ವಿರುದ್ದ 14-21 ಹಾಗೂ 15-21 ನೇರ ಗೇಮ್‌ಗಳಿಂದ ಸೋತಿದ್ದರು. ಆ ಮೂಲಕ ನಾಲ್ಕರ ಘಟ್ಟದಲ್ಲಿಯೇ ತಮ್ಮ ಅಭಿಯಾನವನ್ನು ಮುಗಿಸಿ ಹೊರಬಂದರು.





