ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ರನ್ ಹೊಳೆಯನ್ನೇ ಹರಿಸುವ ಮೂಲಕ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತಿನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಆಟಗಾರ ಕೂಡ ಆಗಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಅವರ ನಿವ್ವಳ ಮೌಲ್ಯವು 1000 ಕೋಟಿ ರೂ.ಗಳ ಗಡಿ ದಾಟಿದೆ. ಅಷ್ಟೇ ಅಲ್ಲದೆ ಕಿಂಗ್ ಕೊಹ್ಲಿ ತಮ್ಮ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್ (ಪ್ರಮೋಷನಲ್) ಒಂದಕ್ಕೆ 9 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬುದು ಬೆಳಕಿಗೆ ಬಂದಿದೆ.
ಬಿಸಿಸಿಐ ನೀಡುವ ವೇತನ ವರ್ಷಕ್ಕೆ 7 ಕೋಟಿ ರೂ ಮಾತ್ರ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡಿರುವ ಎ+ ಗ್ರೇಡ್ ಒಪ್ಪಂದ ಪ್ರಕಾರ ವಿರಾಟ್ ಕೊಹ್ಲಿ ವರ್ಷಕ್ಕೆ 7 ಕೋಟಿ ರೂ. ವೇತನ ಪಡೆಯುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ 15 ಕೋಟಿ ರೂ. ಸಂಭಾವನೆ ನೀಡುತ್ತಿದೆ. ಜೊತೆಗೆ ಪ್ರತಿ ಪಂದ್ಯಗಳಿಗೆ ಲಭ್ಯವಾಗು ಮ್ಯಾಚ್ ಫೀ ಕೂಡ ಸೇರಿಕೊಳ್ಳುತ್ತದೆ. ಇದರ ಜೊತೆಗೆ ತಮ್ಮ ಜನಪ್ರಿಯತೆಯ ಸಂಪೂರ್ಣ ಲಾಭ ತೆಗೆದುಕೊಳ್ಳುತ್ತಿರುವ ಕೊಹ್ಲಿ, ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್ ಒಂದರಕ್ಕೆ 9 ಕೋಟಿ ರೂ. (ನಿಖರವಾಗಿ 8.9 ಕೋಟಿ) ತೆಗೆದುಕೊಳ್ಳುತ್ತಾರೆ. ಟ್ವಿಟರ್ ಪೋಸ್ಟ್ ಒಂದಕ್ಕೆ 2.5 ಕೋಟಿ ರೂ. ಪಡೆಯುತ್ತಾರೆ.
ಕೋಟ್ಯಧಿಪತಿ ಆಗಿರುವ ವಿರಾಟ್ ಕೊಹ್ಲಿ, ತಮ್ಮಲ್ಲಿನ ಸಂಪತ್ತನ್ನು ವಿವಿಧೆಡೆ ಹೂಡಿಕೆ ಕೂಡ ಮಾಡಿದ್ದಾರೆ. ವಿವಿಧ ಸ್ಟಾರ್ಟ್‌ಅಪ್‌ಗಳಿಗೂ ಹಣಕಾಸಿನ ಬೆಂಬಲ ನೀಡಿದ್ದಾರೆ. 34 ವರ್ಷದ ಅನುಭವಿ ಕ್ರಿಕೆಟಿಗ ಈವರೆಗೆ 8 ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಸ್ಟಾಕ್ ಗ್ರೋ ವರದಿ ಮಾಡಿದೆ. ಜೊತೆಗೆ 18ಕ್ಕೂ ಹೆಚ್ಚು ಬ್ರಾಂಡ್‌ಗಳ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಸಲುವಾಗಿ ಜಾಹೀರಾತುಗಳಲ್ಲಿ ಪಾಲ್ಗೊಳ್ಳುವುದಾದರೆ ಪ್ರತಿ ದಿನಕ್ಕೆ 7.5 ಕೋಟಿ ರೂ.ಗಳಿಂದ 10 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಾರೆ.
ಎರಡು ಪ್ರಮುಖ ಆಸ್ತಿಗಳನ್ನು ಹೊಂದಿದ್ದಾರೆ
ವಿರಾಟ್ ಕೊಹ್ಲಿ, ಮುಂಬೈ ಮಹಾನಗರಿ ಮತ್ತು ದಿಲ್ಲಿಯ ಗುರುಗ್ರಾಮದಲ್ಲಿ ಎರಡು ಆಸ್ತಿ ಹೊಂದಿದ್ದಾರೆ. ಈ ಆಸ್ತಿಯ ಮೌಲ್ಯ 100 ಕೋಟಿ ರೂ.ಗಳಿಗೂ ಅಧಿಕವಾಗಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್ಸಿ ಬಿಟ್ಟಿದ್ದರೂ ಕೂಡ ವಿರಾಟ್ ಕೊಹ್ಲಿ ಅವರ ಬ್ರಾಂಡ್ ಮೌಲ್ಯಕ್ಕೆ ಯಾವುದೇ ಹಾನಿಯಾಗಿಲ್ಲ.