Mysore
23
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಸದನ ಕಲಾಪದ 2ನೇ ದಿನವೂ ವಿರೋಧ ಪಕ್ಷದ ನಾಯಕನಿಲ್ಲ: ಕಾಂಗ್ರೆಸ್‌ ವ್ಯಂಗ್ಯ

ಬೆಂಗಳೂರು: ಅರುಣ್ ಸಿಂಗ್, ಜೆ ಪಿ ನಡ್ಡಾ, ಅಮಿತ್ ಶಾ ಎಲ್ಲಿ ಹೋದರು? 2ನೇ ದಿನವೂ ವಿರೋಧ ಪಕ್ಷದ ನಾಯಕ ಸಿಗಲಿಲ್ಲವೇ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ) ವ್ಯಂಗ್ಯವಾಡಿದೆ.

ರಾಜ್ಯ ವಿಧಾನಮಂಡಲ ಅಧಿವೇಶನ  ಆರಂಭವಾಗಿದೆ. ಮಂಗಳವಾರ ಎರಡನೇ ದಿನ ಅಧಿವೇಶನ ನಡೆದಿದೆ. ಆದರೆ, ವಿರೋಧ ಪಕ್ಷದ ಸ್ಥಾನದಲ್ಲಿರುವ ಬಿಜೆಪಿಯ ನಾಯಕ ಯಾರು ಎಂಬದು ಆಯ್ಕೆಯಾಗಿಲ್ಲ. ಈ ಬಗ್ಗೆ ಕಾಂಗ್ರೆಸ್‌ ಟ್ವೀಟ್‌ ಮಾಡಿ ಬಿಜೆಪಿಯ ಕಾಲೆಳೆದಿದೆ. ಚುನಾವಣೆ ಸಂದರ್ಭದಲ್ಲಿ ಕರ್ನಾಟಕದಲ್ಲಿಯೇ ಬೀಡು ಬಿಟ್ಟಿದ್ದ ಬಿಜೆಪಿ ನಾಯಕರು ಈ ಕರ್ನಾಟಕದ ಕಡೆ ಕ್ಯಾರೇ ಎನ್ನುತ್ತಿಲ್ಲ ಎಂದು ಕಾಂಗ್ರೆಸ್‌ ಲೇವಡಿ ಮಾಡಿದೆ.

ಕಾಂಗ್ರೆಸ್‌ ಟ್ವೀಟ್‌ನಲ್ಲಿ ಏನಿದೆ?: ಮಂಗಳವಾರ ಸಂಜೆ ಟ್ವೀಟ್‌ ಮಾಡಿರುವ ಕೆಪಿಸಿಸಿ, ” ಸದನ ಕಲಾಪದ 2ನೇ ದಿನವೂ ವಿರೋಧ ಪಕ್ಷದ ನಾಯಕನಿಲ್ಲ. ಎಲ್ಲಿ ಹೋದರು ಉಸ್ತುವಾರಿ ಅರುಣ್ ಸಿಂಗ್? ಎಲ್ಲಿ ಹೋದರು ಜೆ ಪಿ ನಡ್ಡಾ? ಎಲ್ಲಿ ಹೋದರು ಅಮಿತ್ ಶಾ? ಚುನಾವಣೆಗೆ ಕರ್ನಾಟಕದಲ್ಲೇ ಬಿಡಾರ ಹೂಡಿದ್ದ ಬಿಜೆಪಿ ನಾಯಕರು ಈಗ ರಾಜ್ಯ ಬಿಜೆಪಿಗರನ್ನು ಕ್ಯಾರೆ ಎನ್ನುತ್ತಿಲ್ಲವೇ ಕರ್ನಾಟಕ ಬಿಜೆಪಿ? ಎಂದು ಟ್ವೀಟ್‌ ಮಾಡಿದ್ದಾರೆ.

ವಿರೋಧಿ ನಾಯಕರನ್ನು ಹುಡುಕುತ್ತಿದ್ದಾರೆಯೇ?: ಮುಂದುವರೆದು, ” ಟ್ವೀಟ್‌ನಲ್ಲಿ ವಿರೋಧ ಪಕ್ಷದ ನಾಯಕನನ್ನು ಹುಡುಕುವ ಬದಲು ಪಕ್ಷದಲ್ಲಿ ತಮ್ಮ ವಿರೋಧಿ ನಾಯಕನನ್ನು ಹುಡುಕುತ್ತಿದ್ದಾರೆ ಬಿಜೆಪಿಗರು! ” ಎಂದು ಟ್ವೀಟ್‌ ಮಾಡಿದೆ. ಈ ಮೂಲಕ ಬಿಜೆಪಿ ಬಂಡಾಯ ನಾಯಕರಿಗೆ ನೋಟಿಸ್‌ ನೀಡುತ್ತಿರುವುದರ ಕುರಿತು ವ್ಯಂಗ್ಯವಾಡಿದೆ.

ಪ್ರತಿ ಪಕ್ಷದ ನಾಯಕನ ಕುರ್ಚಿ ಅಕ್ಕಪಕ್ಕ ಬೊಮ್ಮಾಯಿ ಅಶೋಕ್‌: ರಾಜ್ಯ ವಿಧಾನಮಂಡಲದ ಮೊದಲ ಜಂಟಿ ಅಧಿವೇಶನದಲ್ಲಿ ಮಂಗಳವಾರವೂ ವಿಧಾನಸಭೆ ಪ್ರತಿಪಕ್ಷ ನಾಯಕ ಇಲ್ಲದೆ ಖಾಲಿ ಕುರ್ಚಿ ಉಳಿದಿತ್ತು. ನೂತನ ಕಾಂಗ್ರೆಸ್‌ ಸರಕಾರ ರಚನೆಯಾಗಿ ಆರು ವಾರಗಳು ಕಳೆದಿದ್ದು, ಬಿಜೆಪಿಯು ತನ್ನ ಶಾಸಕಾಂಗ ಪಕ್ಷದ ನಾಯಕನ ಅಯ್ಕೆಯನ್ನು ಈವರೆಗೂ ಘೋಷಿಸಿಲ್ಲ. ಹಾಗಾಗಿ, 16ನೇ ವಿಧಾನಸಭೆಯ ಮೊದಲ ಅಧಿವೇಶನ ಪ್ರತಿಪಕ್ಷ ನಾಯಕ ಇಲ್ಲದೆ ಆರಂಭವಾಯಿತು. ಖಾಲಿ ಇದ್ದ ಪ್ರತಿಪಕ್ಷ ನಾಯಕನ ಕುರ್ಚಿಯ ಪಕ್ಕದ ಆಸನದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರ್‌. ಅಶೋಕ್‌ ಕುಳಿತಿದ್ದರು.

ಸಂಸದೀಯ ಸಚಿವ ಅಸಮಾಧಾನ: ಪ್ರತಿಪಕ್ಷ ನಾಯಕ ಇಲ್ಲದ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ್‌, ‘‘ಸಂಸದೀಯ ವ್ಯವಸ್ಥೆಯಲ್ಲಿ ಪ್ರತಿಪಕ್ಷ ನಾಯಕ ಸ್ಥಾನ ಮಹತ್ವವಾದುದು. ಈ ಸ್ಥಾನ ಖಾಲಿ ಉಳಿದಿರುವುದರಿಂದ ಸದನದ ಘನತೆಗೆ ಕುಂದುಂಟಾಗಿದೆ,’’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

66 ಶಾಸಕರಲ್ಲಿ ಅರ್ಹರಿಲ್ಲವೇ?: ‘‘ವಿಧಾನಸಭೆ ಚುನಾವಣೆ ಸೋಲಿನ ಹತಾಶೆಯಲ್ಲಿರುವ ಬಿಜೆಪಿಗೆ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲೂ ಆಸಕ್ತಿ ಇಲ್ಲ. ಬಿಜೆಪಿಯ 66 ಶಾಸಕರಲ್ಲಿ ಪ್ರತಿಪಕ್ಷ ನಾಯಕರಾಗುವ ಅರ್ಹತೆ ಮತ್ತು ಯೋಗ್ಯತೆ ಯಾರೊಬ್ಬರಿಗೂ ಇಲ್ಲವೇ?,’’ ಎಂದು ಸೋಮವಾರ ಕಾಂಗ್ರೆಸ್‌ ಟ್ವಿಟರ್‌ನಲ್ಲಿ ವ್ಯಂಗ್ಯವಾಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ