ಬೆಂಗಳೂರು : ವಿವಿಧ ಅಭಿವೃದ್ದಿ ಕಾರ್ಯಕ್ರಮಗಳ ಅಡಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿ ಕಾಮಗಾರಿ ನಡೆಸದೆ 250 ಕೋಟಿ ರೂ. ಮೊತ್ತದ ಬಿಲ್ ಪಾವತಿ ಮಾಡಿದ ಆರೋಪದ ಮೇಲೆ ಆರ್ಆರ್ ನಗರ ಬಿಬಿಎಂಪಿ ವ್ಯಾಪ್ತಿಯಲ್ಲಿ ಟಿವಿಸಿಸಿ ವಿಭಾಗದ ಮುಖ್ಯ ಇಂಜಿನಿಯರ್ ಸೇರಿದಂತೆ 11 ಮಂದಿಯನ್ನು ಅಮಾನತು ಮಾಡಲಾಗಿದೆ.
ಈ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಮುನಿರತ್ನ ಆಡಳಿತಾರೂಢ ಕಾಂಗ್ರೆಸ್, ವಿಶೇಷವಾಗಿ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಬೆಂಗಳೂರು ಗ್ರಾಮಾಂತರ ಸಂಸದ ಡಿ ಕೆ ಸುರೇಶ್ ನನ್ನ ವಿರುದ್ಧ ರಾಜಕೀಯ ದ್ವೇಷ ಸಾಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇದು ಕಾಂಗ್ರೆಸ್ ನಾಯಕರ ಸೇಡಿನ ರಾಜಕಾರಣವಲ್ಲದೆ ಬೇರೇನೂ ಅಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಬಿಬಿಎಂಪಿ ಅಧಿಕಾರಿಗಳ ಅಮಾನತು ಹಾಗೂ ನನ್ನ ಹೆಸರನ್ನು ವಿವಾದಕ್ಕೆ ಎಳೆದು ತರುತ್ತಿರುವುದು ಆರಂಭವಷ್ಟೇ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ದ್ವೇಷದ ರಾಜಕೀಯ ನಡೆಯಲಿದೆ ಎಂದಿದ್ದಾರೆ.ರಾಜ್ಯಪಾಲರಿಗೆ ದೂರು ಸಲ್ಲಿಸುವ ಅಥವಾ ಬಿಜೆಪಿ ಹೈಕಮಾಂಡ್‌ಗೆ ವಿಷಯ ಪ್ರಸ್ತಾಪಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುನಿರತ್ನ ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತೇನೆ ಎಂದು ಹೇಳಿದರು.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ನಂತರ ಆರ್ ಆರ್ ನಗರದಲ್ಲಿ ಡಿಕೆಶಿ ಸಹೋದರರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಾಲಹಳ್ಳಿ ಮಾಜಿ ಕಾರ್ಪೊರೇಟರ್ ಹಾಗೂ ಮುನಿರತ್ನ ಅವರ ಆಪ್ತ ಜಿ ಕೆ ವೆಂಕಟೇಶ್ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಶಾಸಕರನ್ನು ಸೋಲಿಸಿ ಕಾಂಗ್ರೆಸ್-ಜೆಡಿಎಸ್ ಆಡಳಿತವನ್ನು ಕೊನೆಗೊಳಿಸಿದ್ದರಿಂದ ಅವರು ಕೋಪಗೊಂಡಿದ್ದಾರೆ, ನನಗೆ ಜೀವ ಬೆದರಿಕೆ ಇರುವುದರಿಂದ ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿಗೆ ಪತ್ರ ಕಳುಹಿಸುತ್ತೇನೆ” ಎಂದು ಅವರು ಹೇಳಿದರು.